ಎಂನರೇಗಾ ಯೋಜನೆಯಡಿ ದಿನಗೂಲಿಗಳಾಗಿ ದುಡಿಯುತ್ತಿರುವ ಇಂಜಿನಿಯರ್, ಪದವೀಧರರು!

Update: 2020-07-07 15:16 GMT

ಭೋಪಾಲ, ಜು.7: ದೇಶದಲ್ಲಿ ಕೊರೋನ ವೈರಸ್ ಪಿಡುಗು ಹಾಗೂ ಇದರ ಕಾರಣದಿಂದ ಆರ್ಥಿಕ ಹಿಂಜರಿತದ ಪರಿಣಾಮ ಮಧ್ಯಪ್ರದೇಶದಲ್ಲಿ ಎಂನರೇಗಾ ಯೋಜನೆಯಡಿ ಇಂಜಿನಿಯರ್ ಮತ್ತು 15 ಪದವೀಧರರ ತಂಡವೊಂದು ದಿನಗೂಲಿಗಳಾಗಿ ಕಾರ್ಯ ನಿರ್ವಹಿಸುವ ಪರಿಸ್ಥಿತಿ ಬಂದಿದೆ ಎಂದು ವರದಿಯಾಗಿದೆ.

ಗ್ರಾಮೀಣ ಪ್ರದೇಶದ ಬಡವರಿಗೆ ಕೆಲಸ ಕಲ್ಪಿಸುವ ಉದ್ದೇಶದ ಎಂನರೇಗಾ (ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ) ಯೋಜನೆ ಈಗ ಮಧ್ಯಪ್ರದೇಶದ ಖರ್ಗೋನ್ ಗ್ರಾಮದ ಸಿವಿಲ್ ಇಂಜಿನಿಯರ್ ಸಚಿನ್ ಯಾದವ್ ಗೆ ಕೆಲಸ ಒದಗಿಸಿದೆ. ದಿನಕ್ಕೆ 8 ಗಂಟೆ ಕೆಲಸ ಮಾಡಿದರೆ 190 ರೂ. ಕೂಲಿ ಸಿಗುತ್ತದೆ. ಲಾಕ್ಡೌನ್ ಅವಧಿಯಲ್ಲಿ ಬೇರೆ ಕೆಲಸ ಮಾಡಲು ಅವಕಾಶವಿಲ್ಲದೆ ಅನಿವಾರ್ಯವಾಗಿ ಈ ಕೆಲಸ ಮಾಡಬೇಕಿದೆ. 2018-19ರಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿಯಲ್ಲಿ ತೇರ್ಗಡೆಯಾದ ಬಳಿಕ ಇಂದೋರ್ನಲ್ಲಿ ವಾಸ್ತವ್ಯವಿದ್ದು ಮಧ್ಯಪ್ರದೇಶ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆ ಬರೆದು ಜಿಲ್ಲಾಧಿಕಾರಿಯಾಗಬೇಕೆಂದು ಬಯಸಿದ್ದೆ. ಆದರೆ ಕೊರೋನದಿಂದ ಕೋಚಿಂಗ್ ಕ್ಲಾಸ್ ಮುಚ್ಚಿತು. ಈಗ ಹಳ್ಳಿಗೆ ಬಂದು ಎಂನರೇಗಾದಡಿ ಕೆಲಸ ಮಾಡುತ್ತಾ ಪರೀಕ್ಷೆಗೆ ಅಭ್ಯಾಸ ಮುಂದುವರಿಸಿದ್ದೇನೆ. ಯಾವುದೇ ಕೆಲಸವೂ ಸಣ್ಣದಲ್ಲ ಎಂಬ ಅನುಭವವನ್ನು ನನಗೆ ಲಾಕ್ಡೌನ್ ಕಲಿಸಿದೆ ಎಂದು ಯಾದವ್ ಹೇಳಿದ್ದಾರೆ.

 ಇದೇ ಪ್ರದೇಶದಲ್ಲಿ ಯಾದವ್ ಜೊತೆ ವಿಜ್ಞಾನ ಮತ್ತು ಆರ್ಟ್ಸ್ ವಿಭಾಗದ 15 ಪದವೀಧರರೂ ದುಡಿಯುತ್ತಿದ್ದಾರೆ . ಬಡ ಕುಟುಂಬದ ಈ ಪದವೀಧರರು ಈಗ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವುದರ ಜೊತೆಗೆ ದುಡಿಮೆಯನ್ನೂ ಮುಂದುವರಿಸಿದ್ದಾರೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಅಧಿಕಾರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News