ಪೊಲೀಸರೇ ಗ್ಯಾಂಗ್ ಸ್ಟರ್ ವಿಕಾಸ್ ದುಬೆಗೆ ಸಹಾಯ ಮಾಡುತ್ತಿದ್ದಾರೆ ಎಂದಿದ್ದ ಪೊಲೀಸ್ ಅಧಿಕಾರಿಯ ಪತ್ರ ಬಹಿರಂಗ!

Update: 2020-07-07 08:08 GMT

ಕಾನ್ಪುರ್ : ಕುಖ್ಯಾತ ಗ್ಯಾಂಗ್ ಸ್ಟರ್ ವಿಕಾಸ್ ದುಬೆ ಮೇಲೆ ಕಳೆದ ಶುಕ್ರವಾರ ನಡೆದ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಹಾಗೂ ನಂತರ ಇತರ ಏಳು ಮಂದಿ ಪೊಲೀಸರೊಂದಿಗೆ ಹತ್ಯೆಗೀಡಾದ ಡಿವೈಎಸ್ಪಿ ದೇವೇಂದ್ರ ಕುಮಾರ್ ಮಿಶ್ರಾ  ಬರೆದಿದ್ದರೆನ್ನಲಾದ ಪತ್ರವನ್ನು ಉತ್ತರ ಪ್ರದೇಶ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಪತ್ರದಲ್ಲಿರುವ ವಿಚಾರಗಳು ನಿಜವಾಗಿದ್ದೇ ಆದಲ್ಲಿ ಪೊಲೀಸರು  ಆರೋಪಿಗೆ ಸಹಾಯ ಮಾಡಿದ್ದರೆಂಬುದಕ್ಕೆ ಅದು ದೊಡ್ಡ ಪುರಾವೆಯೊದಗಿಸುವ ಸಾಧ್ಯತೆಯಿದೆ.

ಪೊಲೀಸರ ಕಾರ್ಯಾಚರಣೆಯ ಕುರಿತಂತೆ ವಿಕಾಸ್ ದುಬೆಗೆ ಮುಂಚಿತವಾಗಿಯೇ ಇಲಾಖೆಯೊಳಗಿನ ಯಾರೋ ಮಾಹಿತಿ ನೀಡಿದ್ದಾರೆಂಬ ಗುಮಾನಿಯಿದೆ. ಘಟನೆ ನಡೆದಂದಿನಿಂದ ಆತ ತಲೆಮರೆಸಿಕೊಂಡಿದ್ದಾರೆ.

ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಪೊಲೀಸ್  ಅಧಿಕಾರಿ ಬರೆದಿದ್ದರೆನ್ನಲಾದ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದರೂ ಪೊಲೀಸ್ ದಾಖಲೆಗಳಲ್ಲಿ ಈ ಪತ್ರವಿಲ್ಲ. ಅದಕ್ಕಾಗಿ ಶೋಧ ನಡೆಸಲಾಗುತ್ತಿದೆ. ಮೃತ ಅಧಿಕಾರಿಯ ಕಚೇರಿ ಹಾಗೂ ಕಾನ್ಪುರ್ ಎಸ್‍ಎಸ್ಪಿ ಕಚೇರಿಯಲ್ಲೂ ಅದಕ್ಕಾಗಿ ಹುಡುಕಲಾಗಿದೆ ಎಂದು ಕಾನ್ಪುರ್ ಪೊಲೀಸ್ ಮುಖ್ಯಸ್ಥ ಅನಂತ್ ದಿಯೋ ತಿವಾರಿ  ಹೇಳಿದ್ದಾರೆ.

ಪೊಲೀಸರು, ಮುಖ್ಯವಾಗಿ ಈಗ ವಜಾಗೊಂಡಿರುವ ಚೌಬೇಯಪುರ್ ಪೊಲೀಸ್ ಠಾಣಾಧಿಕಾರಿ ವಿನಯ್ ತಿವಾರಿ ಅವರು ಆರೋಪಿಗೆ ಸಹಾಯ ಮಾಡುತ್ತಿರುವ ಕುರಿತಂತೆ ಹಾಗೂ ಪೊಲೀಸ್ ಕ್ರಮದಿಂದ ಆತನನ್ನು ರಕ್ಷಿಸುತ್ತಿದ್ದಾರೆಂದು ಆ ಪತ್ರದಲ್ಲಿ  ಮಿಶ್ರಾ ದೂರಿದ್ದರಲ್ಲದೆ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News