ವಿಶ್ವಗುರು ಆಗಬೇಕಿರುವ ಭಾರತ

Update: 2020-07-08 05:51 GMT

ತಾವು ಈ ದೇಶದ 135 ಕೋಟಿ ಪ್ರಜೆಗಳ ಜವಾಬ್ದಾರಿಯನ್ನು ಹೊತ್ತಿರುವ ಮತ್ತು ಅವರ ಕನಸುಗಳನ್ನು ಸಾಕಾರಗೊಳಿಸುತ್ತೀರೆಂದು ನಂಬಿರುವ ಜನರ ಆಶಾಕಿರಣ. ತಾವು ಈ ದೇಶವನ್ನು ಪ್ರಗತಿಯ ಉತ್ತುಂಗಕ್ಕೆ ಎತ್ತಿ ಪ್ರತಿಯೊಬ್ಬ ಪ್ರಜೆಯ ಬದುಕನ್ನು ಹಸನುಗೊಳಿಸುತ್ತೀರಿ ಎಂಬುದನ್ನು ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂಬ ತಮ್ಮ ಜನಪ್ರಿಯ ಘೋಷಣೆಯ ಮುಖಾಂತರ ಜನತೆ ನಂಬಿದ್ದಾರೆ ಮತ್ತು ಕಾತರದಿಂದ ಎದುರು ನೋಡುತ್ತಿದ್ದಾರೆ. ಇದರ ಜೊತೆಗೆ ತಾವು ನೂರಾರು ದೇಶಗಳನ್ನು ಸುತ್ತಿ ಅಲ್ಲಿನ ಆಡಳಿತಗಾರರನ್ನು ಪ್ರೇಮಾದರಗಳಿಂದ ಭೇಟಿಮಾಡಿ ಅವರಿಂದ ಶಹಬ್ಬಾಸ್ ಎನಿಸಿಕೊಂಡಿದ್ದೀರ ಎಂದು ಮಾಧ್ಯಮಗಳು ನೀಡಿರುವ ವರದಿಗಳಿಂದ ನಾವೆಲ್ಲರೂ ನಮ್ಮ ದೇಶದ ಪ್ರತಿಷ್ಠೆ ಇಡೀ ವಿಶ್ವದಲ್ಲಿ ಉಜ್ವಲವಾಗಿದೆ ಎಂದು ಅತೀವ ಸಂತೋಷಪಟ್ಟಿದ್ದೇವೆ. ಈ ಪ್ರತಿಷ್ಠೆಯ ಹೆಚ್ಚಳವು ನಮ್ಮ ದೇಶಕ್ಕೆ ಅಗಾಧವಾದ ಅಂತರ್‌ರಾಷ್ಟ್ರೀಯ ಬೆಂಬಲವನ್ನು ನೀಡಿದೆ ಎಂದೂ ಮತ್ತು ನಮ್ಮ ಮೇಲೆ ಯಾರಾದರೂ ಆಕ್ರಮಣ ಮಾಡಿದರೆ ಅನೇಕ ರಾಷ್ಟ್ರಗಳು ನಮ್ಮ ಬೆಂಬಲಕ್ಕೆ ನಿಲ್ಲುತ್ತವೆಂದೂ ಭಾವಿಸಿದ್ದೆವು. ಈಗ ಲಡಾಖ್ ಗಡಿಯಲ್ಲಿ ಚೀನಾ ಮಾಡಿರುವುದು ನಮಗೆ ಶಾಕ್ ನೀಡಿದೆ.

ತಾವು ನಮ್ಮ ದೇಶದ ಭವ್ಯ ಪರಂಪರೆ ಮತ್ತು ಇತಿಹಾಸವನ್ನು ಅತ್ಯಂತ ಗೌರವದಿಂದ ಆದರಿಸುತ್ತೀರಿ. ನಮ್ಮ ದೇಶವನ್ನು ವಿಶ್ವಗುರುವಿನ ಸ್ಥಾನಕ್ಕೆ ಏರಿಸುತ್ತೇನೆ ಎಂದು ತಾವು ಆಗಾಗ ಹೇಳುತ್ತಿರುತ್ತೀರಿ. ಇದು ಈ ದೇಶದ ದೇಶಭಕ್ತರಿಗೆ ರೋಮಾಂಚನವನ್ನು ಉಂಟುಮಾಡಿದೆ ಮತ್ತು ತಮ್ಮ ಮೇಲಿನ ಅಭಿಮಾನವನ್ನು ಸಾವಿರ ಪಟ್ಟು ಜಾಸ್ತಿ ಮಾಡಿದೆ.

