ಕೊರೋನ ಏರಿಕೆಯಾದ ದಿನದಿಂದ ಬಿಬಿಎಂಪಿ ಮೇಯರ್ ನಾಪತ್ತೆ: ವಿಪಕ್ಷ ಕಾಂಗ್ರೆಸ್

Update: 2020-07-06 12:38 GMT
ಗೌತಮ್ ಕುಮಾರ್

ಬೆಂಗಳೂರು, ಜು.6: ನಗರದಲ್ಲಿ ದಿನದಿಂದ ದಿನಕ್ಕೆ ಕೊರೋನ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದೆ. ಆದರೆ, ಸಾರ್ವಜನಿಕರ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಮೇಯರ್ ಗೌತಮ್ ಕುಮಾರ್ ಸುಳಿವೇ ಇಲ್ಲ ಎಂದು ವಿರೋಧ ಪಕ್ಷ ಕಾಂಗ್ರೆಸ್ ಆರೋಪಿಸಿದೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜೆಗಳ ಹಿತಾಸಕ್ತಿ ನೋಡಬೇಕಾಗಿರುವುದು ಪ್ರಥಮ ಪ್ರಜೆಯ ಆದ್ಯ ಕರ್ತವ್ಯ. ಮೇಯರ್ ಆಗಿ ಮಾಡಬೇಕಾದ ಕರ್ತವ್ಯ ಬಹಳಷ್ಟಿದೆ. ಆದರೆ, ನಗರದಲ್ಲಿ ಕೊರೋನ ಸೋಂಕು ಏರಿಕೆಯಾದ ದಿನದಿಂದ ಮೇಯರ್ ನಾಪತ್ತೆಯಾಗಿದ್ದಾರೆ.

ಸೋಂಕು ನಿಯಂತ್ರಿಸುವಲ್ಲಿ ಮುಂದಾಳತ್ವ ವಹಿಸಬೇಕಿದ್ದ ಅವರು, ಕೊರೋನ ನಿಯಂತ್ರಿಸುವ ದೃಷ್ಟಿಯಿಂದ ಯಾವುದೇ ಸಭೆಗಳನ್ನ ನಡೆಸಿಲ್ಲ. ಬೆಂಗಳೂರಿನ ಏರಿಯಾಗಳಿಗೆ ಭೇಟಿ ಕೊಟ್ಟು ಜನರ ಸಮಸ್ಯೆ ಆಲಿಸಿಲ್ಲ, ಇತ್ತ ಬಿಬಿಎಂಪಿ ಕಚೇರಿಯಲ್ಲೂ ಸುಳಿವೇ ಇಲ್ಲ ಎಂದು ದೂರಿದ್ದಾರೆ.

ಮಾಸಿಕ ಕೌನ್ಸಿಲ್ ಸಭೆ, ಸಚಿವರ ಸಭೆಯಲ್ಲಿ ಮುಖ ತೋರಿಸಿದರೆ ಮುಗೀತು, ಉಳಿದ ದಿನಗಳಲ್ಲಿ ಬಿಬಿಎಂಪಿ ಮೇಯರ್ ಕಾಣಸಿಗಲ್ಲ. ನಗರದಲ್ಲಿ ದಿನೇ ದಿನೇ ಸೋಂಕು ಹೆಚ್ಚಳವಾಗುತ್ತಿದೆ. ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ರೋಗಿಗಳು ಪರದಾಡುತ್ತಿದ್ದಾರೆ. ಶವ ಸಾಗಿಸಲು ವಾಹನಗಳ ಕೊರತೆ, ಸ್ಮಶಾನದ ಸಮಸ್ಯೆ ಇದೆ. ಅಧಿಕಾರಿಗಳನ್ನ ಗೈಡ್ ಮಾಡಿ ಆಡಳಿತ ನಡೆಸಬೇಕಿದ್ದ ಮೇಯರ್, ಜವಾಬ್ದಾರಿ ಮರೆತು ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News