ವಕ್ಫ್ ಮಂಡಳಿ ಅಧೀನದಲ್ಲಿರುವ ಕಟ್ಟಡಗಳು ಕೋವಿಡ್-19 ಸೋಂಕಿತರಿಗೆ ಮುಕ್ತ

Update: 2020-07-06 15:00 GMT

ಬೆಂಗಳೂರು, ಜು.6: ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷರು, ಸದಸ್ಯರು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನೊಳಗೊಂಡ ನಿಯೋಗವು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಜೂ.29ರಂದು ಭೇಟಿ ಮಾಡಿ ಮಾರಕ ಕೋವಿಡ್-19ರ ಸೋಂಕಿನ ಈ ಸಮಯದಲ್ಲಿ ವಕ್ಫ್ ಮಂಡಳಿಯು ತನ್ನ ಸಂಪೂರ್ಣ ಸಹಭಾಗಿತ್ವದೊಂದಿಗೆ ಹೆಮ್ಮಾರಿಯ ತಡೆಗೆ ಸದಾಕಾಲ ಸರಕಾರದ ಜೊತೆಗಿದೆ ಎಂದು ತಿಳಿಸಿತು.

ಈ ಸಂದರ್ಭದಲ್ಲಿ ವಕ್ಫ್ ಮಂಡಳಿಯ ಅಧೀನದಲ್ಲಿರುವ ವಕ್ಫ್ ಸಂಸ್ಥೆಗಳಲ್ಲಿರುವ ಶಾದಿ ಮಹಲ್, ಹಾಸ್ಟಲ್ ಮುಂತಾದ ಕಟ್ಟಡಗಳು ಕೋವಿಡ್-19 ಸೋಂಕಿತರಿಗೆ, ಆರೋಗ್ಯ ಕಾರ್ಯಕರ್ತರಿಗೆ ಕ್ವಾರಂಟೈನ್/ಐಸೋಲೇಷನ್ ಕೇಂದ್ರಗಳಿಗೆ ಮುಕ್ತವಾಗಿದ್ದು, ರಾಜ್ಯದಲ್ಲಿರುವ ಇಂತಹ ಎಲ್ಲ ಸ್ಥಳಗಳ ಮಾಹಿತಿಯನ್ನು ಮುಖ್ಯಮಂತ್ರಿಗಳಿಗೆ ನೀಡಿ, ಕೋವಿಡ್-19 ಸೋಂಕಿನ ಹರಡುವಿಕೆಯ ಈ ಗಂಭೀರ ಸಮಯದಲ್ಲಿ ಉಪಯೋಗಿಸಿಕೊಳ್ಳಲು ನಿಯೋಗವು ಮನವಿ ಮಾಡಿತು.

ಕರ್ಫ್ಯೂ ಅವಧಿ ಬದಲಾವಣೆಗೆ ಮನವಿ: ಮಾರಕ ಸೋಂಕಿನ ಹರಡುವಿಕೆಯ ತೀವ್ರತೆಯನ್ನು ತಡೆಯಲು ರಾಜ್ಯದಲ್ಲಿ ರಾತ್ರಿ 8 ಗಂಟೆಯಿಂದ ಮುಂಜಾನೆ 5 ಗಂಟೆಯವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿದ್ದು, ಈ ಸಮಯದಲ್ಲಿ ರಾತ್ರಿ 8 ಗಂಟೆಯಿಂದ 9 ಗಂಟೆಯ ನಡುವಿನ ಅಂತರದಲ್ಲಿ ರಾತ್ರಿ ವೇಳೆ ಇಶಾ ಪ್ರಾರ್ಥನೆಯನ್ನು ಕೈಗೊಳ್ಳಲು ಅನುಕೂಲವಾಗುವಂತೆ ಕರ್ಫ್ಯೂ ಅವಧಿಯನ್ನು ರಾತ್ರಿ 9ರಿಂದ ಬೆಳಗ್ಗೆ 5ಗಂಟೆಗೆ ಪರಿಷ್ಕರಿಸಿ ಆದೇಶಿಸಬೇಕೆಂದು ವಿನಂತಿಸಲಾಯಿತು.

ಖಾಲಿ ಇರುವ ಹುದ್ದೆಗಳ ಭರ್ತಿಗೆ ಮನವಿ: ರಾಜ್ಯದಲ್ಲಿರುವ ವಕ್ಫ್ ಸಂಸ್ಥೆಗಳು, ಆಸ್ತಿಗಳ ಮೇಲ್ವಿಚಾರಣೆ, ಆಡಳಿತ, ಅಭಿವೃದ್ಧಿಯ ಕಾರ್ಯಗಳನ್ನು ಹೊಂದಿದ್ದು ಇವುಗಳ ಅನುಷ್ಠಾನಕ್ಕಾಗಿ ಸರಕಾರದಿಂದ ಒಟ್ಟು 11 ಅಧಿಕಾರಿ ವೃಂದದ ಹುದ್ದೆಗಳನ್ನು ನಿಯೋಜನೆಯ ಮೂಲಕ ಭರ್ತಿ ಮಾಡಬೇಕಾಗಿದ್ದು, ಇವುಗಳಲ್ಲಿ ಖಾಲಿಯಾಗಿರುವ 10 ಅಧಿಕಾರಿ ವೃಂದದ ಹುದ್ದೆಗಳನ್ನು ಒಳಗೊಂಡಂತೆ ಸರಕಾರದಿಂದ ನಿಯೋಜನೆ ಮೂಲಕ ಹಾಗೂ ಗ್ರೂಫ್-ಸಿ ಮತ್ತು ಗ್ರೂಪ್-ಡಿ ವೃಂದದ ಒಟ್ಟು 138 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿ ಮಂಡಳಿಯ ಪರಿಣಾಮಕಾರಿ ಹಾಗೂ ಸುಗಮ ಆಡಳಿತಕ್ಕೆ ಅನುಕೂಲ ಮಾಡಿಕೊಡಬೇಕೆಂದು ಮುಖ್ಯಮಂತ್ರಿಗೆ ವಿನಂತಿಸಲಾಗಿದೆ.

ಈ ಸಂದರ್ಭದಲ್ಲಿ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಡಾ.ಮುಹಮ್ಮದ್ ಯೂಸುಫ್, ಸದಸ್ಯರಾದ ತನ್ವೀರ್ ಸೇಠ್, ಮೌಲಾನ ಎನ್.ಕೆ.ಎಮ್.ಶಾಫಿ ಸಅದಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಸ್ಲಾಹುದ್ದೀನ್ ಗದ್ಯಾಳ್ ಹಾಗೂ ಸರ್ವೆ ಅಧಿಕಾರಿ ಮುಜಿಬುಲ್ಲಾ ಝಫಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News