ಕೇರಳದಲ್ಲಿ ರಾಜಕೀಯ ಕೋಲಾಹಲವೆಬ್ಬಿಸಿದ 30 ಕೆಜಿ ಚಿನ್ನ ಕಳ್ಳಸಾಗಣಿಕೆ ಪ್ರಕರಣ; ಐಎಎಸ್ ಅಧಿಕಾರಿ ವಜಾ

Update: 2020-07-07 09:22 GMT

ತಿರುವನಂತಪುರಂ: ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಕಸ್ಟಮ್ಸ್ ಅಧಿಕಾರಿಗಳು `ಡಿಪ್ಲೋಮ್ಯಾಟಿಕ್ ಬ್ಯಾಗೇಜ್'ನಲ್ಲಿದ್ದ 30 ಕೆಜಿ  ಚಿನ್ನ ವಶಪಡಿಸಿಕೊಂಡ ಪ್ರಕರಣ ಕೇರಳ ರಾಜಕೀಯದಲ್ಲಿ ಕೋಲಾಹಲವನ್ನೇ ಸೃಷ್ಟಿಸಿದ್ದು, ವಿಪಕ್ಷ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ ಘಟನೆಯ ಸಿಬಿಐ ತನಿಖೆಗೆ ಆಗ್ರಹಿಸಿದ್ದಾರೆ.

ಪ್ರಕರಣದಲ್ಲಿ ಶಾಮಿಲಾಗಿರುವ ಐಎಎಸ್ ಅಧಿಕಾರಿಯೊಬ್ಬರನ್ನು  ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ಕಚೇರಿ ರಕ್ಷಿಸಲು ಯತ್ನಿಸುತ್ತಿದೆ ಎಂಬ ವಿಪಕ್ಷಗಳ ಆರೋಪಗಳ ಬೆನ್ನಲ್ಲೇ ಆ ಅಧಿಕಾರಿಯನ್ನು ವಜಾಗೊಳಿಸಲಾಗಿದೆ.

ಈ ಚಿನ್ನ ಕಳ್ಳಸಾಗಣಿಕೆ ಪ್ರಕರಣದಲ್ಲಿ ಶಾಮೀಲಾಗಿದ್ದಾರೆನ್ನಲಾದ ಕೇರಳ ರಾಜ್ಯ ಐಟಿ ಇನ್‍ಫ್ರಾಸ್ಟ್ರಕ್ಚರ್ ಲಿಮಿಟೆಡ್ ಇದರ ಆಪರೇಶನಲ್ ಮ್ಯಾನೇಜರ್ ಆಗಿರುವ ಸ್ವಪ್ನಾ ಸುರೇಶ್ ಎಂಬವರ ನೇಮಕಾತಿ ತಮ್ಮ ಗಮನಕ್ಕೆ ತಾರದೆ ನಡೆದಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರಲ್ಲದೆ, ಇಂತಹ ಕಳಂಕಿತ ಹಿನ್ನೆಲೆಯ ಜನರನ್ನು ತಮ್ಮ ಕಚೇರಿ ನೇಮಕಗೊಳಿಸುವುದು ಸಾಧ್ಯವಿಲ್ಲ ಎಂದಿದ್ದಾರೆ.

ಮುಖ್ಯಮಂತ್ರಿಯ ಕಾರ್ಯದರ್ಶಿ ಎಂ. ಶಿವಶಂಕರ್ ಹಾಗೂ ಸ್ವಪ್ನಾ ಸುರೇಶ್ ನಡುವಿನ ನಂಟು ಕುರಿತಂತೆ ವಿಪಕ್ಷಗಳಾದ ಯುಡಿಎಫ್ ಹಾಗೂ ಬಿಜೆಪಿ ಆರೋಪ ಹೊರಿಸುತ್ತಿವೆ. ಚಿನ್ನವನ್ನು ಅಧಿಕಾರಿಗಳು ವಶಪಡಿಸಿಕೊಂಡಂದಿನಿಂದ ಸ್ವಪ್ನಾ ಸುರೇಶ್ ತಲೆಮರೆಸಿಕೊಂಡಿದ್ದು ಆಕೆಯ ನೇಮಕಾತಿ ಕುರಿತು ಸಿಬಿಐ ತನಿಖೆ ನಡೆಸಬೇಕೆಂದು ಚೆನ್ನಿತ್ತಲ ಆಗ್ರಹಿಸಿದ್ದಾರೆ. ಆಕೆಯ ನೇಮಕಾತಿ ಹಾಗೂ ಆಕೆಗೆ ಸಿಎಂ ಕಚೇರಿ ಜತಗೆಗಿರುವ ನಂಟಿನ ಕುರಿತೂ  ತನಿಖೆ ನಡೆಸಬೇಕೆಂದು ಆಗ್ರಹಿಸಲಾಗಿದೆ. ಮುಖ್ಯಮಂತ್ರಿಯ ಕಾರ್ಯದರ್ಶಿ ಎಂ ಶಿವಶಂಕರ್ ಅವರೇ ಐಟಿ ಇಲಾಖೆಯ ಕಾರ್ಯದರ್ಶಿಯಾಗಿದ್ದಾರೆಂಬುದು ಇಲ್ಲಿ ಗಮನಾರ್ಹ ಅಂಶ.

