ಕೊರೋನ ಪರೀಕ್ಷೆಗೆ ದುಬಾರಿ ಶುಲ್ಕ ನಿಗದಿ: ಎಎಬಿ ಬರೆದಿದ್ದ ಪತ್ರ ಆಧರಿಸಿ ಪಿಐಎಲ್ ದಾಖಲಿಸಿಕೊಳ್ಳಲು ಹೈಕೋರ್ಟ್ ಸೂಚನೆ

Update: 2020-07-06 14:49 GMT

ಬೆಂಗಳೂರು, ಜು.6: ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನ ಪರೀಕ್ಷೆ ಮತ್ತು ಚಿಕಿತ್ಸೆಗೆ ದುಬಾರಿ ಶುಲ್ಕ ನಿಗದಿ ಮಾಡಿರುವುದನ್ನು ಪ್ರಶ್ನಿಸಿ ಬೆಂಗಳೂರು ವಕೀಲರ ಸಂಘ(ಎಎಬಿ) ಬರೆದಿದ್ದ ಪತ್ರವನ್ನೇ ಪಿಐಎಲ್ ಆಗಿ ದಾಖಲಿಸಿಕೊಳ್ಳಲು ರಿಜಿಸ್ಟ್ರಾರ್ ಜನರಲ್‍ಗೆ ಹೈಕೋರ್ಟ್ ಸೂಚಿಸಿದೆ.

ಸರಕಾರ ಖಾಸಗಿ ಆಸ್ಪತ್ರೆಗಳಲ್ಲಿ ನಿಗದಿ ಮಾಡಿರುವ ಶುಲ್ಕ ಮಧ್ಯಮ ವರ್ಗದವರಿಗೆ ಭಾರೀ ಹೊರೆಯಾಗಲಿದೆ. ಸರಕಾರ ಸೂಚಿಸಿದವರಿಗೆ 8,500 ರಿಂದ 12,500 ರೂ.ಶುಲ್ಕವಿದೆ. ಖಾಸಗಿ ಆಸ್ಪತ್ರೆಗಳಿಗೆ ಅನುಕೂಲವಾಗುವಂತೆ ಈ ಶುಲ್ಕ ನೀತಿ ರೂಪಿಸಲಾಗಿದೆ. ಅಲ್ಲದೆ, ಅಧಿಕಾರಿಗಳು ಸೋಂಕಿತರನ್ನು ದಾಖಲಿಸಲು ಸೂಕ್ತ ಮಾನದಂಡ ರೂಪಿಸಿಲ್ಲ ಎಂದು ಎಎಬಿ ಅವರು ಪತ್ರದಲ್ಲಿ ತಿಳಿಸಿದ್ದರು.

ಲಾಕ್‍ಡೌನ್ ಜಾರಿ ವೇಳೆ ಪೂರ್ವಸಿದ್ಧತೆಯಲ್ಲಿ ರಾಜ್ಯ ಸರಕಾರ ಸಂಪೂರ್ಣವಾಗಿ ಎಡವಿದೆ. ಶೇ.50ರಷ್ಟು ಬೆಡ್ ಮೀಸಲಿಡುವ ಬಗ್ಗೆಯೂ ಸರಕಾರದಲ್ಲಿ ಗೊಂದಲವಿದೆ. ಇದರಿಂದ, ಕೊರೋನ ಸೋಂಕಿತ ಶ್ರೀಸಾಮಾನ್ಯರಿಗೆ ತುಂಬಾನೆ ತೊಂದರೆಯಾಗಲಿದೆ. ವಕೀಲರಿಗೂ ಸಹ ವಿಮೆ ಒದಗಿಸಲು ಕೇಂದ್ರ ಸರಕಾರಕ್ಕೆ ಸೂಚಿಸಬೇಕು ಎಂದು ಪತ್ರದಲ್ಲಿ ತಿಳಿಸಿದ್ದರು.

ನ್ಯಾಯಪೀಠವು, ಪತ್ರವನ್ನು ಆಧರಿಸಿ ಪಿಐಎಲ್ ದಾಖಲಿಸಿಕೊಳ್ಳಲು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್‍ಗೆ ಸೂಚಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News