ದಂಡ ಪಾವತಿಸಿ ಮುಕ್ತ ಓಡಾಟಕ್ಕೆ ವಿದೇಶಿ ತಬ್ಲೀಗಿಗಳಿಗೆ ಕೋರ್ಟ್ ಅವಕಾಶ

Update: 2020-07-10 18:31 GMT

ಹೊಸದಿಲ್ಲಿ: ತಮ್ಮ ಮೇಲಿನ ಸೌಮ್ಯ ಆರೋಪವನ್ನು ಒಪ್ಪಿಕೊಂಡ ಬಳಿಕ ಚೌಕಾಶಿ ಮನವಿ ಪ್ರಕ್ರಿಯೆಯ ವೇಳೆ ಮಲೇಷ್ಯಾದ 62 ಮಂದಿ ಹಾಗೂ ಸೌದಿ ಅರೇಬಿಯಾದ 11 ಮಂದಿ ವಿದೇಶಿ ತಬ್ಲೀಗಿ ಕಾರ್ಯಕರ್ತರು ಕ್ರಮವಾಗಿ 7 ಸಾವಿರ ರೂಪಾಯಿ ಹಾಗೂ 10 ಸಾವಿರ ರೂಪಾಯಿ ದಂಡ ಪಾವತಿಸಿ ಮುಕ್ತವಾಗಿ ಸಂಚರಿಸಲು ದೆಹಲಿ ನ್ಯಾಯಾಲಯ ಶುಕ್ರವಾರ ಅನುಮತಿ ನೀಡಿದೆ.

ಕೋವಿಡ್-19 ಲಾಕ್ ಡೌನ್ ಇದ್ದ ಅವಧಿಯಲ್ಲಿ ತಬ್ಲೀಗಿ ಜಮಾಅತ್ ಸಮ್ಮೇಳನದಲ್ಲಿ ಪಾಲ್ಗೊಂಡದ್ದು ಸೇರಿದಂತೆ ವೀಸಾ ನಿಯಮಗಳನ್ನು ಉಲ್ಲಂಘಿಸಿದ ಆರೋಪ ಇವರ ಮೇಲಿತ್ತು.

ಸೌಮ್ಯ ಆರೋಪವನ್ನು ಒಪ್ಪಿಕೊಂಡ ಬಳಿಕ ನಡೆದ ಚೌಕಾಶಿ ಪ್ರಕ್ರಿಯೆಯಲ್ಲಿ ಮಲೇಷ್ಯಾ ಪ್ರಜೆಗಳು ಶಿಕ್ಷೆ ಕಡಿಮೆ ಮಾಡುವಂತೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸಿದ್ಧಾರ್ಥ ಮಲ್ಲಿಕ್ ಈ ಆದೇಶ ಹೊರಡಿಸಿದ್ದಾರೆ ಎಂದು ವಿದೇಶಿಯರ ಪರವಾಗಿ ವಾದ ಮಂಡಿಸಿದ ವಕೀಲರು ಸ್ಪಷ್ಟಪಡಿಸಿದ್ದಾರೆ.

ದೂರುದಾರರಾಗಿರುವ ಲಜಪತ್ ನಗರ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಮತ್ತು ಹೆಚ್ಚುವರಿ ಪೊಲೀಸ್ ಆಯುಕ್ತರು ಮತ್ತು ನಿಜಾಮುದ್ದೀನ್ ಠಾಣೆಯ ಇನ್ಸ್ಪೆಕ್ಟರ್ ನಿರಾಕ್ಷೇಪಣಾ ಪತ್ರ ನೀಡಿದ ಬಳಿಕ ಮುಕ್ತವಾಗಿ ಓಡಾಡಬಹುದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಸೌದಿ ಅರೇಬಿಯಾದ ಪ್ರಜೆಗಳು ಕಡಿಮೆ ಶಿಕ್ಷೆ ವಿಧಿಸುವಂತೆ ಮಾಡಿಕೊಂಡ ಮನವಿಯನ್ನು ಸ್ವೀಕರಿಸಿದ ಮತ್ತೊಬ್ಬ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಆಶೀಶ್ ಗುಪ್ತಾ ಅವರು ಕೂಡಾ ಇಂಥದ್ದೇ ಆದೇಶ ನೀಡಿದ್ದಾರೆ ಎಂದು ಹಿರಿಯ ವಕೀಲ ಎಸ್.ಹರಿಹರನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News