ಈ ವಿಶ್ವಗುರು ಎನ್ನುವ ಕಲ್ಪನೆ ನಮಗೆ ತಾವೇ ಕೊಟ್ಟಿರುವ ಬಳುವಳಿ. ಆ ಮಟ್ಟವನ್ನು ಮುಟ್ಟಲು ಏನೇನು ಅರ್ಹತೆಗಳು ಇರಬೇಕು? ಇದನ್ನು ನಿರ್ಧರಿಸುವವರು ಯಾರು? ಇದು ಸ್ಪರ್ಧಾತ್ಮಕವಾಗಿ ಸಾಧಿಸಬೇಕೋ ಅಥವಾ ನಮ್ಮಷ್ಟಕ್ಕೆ ನಾವೇ ಕೊಟ್ಟುಕೊಳ್ಳುವ ಬಿರುದೋ? ಯಾವುದೂ ಸ್ಪಷ್ಟವಿಲ್ಲ.

ನಮ್ಮ ಸನಾತನ ಪರಂಪರೆಯನ್ನು ಸದಾ ಉಲ್ಲೇಖಿಸುವುದರಿಂದ ಇದು ಸಾಧ್ಯವಾಗದು. ಈ ಹಿಂದೆ ನಮ್ಮ ಹಿರಿಯರು ಗಣಿತ ಕ್ಷೇತ್ರಕ್ಕೆ, ಖಗೋಳ ಶಾಸ್ತ್ರಕ್ಕೆ, ಯೋಗಕ್ಕೆ, ಆಯುರ್ವೇದಕ್ಕೆ ತತ್ವ ಶಾಸ್ತ್ರಕ್ಕೆ, ಆಧ್ಯಾತ್ಮಿಕ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಖಂಡಿತ ಮಹತ್ವದ್ದು. ಆದರೆ ಕೇವಲ ಅದನ್ನು ಪದೇ ಪದೇ ಉಲ್ಲೇಖಿಸುವುದರಿಂದ ವಿಶ್ವಗುರು ಪಟ್ಟ ಸಿಗಲಾರದು. ಇಂದಿನ ದಿನಗಳಲ್ಲಿ ನಾವು ವಿವಿಧ ಕ್ಷೇತ್ರಗಳಿಗೆ ನೀಡಿರುವ ಕಾಣಿಕೆ ಏನು ಎನ್ನುವುದು ಮುಖ್ಯ ಅಲ್ಲವೇ? ನಮ್ಮ ವಿಜ್ಞಾನಿಗಳು, ತಂತ್ರಜ್ಞರು, ಆಡಳಿತ ಮತ್ತು ವ್ಯವಹಾರ ತಜ್ಞರು ಅನೇಕ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ಮತ್ತು ಬಹುಮುಖ್ಯ ಹುದ್ದೆಗಳಲ್ಲಿದ್ದಾರೆ ಎನ್ನುವುದು ನಿಜವಾದರೂ ಅವರು ಆ ಸಂಸ್ಥೆಗಳ ಮಾಲಕರಲ್ಲ ಎನ್ನುವುದೂ ಸತ್ಯ. ಹಾಗಾಗಿ ಈ ಕಾರಣದಿಂದ ನಾವು ವಿಶ್ವಗುರು ಆಗಲಾರೆವು.

