ಕಾಂಗ್ರೆಸ್ ಮುಖಂಡ ಕುಲದೀಪ್ ಬಿಷ್ಣೋಯಿ, ಪತ್ನಿಯ ಬ್ಯಾಂಕ್ ವಿವರ ಭಾರತಕ್ಕೆ ಹಂಚಿಕೆ: ಸ್ವಿಸ್ ಸರ್ಕಾರ ನೋಟಿಸ್

Update: 2020-07-09 16:27 GMT

ಹೊಸದಿಲ್ಲಿ: ಕಾಂಗ್ರೆಸ್ ಮುಖಂಡ ಕುಲದೀಪ್ ಬಿಷ್ಣೋಯಿ ಮತ್ತು ಅವರ ಪತ್ನಿ ರೇಣುಕಾ ಅವರ ಬ್ಯಾಂಕ್ ವಿವರಗಳನ್ನು ಮತ್ತು ಇತರ ಹಣಕಾಸು ಆಸ್ತಿಯ ವಿವರಗಳನ್ನು ಭಾರತದ ಜತೆ ಹಂಚಿಕೊಳ್ಳುವ ಸಂಬಂಧ ಸ್ವಿಝರ್ ಲ್ಯಾಂಡ್ ಸರ್ಕಾರ ಸಾರ್ವಜನಿಕ ನೋಟಿಸ್ ಹೊರಡಿಸಿದೆ. ಭಾರತದ ಅಧಿಕಾರಿಗಳು ಆಡಳಿತಾತ್ಮಕ ನೆರವು ಕೋರಿದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದೆ.

ಸ್ವಿಸ್ ಕಾನೂನಿನ ಪ್ರಕಾರ ಮಾಹಿತಿ ಹಂಚಿಕೆಯ ವಿರುದ್ಧ ಮನವಿ ಸಲ್ಲಿಸಲು ಬಿಷ್ಣೋಯಿ ಅವರಿಗೆ ಹತ್ತು ದಿನಗಳ ಕಾಲಾವಕಾಶ ನೀಡಲಾಗಿದೆ. ಜುಲೈ 7ರಂದು ಪ್ರಕಟಿಸಲಾದ ಸ್ವಿಝರ್ ಲ್ಯಾಂಡ್ ಫೆಡರಲ್ ಗಜೆಟ್ ನಲ್ಲಿ ಈ ನೋಟಿಸ್ ಪ್ರಕಟವಾಗಿದೆ.

ಇಂಥದ್ದೇ ನೋಟಿಸನ್ನು ಗ್ರ್ಯಾಂಡ್ ಮಿಷನ್ ಲಿಮಿಟೆಡ್ ಮತ್ತು ಹಾಲಿಪೋರ್ಟ್ ಲಿಮಿಟೆಡ್ ಎಂಬ ಬ್ರಿಟಿಷ್ ವಿರ್ಜಿನ್ ದ್ವೀಪದ ಕಂಪನಿಗಳ ವಿರುದ್ಧವೂ ಹೊರಡಿಸಲಾಗಿದ್ದು, ಇವು ಬಿಷ್ಣೋಯಿ ಕುಟುಂಬದ ಜತೆ ಸಂಪರ್ಕ ಹೊಂದಿವೆ ಎನ್ನಲಾಗಿದೆ.

ಎರಡೂ ಕಂಪನಿಗಳು 1996ರ ಜುಲೈ 19ರಂದು ನೋಂದಣಿಯಾಗಿದ್ದು, ವಿವಿಧ ತೆರಿಗೆ ಸ್ವರ್ಗಗಳಲ್ಲಿ ಇವೆ ಎನ್ನಲಾದ ಪನಾಮಾ ದಾಖಲೆಗಳಲ್ಲಿ ಕೂಡಾ ಈ ಕಂಪನಿಗಳ ಉಲ್ಲೇಖವಿದೆ. 2014ರ ಆಗಸ್ಟ್ ನಿಂದ ನಿಷ್ಕ್ರಿಯವಾಗಿರುವ ಹಿನ್ನೆಲೆಯಲ್ಲಿ 2016ರ ಏಪ್ರಿಲ್ ನಲ್ಲಿ ರಿಜಿಸ್ಟ್ರಿ ಆಫ್ ಕಂಪನಿಯಿಂದ ಇವೆರಡರ ಹೆಸರು ಕಿತ್ತು ಹಾಕಲಾಗಿದೆ.

