ರಾಹುಲ್‌ಗೆ ಕಾಂಗ್ರೆಸ್ ಅಧ್ಯಕ್ಷಗಿರಿ: ಪಕ್ಷದ ಸಂಸದರ ಒಕ್ಕೊರಲ ಆಗ್ರಹ

Update: 2020-07-12 03:48 GMT

ಹೊಸದಿಲ್ಲಿ, ಜು.12: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಮಧ್ಯಂತರ ಅವಧಿ ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ, ಮತ್ತೆ ರಾಹುಲ್ ‌ಗಾಂಧಿಯವರೇ ಪಕ್ಷಾಧ್ಯಕ್ಷ ಹುದ್ದೆಯನ್ನು ವಹಿಸಿಕೊಳ್ಳಬೇಕು ಎಂದು ಪಕ್ಷದ ಸಂಸದರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.

ಕೋವಿಡ್-19 ಪರಿಸ್ಥಿತಿ ನಿಭಾಯಿಸಿದ್ದು ಮತ್ತು ಲಡಾಖ್‌ನಲ್ಲಿ ಚೀನಾ ಜತೆಗಿನ ಸಂಘರ್ಷ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಹುಲ್ ಕಳೆದ ಕೆಲ ದಿನಗಳಿಂದ ನೇರ ವಾಗ್ದಾಳಿ ನಡೆಸುತ್ತಿದ್ದಾರೆ. ಕುತೂಹಲದ ಅಂಶವೆಂದರೆ ಹಿರಿಯ ಮುಖಂಡ ದಿಗ್ವಿಜಯ ಸಿಂಗ್ ಅವರೇ ರಾಹುಲ್ ಪರ ಬ್ಯಾಟಿಂಗ್ ಮಾಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಪಕ್ಷಾಧ್ಯಕ್ಷ ಹುದ್ದೆ ಕುರಿತು ನಡೆಯುತ್ತಿರುವ ಚರ್ಚೆಯಲ್ಲಿ ಪಾಲ್ಗೊಂಡ ದಿಗ್ವಿಜಯ ಸಿಂಗ್, ಪಕ್ಷದ ಅಧ್ಯಕ್ಷ ಹುದ್ದೆ ತ್ಯಜಿಸಿದ ರಾಹುಲ್ ನಿರ್ಧಾರವನ್ನು ಪ್ರಶ್ನಿಸಿ, ಪಕ್ಷದ ಅತ್ಯುನ್ನತ ಹುದ್ದೆಗೆ ಬರದಂತೆ ಈಗ ಅವರನ್ನು ತಡೆಯುತ್ತಿರುವವರು ಯಾರು ಎಂದು ಕೇಳಿದ್ದಾರೆ. ಸೋನಿಯಾ ಗಾಂಧಿ ಹಾಗೂ ಪಕ್ಷದ ಸಂಸದರ ನಡುವಿನ ವರ್ಚುವಲ್ ಸಂವಾದದ ವೇಳೆ ದಿಗ್ವಿಜಯ ಸಿಂಗ್ ಈ ಪ್ರಶ್ನೆ ಮುಂದಿಟ್ಟಿದ್ದಾರೆ.

ಕಾಂಗ್ರೆಸ್ ಸಂಸದರಾದ ಕೆ.ಸುರೇಶ್, ಮಣಿಕಂ ಠ್ಯಾಗೋರ್, ಗೌರವ್ ಗೊಗೋಯ್ ಮತ್ತಿತರರು, ರಾಹುಲ್ ಅವರೇ ಪಕ್ಷಾಧ್ಯಕ್ಷ ಹುದ್ದೆಗೆ ಮರಳಬೇಕು ಎಂದು ಆಗ್ರಹಿಸಿದ್ದಾರೆ. ರಾಷ್ಟ್ರದಲ್ಲಿ ತಲೆದೋರಿರುವ ಸಂಕಷ್ಟದ ಪರಿಸ್ಥಿತಿಯಲ್ಲಿ ಸರ್ಕಾರದ ವೈಫಲ್ಯಗಳನ್ನು ಬಯಲುಗೊಳಿಸಲು ಅವರೇ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸೋನಿಯಾ ಗಾಂಧಿಯವರ ಮಧ್ಯಂತರ ಅಧ್ಯಕ್ಷಾವಧಿ ಆಗಸ್ಟ್ 10ರಂದು ಮುಕ್ತಾಯವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News