ವಿಶ್ವಗುರು ಎನಿಸಿಕೊಳ್ಳಲು ನಾವು ವಿಶ್ವಕ್ಕೆ ಏನಾದರೂ ತೀರಾ ಅಗತ್ಯ ಆದದ್ದನ್ನು ಮತ್ತು ಒರಿಜಿನಲ್ ಆದದ್ದನ್ನು ಕೊಡಬೇಕು. ಅಂತಹ ಸುಸಂದರ್ಭ ಈಗ ಕೂಡಿ ಬಂದಿದೆ. ತಾವು ಮನಸ್ಸು ಮಾಡಿದರೆ ಇದು ಅಸಾಧ್ಯವಾದುದಲ್ಲ. ಇದರ ಬಗ್ಗೆ ತಾವು ಒಬ್ಬ ಚುನಾವಣಾ ಪ್ರೇರಿತ ರಾಜಕಾರಣಿ ಆಗದೆ ಒಬ್ಬ ಲೋಕ ಕಲ್ಯಾಣ ಪ್ರೇರಿತ ಮುತ್ಸದ್ದಿಯಾಗಿ ಯೋಚಿಸಬೇಕಿದೆ. ಹೊರ ನೋಟಕ್ಕೆ ಯಾರಿಗೂ ಬೇಕಿಲ್ಲದ ಯುದ್ಧಗಳನ್ನು ಸಂಪೂರ್ಣವಾಗಿ ಇಲ್ಲವಾಗಿಸುವ ಪ್ರಯತ್ನಗಳನ್ನು ಮಾಡಬೇಕಾಗಿದೆ. ಯುದ್ಧಗಳಿಗೆ ಕಾರಣ ಆಗಿರುವ ಮೂಲಭೂತ ಅಂಶಗಳಿಗೆ ಶಾಶ್ವತ ಪರಿಹಾರಗಳನ್ನು ಹುಡುಕಬೇಕಿದೆ.

ಗಡಿ ವಿವಾದ ಬಹುತೇಕ ಯುದ್ಧಗಳಿಗೆ ಕಾರಣ. ನಮ್ಮ ದೇಶವನ್ನೇ ತೆಗೆದುಕೊಳ್ಳಿ, ಪಾಕಿಸ್ತಾನ ಮತ್ತು ಚೀನಾದೊಂದಿಗೆ ನಮಗೆ ಸ್ವಾತಂತ್ರ್ಯ ಸಿಕ್ಕಂದಿನಿಂದಲೂ ಗಡಿ ತಗಾದೆ ಇದ್ದೇ ಇದೆ. ನಮ್ಮ ಮಕ್ಕಳಿಗೆ ಇದೂವರೆಗೂ ನಾವು ತೋರಿಸಿಕೊಂಡು ಬರುತ್ತಿರುವ ನಮ್ಮ ದೇಶದ ಭೂಪಟದಲ್ಲಿ ಕಾಶ್ಮೀರದ ಉತ್ತರದ ಭಾಗದಲ್ಲಿ ಇರುವ ಪೂರ್ವ ಮತ್ತು ಪಶ್ಚಿಮದ ಜುಟ್ಟಿನಂತಹ ತುದಿಗಳು ನಮ್ಮ ಸುಪರ್ದಿಯಲ್ಲಿ ಇಲ್ಲವೇ ಇಲ್ಲ.

ಗಿಲ್ಗಿಟ್ ಬಾಲ್ಟೀಸ್ಥಾನ್ (73 ಸಾವಿರ ಚದರ ಕಿಲೋಮೀಟರ್), ಆಝಾದ್ ಕಾಶ್ಮೀರ್ (13 ಸಾವಿರ ಚದರ ಕಿಲೋಮೀಟರ್) ಮತ್ತು ಅಕ್ಸಾಯ್ ಚಿನ್ (37 ಸಾವಿರ ಚದರ ಕಿಲೋಮೀಟರ್) ಒಟ್ಟು 1,23,000 ಚದರ ಕಿಲೋಮೀಟರ್ ಪ್ರದೇಶ (ಇದು ಸುಮಾರು ನಮ್ಮ ತೆಲಂಗಾಣ ರಾಜ್ಯಕ್ಕೆ ಸಮ) ನಮ್ಮ ಸುಪರ್ದಿಯಲ್ಲಿ ಇಲ್ಲ. ಈ ಗಡಿ ಸಮಸ್ಯೆಗೆ ಶಾಶ್ವತ ಪರಿಹಾರವೇ ಇಲ್ಲವೇ? ಪ್ರತಿ ವರ್ಷ ಗಡಿ ಘರ್ಷಣೆಯಲ್ಲಿ ಎರಡೂ ಕಡೆಯ ಎಷ್ಟೊಂದು ಯೋಧರು ಸಾಯುತ್ತಿದ್ದಾರೆ? ಇದು ಸೂರ್ಯ ಚಂದ್ರರಿರುವರೆಗೂ ಹೀಗೇ ಇರಬೇಕೇ?