ಬಿಷ್ಣೋಯಿ ಹರ್ಯಾಣ ವಿಧಾನಸಭೆಯ ಕಾಂಗ್ರೆಸ್ ಶಾಸಕರಾಗಿದ್ದು, ಅವರಿಂದ ಪ್ರತಿಕ್ರಿಯೆಗೆ ಪ್ರಯತ್ನ ನಡೆಸಿದರೂ ಯಾವುದೇ ಉತ್ತರ ಸಿಕ್ಕಿಲ್ಲ. ಸ್ವಿಝರ್ ಲ್ಯಾಂಡ್ ಫೆಡರಲ್ ತೆರಿಗೆ ವ್ಯವಸ್ಥೆ ಭಾರತಕ್ಕೆ ಆಡಳಿತಾತ್ಮಕ ಸಹಕಾರ ನೀಡುವುದರ ವಿರುದ್ಧ ಮನವಿ ಸಲ್ಲಿಸಲು 10 ದಿನಗಳ ಒಳಗಾಗಿ ಬಿಷ್ಣೋಯಿ ಕುಟುಂಬ ಮತ್ತು ಎರಡು ಕಂಪನಿಗಳು ಪ್ರತಿನಿಧಿಯನ್ನು ನೇಮಿಸಬೇಕಾಗುತ್ತದೆ.

ಇಂಥ ಆಡಳಿತಾತ್ಮಕ ನೆರವಿನಲ್ಲಿ ಪ್ರಮುಖವಾಗಿ ಸ್ವಿಝರ್ ಲ್ಯಾಂಡ್ ಹಣಕಾಸು ಸಂಸ್ಥೆಗಳ ಜತೆ ಈ ವ್ಯಕ್ತಿಗಳು ಮತ್ತು ಕಂಪನಿಗಳು ನಡೆಸಿದ ಬ್ಯಾಂಕಿಂಗ್ ಮತ್ತು ಇತರ ವಿವರಗಳು ಸೇರುತ್ತವೆ. ನೋಟಿಸ್ ನಲ್ಲಿ ತನಿಖೆಯ ಯಾವುದೇ ನಿರ್ದಿಷ್ಟ ವಿವರಗಳನ್ನು ನೀಡಿಲ್ಲ. ವಿದೇಶಗಳು ಇಂಥ ಮನವಿ ಮಾಡಿದಾಗ ಮೇಲ್ನೋಟಕ್ಕೆ ತೆರಿಗೆ ತಪ್ಪಿಸಿಕೊಂಡಿರುವ ಸಾಧ್ಯತೆ ಕಂಡುಬಂದಲ್ಲಿ ಇಂಥ ನೋಟಿಸ್ ನೀಡಲಾಗುತ್ತದೆ.

ಸಂಬಂಧಪಟ್ಟ ವ್ಯಕ್ತಿ ಅಥವಾ ಕಂಪನಿ ಆಡಳಿತಾತ್ಮಕ ಸಹಕಾರದ ವಿರುದ್ಧ ಸಕಾರಣವನ್ನು ಒದಗಿಸದಿದ್ದಲ್ಲಿ, ಮನವಿ ಮಾಡಿದ ದೇಶದ ತೆರಿಗೆ ಇಲಾಖೆ ಜತೆ ವಿವರಗಳನ್ನು ಹಂಚಿಕೊಳ್ಳಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News