‘ಭಾರತೀಯ ಸೇನೆ ಹಿಂದೆ ಸರಿದಿದ್ದೇಕೆ?’ ಎಂಬ ಮೋದಿಯವರ 2013ರ ಟ್ವೀಟನ್ನು ಕೆದಕಿದ ಶಶಿ ತರೂರ್

Update: 2020-07-07 16:06 GMT

ಹೊಸದಿಲ್ಲಿ:  2013ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ನರೇಂದ್ರ ಮೋದಿಯವರು ಮಾಡಿದ್ದ ಟ್ವೀಟ್ ಒಂದನ್ನು ಕೆದಕಿ ತೆಗೆದಿರುವ ಕಾಂಗ್ರೆಸ್ ನಾಯಕ ಶಶಿ ತರೂರ್, ಈಗ ತಮ್ಮದೇ ಪ್ರಶ್ನೆಗೆ ಪ್ರಧಾನಿ ಮೋದಿ ಉತ್ತರಿಸಬೇಕು ಎಂದಿದ್ದಾರೆ.

ಲಡಾಖ್ ನಲ್ಲಿ ತಮ್ಮದೇ ಭೂಪ್ರದೇಶದಿಂದ ಭಾರತೀಯ ಸೇನೆ ಹಿಂದೆ ಸರಿಯುತ್ತಿರುವುದು ಏಕೆ ಎಂದು 2013ರ ಟ್ವೀಟ್ ನಲ್ಲಿ ನರೇಂದ್ರ ಮೋದಿ ಪ್ರಶ್ನಿಸಿದ್ದರು.

“ಚೀನಾ ತನ್ನ ಸೇನೆಯನ್ನು ಹಿಂದೆಗೆದುಕೊಳ್ಳುತ್ತಿದೆ, ಆದರೆ ನಮ್ಮದೇ ಭೂಭಾಗದಿಂದ ಭಾರತೀಯ ಸೇನೆ ಏಕೆ ಹಿಂದೆ ಸರಿಯುತ್ತಿದೆ ಎಂದು ನನಗೆ ಆಶ್ಚರ್ಯವಾಗುತ್ತಿದೆ, ನಾವು ಹಿಂದೆ ಸರಿಯುತ್ತಿರುವುದೇಕೆ?” ಎಂದು 2013ರ ಮೇ 13ರಂದು ಮಾಡಿದ್ದ ಟ್ವೀಟ್ ನಲ್ಲಿ ಮೋದಿ ಪ್ರಶ್ನಿಸಿದ್ದರು.

ಈ ಪೋಸ್ಟನ್ನು ರಿಟ್ವೀಟ್ ಮಾಡಿದ ಶಶಿ ತರೂರ್, 2013ರಲ್ಲಿ ಮೋದಿ ಗುಜರಾತ್ ಸಿಎಂ ಆಗಿದ್ದಾಗ ಎತ್ತಿರುವ ಈ ಪ್ರಶ್ನೆಗಳಿಗೆ ನನ್ನ ಸಹಮತವಿದೆ ಎಂದು ವ್ಯಂಗ್ಯವಾಡಿದ್ದಾರೆ.

2013ರಲ್ಲಿ ಎರಡೂ ಕಡೆಯ ಸೇನೆಗಳು ಸೈನಿಕರನ್ನು ಹಿಂದಕ್ಕೆ ಕರೆಸಿಕೊಂಡಿದ್ದಕ್ಕೂ, ಲಡಾಖ್ ನಲ್ಲಿ ನಿನ್ನೆ ನಡೆದ ಘಟನೆಗೂ ಸಾಮ್ಯತೆ ಇರುವ ಕಾರಣ ಶಶಿ ತರೂರ್ ಈ ಟ್ವೀಟ್ ಮಾಡಿದ್ದಾರೆ.

ಚೀನಾ ಮತ್ತು ಭಾರತದ ನಡುವೆ ಮಾತುಕತೆ ನಡೆದ ನಂತರ ನಿನ್ನೆಯಷ್ಟೇ ಗಲ್ವಾನ್ ನಲ್ಲಿ ಎರಡೂ ಕಡೆಯ ಸೈನಿಕರು ಹಿಂದಕ್ಕೆ ಸರಿದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News