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್ 370 ಕೂಡಾ ಒಂದು ಪರಿಹಾರ ಕಾಣದ ಸಮಸ್ಯೆ ಆಗಿತ್ತು. ಇದು ನಮ್ಮ ದೇಶದ ಆಂತರಿಕ ಸಮಸ್ಯೆ, ಹಾಗಾಗಿ ಇದರ ಪರಿಹಾರ ಸಾಧ್ಯವಾಯಿತು. ಈಗ ನಿರಂತರ ಸಮಸ್ಯೆಗೆ ಕಾರಣ ಆಗಿರುವ ಅಂತರ್‌ರಾಷ್ಟ್ರೀಯ ಗಡಿ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವತ್ತ ಮತ್ತು ಇಡೀ ಜಗತ್ತಿನ ಈ ರೀತಿಯ ಸಮಸ್ಯೆಗಳಿಗೆ ಅನುಗುಣ ಆಗುವಂತೆ ಪ್ರಬಲ ಮಾರ್ಗೋಪಾಯವನ್ನು ಸೂಚಿಸಿ ಅದನ್ನು ತಮ್ಮ ನಾಯಕತ್ವದಲ್ಲಿ ಅನುಷ್ಠಾನಗೊಳಿಸಿದರೆ ನಾವು ವಿಶ್ವಗುರು ಎಂಬ ಪಟ್ಟಕ್ಕೆ ಖಂಡಿತ ಭಾಜನರಾಗುತ್ತೇವೆ.

ಎರಡನೇ ಮಹಾಯುದ್ಧದ ನಂತರ ಹುಟ್ಟಿದ ಸಂಯುಕ್ತ ರಾಷ್ಟ್ರಗಳ ಒಕ್ಕೂಟ ವಿಶ್ವಸಂಸ್ಥೆ ಇಂತಹ ಸಮಸ್ಯೆಗಳ ಪರಿಹಾರಕ್ಕಾಗಿಯೇ ಉದ್ಭವವಾದ ಸಂಘಟನೆ. ಅದು ಮತ್ತು ಅದರ ಬಹುಮುಖ್ಯ ಅಂಗ ಸಂಸ್ಥೆಯಾದ ಅಂತರ್‌ರಾಷ್ಟ್ರೀಯ ನ್ಯಾಯಾಲಯ ಇಷ್ಟೊತ್ತಿಗೆ ಅತ್ಯಂತ ಪ್ರಬಲವಾದ, ಪರಮಾಧಿಕಾರವುಳ್ಳ ಮತ್ತು ನಿಷ್ಪಕ್ಷಪಾತವಾದ ಸಂಘಟನೆಯಾಗಿ ವಿಕಾಸಗೊಳ್ಳಬೇಕಿತ್ತು. ದುರಾದೃಷ್ಟವಶಾತ್ ಅದು ಗೊಂದಲದ ಗೂಡಾಗಿದೆ.

