ಫೇಸ್‌ಬುಕ್‌ನಲ್ಲಿ ಅಶ್ಲೀಲ ಪೋಸ್ಟ್ ಮಾಡಿದ ಆರೋಪ: ಬಿಜೆಪಿ ಮುಖಂಡನ ಬಂಧನ

Update: 2020-07-08 04:08 GMT

ಜೈಪುರ, ಜು.8: ಟೀಮ್ ದಿಯಾ ಕುಮಾರಿ ಎಂಬ ಹೆಸರಿನಲ್ಲಿ ಫೇಸ್‌ಬುಕ್ ಪೇಜ್ ಸೃಷ್ಟಿಸಿ ಅಶ್ಲೀಲ ವಿಡಿಯೊಗಳನ್ನು ಪೋಸ್ಟ್ ಮಾಡುತ್ತಿದ್ದ ಆರೋಪದಲ್ಲಿ ರಾಜಸ್ಥಾನದ ರಾಜಸಮಂದ್ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಐಟಿ ಸೆಲ್ ಮುಖ್ಯಸ್ಥನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ, ಜೈಪುರ ರಾಜಕುಟುಂಬಕ್ಕೆ ಸೇರಿದ ಬಿಜೆಪಿ ಸಂಸದೆ ಹೆಸರಿನಲ್ಲಿ ಈ ಪೇಜ್ ಸೃಷ್ಟಿಸಿದ್ದ. ಒಂಬತ್ತು ತಿಂಗಳ ಹಿಂದೆ ದಾಖಲಾಗಿದ್ದ ಪ್ರಕರಣದ ಸಂಬಂಧ ಪೊಲೀಸರು ವಿಚಾರಣೆ ನಡೆಸಿದಾಗ, ಆರೋಪ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಮೋರ್ಚಾನಾ ನಿವಾಸಿ ಗೌರವ್ ಜೋಶಿ ಕಳೆದ ವರ್ಷ ಫೇಸ್‌ಬುಕ್ ಪೇಜ್ ಸೃಷ್ಟಿಸಿ ಅಡ್ಮಿನ್ ಆಗಿದ್ದ. ಈ ಪೇಜ್‌ಗೆ 3 ಲಕ್ಷಕ್ಕೂ ಅಧಿಕ ಅನುಯಾಯಿಗಳಿದ್ದಾರೆ. 2019ರ ಸೆಪ್ಟೆಂಬರ್ 26ರಂದು ಈ ಪೇಜ್‌ನಲ್ಲಿ ಎರಡು ಅಶ್ಲೀಲ ವಿಡಿಯೊ ಪೋಸ್ಟ್ ಮಾಡಿದ ಬಗ್ಗೆ ದಿಯಾಕುಮಾರಿ ಅವರ ಸಿಬ್ಬಂದಿ ಈ ಸಂಬಂಧ ದೂರು ನೀಡಿದ್ದರು.

ಮರುದಿನ ಇವುಗಳನ್ನು ಡಿಲೀಟ್ ಮಾಡಲಾಗಿತ್ತು. ದಿಯಾಕುಮಾರಿಯವರ ಘನತೆಗೆ ಧಕ್ಕೆ ತರಲು ಗೌರವ್ ಜೋಶಿ ಈ ಕೃತ್ಯ ಎಸಗಿದ್ದಾಗಿ ಆಪಾದಿಸಿ ಸಂಸದೆಯ ಆಪ್ತ ಕಾರ್ಯದರ್ಶಿ ವಿಕಾಸ್ ಚೌಧರಿ ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ಜಿಲ್ಲಾ ಸೈಬರ್ ಅಪರಾಧಗಳ ವಿಭಾಗ ಫೇಸ್‌ಬುಕ್‌ನಿಂದ ವರದಿ ತರಿಸಿಕೊಂಡಿತ್ತು. ಜೋಶಿಯ ಇ-ಮೇಲ್ ಐಡಿ ಮತ್ತು ಮೊಬೈಲ್‌ ನಂಬರ್‌ನಿಂದಲೇ ಈ ಪೇಜ್‌ನಲ್ಲಿ ಅಶ್ಲೀಲ ವಿಡಿಯೊ ಪೋಸ್ಟ್ ಮಾಡಿರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಲೋಕಸಭಾ ಚುನಾವಣೆ ವೇಳೆ ಗೌರವ್ ಜೋಶಿ ನಿಯತವಾಗಿ ಟೀಮ್ ದಿಯಾಕುಮಾರಿ ಪೇಜ್ ಶೇರ್ ಮಾಡುತ್ತಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News