ಸ್ವಪ್ನಾ ಸುರೇಶ್‍ ಗೆ ಸಹಾಯ ಮಾಡುವಂತೆ ಕೋರಿ ಸಿಎಂ ಕಚೇರಿಯಿಂದ ಕಸ್ಟಮ್ಸ್ ಅಧಿಕಾರಿಗಳಿಗೆ ಕರೆ ಹೋಗಿದೆ ಎಂಬುದನ್ನೂ ಪಿಣರಾಯಿ ವಿಜಯನ್ ನಿರಾಕರಿಸಿದ್ದಾರೆ.

ಚಿನ್ನ ಕಳ್ಳಸಾಗಣಿಕೆಯಲ್ಲಿ ಸ್ವಪ್ನಾ ಪಾತ್ರದ ಬಗ್ಗೆ ಶಂಕೆ ವ್ಯಕ್ತವಾಗುತ್ತಿದ್ದಂತೆಯೇ ಆಕೆಯನ್ನು ಕೆಎಸ್ ವೈಟಿಎಲ್ ನಿಂದ ವಜಾಗೊಳಿಸಲಾಗಿದೆ. ಐಟಿ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಮುನ್ನ ಆಕೆ ತಿರುವನಂತಪುರಂನಲ್ಲಿರುವ ಯುಎಇ ಕಾನ್ಸುಲೇಟ್‍ ನಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಕಾನ್ಸುಲೇಟ್‍ನ ಮಾಜಿ ಪಿಆರ್‍ಒ ಸರಿತ್ ಎಂಬಾತನ ಪರಿಚಯ ಆಕೆಗಾಗಿತ್ತೆನ್ನಲಾಗಿದೆ. ರಾಜತಾಂತ್ರಿಕ ರಕ್ಷಣೆಯನ್ನು ದುರುಪಯೋಗಪಡಿಸಿ ಚಿನ್ನ  ಕಳ್ಳಸಾಗಣಿಕೆಯಲ್ಲಿ ವಹಿಸಿದ್ದ ಪಾತ್ರದ ಕುರಿತು ತನಿಖೆಗಾಗಿ ಸರಿತ್ ಕಸ್ಟಮ್ಸ್ ಇಲಾಖೆಯ ಕಸ್ಟಡಿಯಲ್ಲಿದ್ದಾನೆ.

 ಸ್ವಪ್ನಾ ಎಐಎಸ್‍ಎಟಿಎಸ್‍ನಲ್ಲಿ ಕೆಲಸ ಮಾಡುತ್ತಿರುವ ವೇಳೆ ಏರ್ ಇಂಡಿಯಾ ಅಧಿಕಾರಿಯೊಬ್ಬರ ವಿರುದ್ಧ ಸುಳ್ಳು ದೂರು ದಾಖಲಿಸಿದ್ದಕ್ಕೆ ಕ್ರೈಂ ಬ್ರ್ಯಾಂಚ್ ತನಿಖೆ ಎದುರಿಸುತ್ತಿದ್ದಾಳೆ. ಹೀಗೆ  ತನಿಖೆ ಎದುರಿಸುತ್ತಿರುವವರನ್ನು ಪ್ರಮುಖ ಹುದ್ದೆಗೆ ಹೇಗೆ ನೇಮಕಗೊಳಿಸಲಾಯಿತು ಎಂದು ಚೆನ್ನಿತ್ತಲ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News