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ನಾವು ವಿಶ್ವಸಂಸ್ಥೆಯನ್ನು ನಿಜವಾದ ಅರ್ಥದಲ್ಲಿ ವಿಶ್ವ ನಿಯಂತ್ರಕ ಸಂಸ್ಥೆಯನ್ನಾಗಿಸಲು ಮುಂದಾಳತ್ವವನ್ನು ವಹಿಸಬೇಕು. ಅದರಲ್ಲಿ ಇರುವ ಅತಿ ಮುಖ್ಯ ಲೋಪ ಎಂದರೆ ಇಂದಿನ ಕಾಲಮಾನಕ್ಕೆ ಒಗ್ಗದ ಪಂಚ ರಾಷ್ಟ್ರಗಳ ವೀಟೋ ಪವರ್. ನಮ್ಮಲ್ಲಿ ಅನೇಕರು ನಮಗೂ ವೀಟೋ ಪವರ್ ಬೇಕು ಎಂದು ಬೊಬ್ಬಿರಿಯುತ್ತಾರೆ. ಇದು ಭಾವನಾತ್ಮಕ ಬೇಡಿಕೆಯೇ ಹೊರತು ತಾರ್ಕಿಕವಾದ ಅಂಶ ಅಲ್ಲವೇ ಅಲ್ಲ. ಅಣು ಬಾಂಬ್ ಇದೆ ಎನ್ನುವ ಕಾರಣಕ್ಕಾಗಿ ವೀಟೋ ಪವರ್ ಇರುವುದು ಪ್ರಜಾ ಶಕ್ತಿಗೆ ಅತ್ಯಂತ ಅವಮಾನಕರ ಸಂಗತಿ. ಇದೊಂದು ಥರ ಬಂದೂಕು ಇದ್ದವನ ಮತಕ್ಕೆ ಹೆಚ್ಚು ಮೌಲ್ಯ ಎಂಬಂತಿದೆ. ವೀಟೋ ಪವರ್ ಯಾರಿಗೂ ಇರಬಾರದು. ವಿಶ್ವಸಂಸ್ಥೆ ನಿಜಕ್ಕೂ ವಿಶ್ವದ ಪ್ರತಿ ದೇಶದ ಹಿತಾಸಕ್ತಿಯನ್ನು ಕಾಪಾಡುವ, ಮಾನವ ಹಕ್ಕುಗಳನ್ನು ಪ್ರತಿ ಪ್ರಜೆಗೂ ಖಾತರಿಪಡಿಸುವ, ಗಡಿ ತಗಾದೆಗಳನ್ನು ಅಧಿಕಾರಯುತವಾಗಿ ಮತ್ತು ಶಾಶ್ವತವಾಗಿ ಪರಿಹರಿಸುವ ಸಂಸ್ಥೆ ಆಗಬೇಕಿತ್ತಲ್ಲವೇ? ಅಂತರ್‌ರಾಷ್ಟ್ರೀಯ ಕೋರ್ಟ್ ಅತ್ಯಂತ ನಂಬಿಕಾರ್ಹ ಅಂತಿಮ ನ್ಯಾಯ ಮಂದಿರ ಆಗಬೇಕಿತ್ತಲ್ಲವೇ? 1945ರಲ್ಲಿ ಎರಡನೇ ಮಹಾಯುದ್ಧ ಮುಗಿದಾಗ ಎಷ್ಟೊಂದು ಮಹತ್ವಾಕಾಂಕ್ಷೆಗಳೊಂದಿಗೆ ಪ್ರಾರಂಭವಾದ ಈ ಸಂಸ್ಥೆ 75 ವರ್ಷಗಳ ನಂತರವೂ ಏಕೆ ನಿರೀಕ್ಷಿತ ಮಟ್ಟವನ್ನು ಮುಟ್ಟಿಲ್ಲ? ವಿಶ್ವಸಂಸ್ಥೆ ಹೇಳಿದ ಮೇಲೆ ಮುಗಿಯಿತು, ಮುಂದಕ್ಕೆ ಮಾತೇ ಇಲ್ಲ ಎನ್ನುವ ಪರಿಸ್ಥಿತಿ ಇರಬೇಕಿತ್ತು. ವಾಸ್ತವವಾಗಿ ಅದು ಎಲ್ಲಿದೆ?

