ಆ್ಯಂಬುಲೆನ್ಸ್ ಕೊರತೆ ನೀಗಿಸಲು ತುರ್ತು ಕ್ರಮ: ಸಿಎಂ ಯಡಿಯೂರಪ್ಪ

Update: 2020-07-09 11:29 GMT

ಬೆಂಗಳೂರು, ಜು. 9: ಮಾರಕ ಕೊರೋನ ವೈರಸ್ ಸೋಂಕು ಕೆಲ ಜಿಲ್ಲೆಗಳಲ್ಲಿ ನಿಯಂತ್ರಣ ಮೀರಿ ಏರಿಕೆಯಾಗುತ್ತಿದೆ. ಆದರೂ, ಜಿಲ್ಲಾಡಳಿತಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸೋಂಕು ತಡೆಗಟ್ಟಲು ಶಕ್ತಿ ಮೀರಿ ಶ್ರಮಿಸುತ್ತಿವೆ. ಹೀಗಾಗಿ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇಂದಿಲ್ಲಿ ಅಭಯ ನೀಡಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೊರೋನ ಸೋಂಕಿತರಿಗೆ ಅಗತ್ಯವಿರುವ ಆಂಬ್ಯುಲೆನ್ಸ್ ವ್ಯವಸ್ಥೆ, ಸೂಕ್ತ ಚಿಕಿತ್ಸೆ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಲು ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನ ಸೋಂಕಿನ ನಿಯಂತ್ರಣಕ್ಕೆ ಸರಕಾರ ಸರ್ವ ಪ್ರಯತ್ನಗಳನ್ನು ನಡೆಸಿದೆ ಎಂದು ಹೇಳಿದರು.

ಆಂಬ್ಯುಲೆನ್ಸ್ ಖರೀದಿ: ನಿನ್ನೆ 400 ಆಂಬ್ಯಲೆನ್ಸ್ ಖರೀದಿಗೆ ಸೂಚನೆ ನೀಡಲಾಗಿತ್ತು. ಇಂದು ಪುನಃ 200 ಆಂಬ್ಯುಲೆನ್ಸ್ ಖರೀದಿಗೆ ಒಪ್ಪಿಗೆ ನೀಡಿದ್ದು, ಬೆಂಗಳೂರು ನಗರದಲ್ಲಿ ಒಟ್ಟು 800 ಆಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದ ಅವರು, ಜನ ಸಾಮಾನ್ಯರು ಯಾವುದೇ ಕಾರಣಕ್ಕೂ ಆತಂಕಪಡುವ ಅಗತ್ಯವಿಲ್ಲ. ಸರಕಾರದ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಸೋಂಕು ನಿಯಂತ್ರಣಕ್ಕೆ ಜನರು ಸಹಕರಿಸಬೇಕು ಎಂದು ಕೋರಿದರು.

ರಾಜ್ಯಕ್ಕೆ ಇತ್ತಿಚೇಗೆ ಭೇಟಿ ನೀಡಿದ್ದ ಕೇಂದ್ರದ ತಂಡ ರಾಜ್ಯ ಸರಕಾರದ ಕ್ರಮಗಳನ್ನು ಶ್ಲಾಘಿಸಿದೆ. ದೇಶದಲ್ಲೆ ಮೊಟ್ಟ ಮೊದಲ ಬಾರಿಗೆ ರಾಜ್ಯ ಸರಕಾರ 10 ಸಾವಿರ ಹಾಸಿಗೆಗಳ ಕೋವಿಡ್ ಕೇಂದ್ರವನ್ನು ಆರಂಭಿಸುತ್ತಿದ್ದು, ಆ ಕೇಂದ್ರಕ್ಕೆ ಖುದ್ದು ನಾನೇ ಭೇಟಿ ನೀಡಿ ಅಲ್ಲಿನ ಸ್ವಚ್ಛತೆ ಮತ್ತು ಮೂಲಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಲಿದ್ದೇನೆ ಎಂದು ಯಡಿಯೂರಪ್ಪ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News