ವಿಶ್ವದ ಸೂಪರ್ ಪವರ್‌ಗಳು ಎಂದುಕೊಂಡಿರುವ ಯು.ಎಸ್.ಎ., ರಶ್ಯಾ, ಚೀನಾ, ಜಪಾನ್, ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ ಹಾಗೂ ಎಲ್ಲ ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳ ಒಟ್ಟು ಜನಸಂಖ್ಯೆ 250 ಕೋಟಿಗೂ ಕಡಿಮೆ. ಇಡೀ ಜಗತ್ತಿನ ಜನಸಂಖ್ಯೆ 780 ಕೋಟಿ. 250 ಕೋಟಿ ಜನಸಂಖ್ಯೆಯ ಹಿತಾಸಕ್ತಿಯನ್ನು ಕಾಪಾಡಲು 530 ಕೋಟಿ ಜನರನ್ನು ಉಪೇಕ್ಷಿಸಲಾಗದು. ಇದನ್ನು ಇಡೀ ವಿಶ್ವಕ್ಕೆ ಮನವರಿಕೆ ಮಾಡಿಸುವ ಜವಾಬ್ದಾರಿಯನ್ನು ಹೊತ್ತು ವಿಶ್ವಸಂಸ್ಥೆಯನ್ನು ನಿಜವಾದ ಅರ್ಥದಲ್ಲಿ ಒಂದು ಪ್ರಬಲ ಸಂಸ್ಥೆಯನ್ನಾಗಿ ಕಟ್ಟುವುದಾದರೆ ನಾವು ವಿಶ್ವಗುರು ಎಂದು ಖಂಡಿತಾ ಅನ್ನಿಸಿಕೊಳ್ಳುತ್ತೇವೆ. ಅದನ್ನು ನಾವು ನಮಗಾಗಿ ಕೊಟ್ಟುಕೊಳ್ಳುವುದು ಒಂದು ಅರ್ಥಹೀನ ಮತ್ತು ಕೀಳು ಮಟ್ಟದ ಮನಸ್ಥಿತಿ.

ಕೊರೋನದ ಅನಿರೀಕ್ಷಿತ ದಾಳಿಗೆ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ವಿಶ್ವಸಂಸ್ಥೆಯ ಅಂಗವಾಗಿರುವ ವಿಶ್ವ ಆರೋಗ್ಯ ಸಂಸ್ಥೆಯನ್ನು ಅನುಮಾನದಿಂದ ನೋಡಲಾಗುತ್ತಿದೆ. ಸೆಕ್ಯೂರಿಟಿ ಕೌನ್ಸಿಲ್ ತನ್ನ ಅತಾರ್ಕಿಕ ವೀಟೋ ಪದ್ಧತಿಯಿಂದ ಏನನ್ನು ಸಾಧಿಸಬೇಕಿತ್ತೋ ಅದನ್ನು ಸಮರ್ಥವಾಗಿ ಮಾಡಲಾಗದೆ ಎಲ್ಲರ ಅವಕೃಪೆಗೆ ಪಾತ್ರವಾಗಿದೆ. ವಿಶ್ವಸಂಸ್ಥೆಗೆ ಹೊಸ ರೂಪ ನೀಡಿ, ಚೈತನ್ಯ ತುಂಬಿ ಎಲ್ಲಾ ರಾಷ್ಟ್ರಗಳ ಹಿತಾಸಕ್ತಿಗಳನ್ನು ಕಾಪಾಡುವ ನಿಷ್ಪಕ್ಷಪಾತವಾದ ಸಂಸ್ಥೆಯನ್ನಾಗಿಸಲು ತಾವು ಮುನ್ನುಗ್ಗಿದರೆ ಮತ್ತು ಗುರುತಿಸಬಹುದಾದ ಯಶಸ್ಸನ್ನು ಕಂಡರೆ ಇಡೀ ವಿಶ್ವ ನಮ್ಮ ದೇಶವನ್ನು ಸೂರ್ಯ ಚಂದ್ರರಿರುವರೆಗೂ ನೆನೆಯುವುದೇ ಅಲ್ಲದೆ ನಮ್ಮ ದೇಶವನ್ನು ವಿಶ್ವಗುರು ಎಂದು ಗೌರವಿಸುತ್ತದೆ.

Writer - ಪ್ರೊ. ತುಮಕೂರು ಚಂದ್ರಕಾಂತ

contributor

Editor - ಪ್ರೊ. ತುಮಕೂರು ಚಂದ್ರಕಾಂತ

contributor

Similar News