ಲಾಕ್‍ಡೌನ್ ಪ್ರಯುಕ್ತ ಹೆಚ್ಚುವರಿ ಬಸ್ಸುಗಳ ಕಾರ್ಯಾಚರಣೆ: ಡಿಸಿಎಂ ಲಕ್ಷ್ಮಣ ಸವದಿ

Update: 2020-07-13 12:36 GMT

ಸವದಿ ಬೆಂಗಳೂರು, ಜು.13: ಬೆಂಗಳೂರಿನಲ್ಲಿ ಲಾಕ್‍ಡೌನ್ ವಿಧಿಸಲಾಗುತ್ತಿರುವುದರಿಂದ ಬೆಂಗಳೂರಿನಿಂದ ಇತರ ಕಡೆಗಳಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ(ಮಂಗಳವಾರ) ಪ್ರತಿದಿನ 800 ಹೆಚ್ಚುವರಿ ಬಸ್ಸುಗಳಂತೆ 1600 ಬಸ್ಸುಗಳನ್ನು ಕೆಎಸ್ಸಾರ್ಟಿಸಿ ವತಿಯಿಂದ ಕಾರ್ಯಾಚರಣೆಗೊಳಿಸಲಾಗುತ್ತಿದೆ. ಇದಲ್ಲದೇ ಅಗತ್ಯವಿದ್ದರೆ ಮತ್ತಷ್ಟು(200) ಬಸ್ಸುಗಳನ್ನು ಕಾರ್ಯಾಚರಣೆಗೆ ಸಜ್ಜುಗೊಳಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಇಂದು ಮಧ್ಯಾಹ್ನ 1 ಗಂಟೆಯವರೆಗೆ ಒಟ್ಟು 440 ಬಸ್ಸುಗಳನ್ನು ವಿವಿಧ ಜಿಲ್ಲೆಗಳಿಗೆ ಮತ್ತು ಕೆಲವು ರಾಜ್ಯಗಳಿಗೆ ಬೆಂಗಳೂರಿನಿಂದ ಕಾರ್ಯಾಚರಣೆಗೊಳಿಸಲಾಗಿದೆ. ಒಟ್ಟು 11,466 ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಕೆಎಸ್ಸಾರ್ಟಿಸಿ ವತಿಯಿಂದ ಪ್ರಯಾಣಿಕರಿಗೆ ಯಾವುದೆ ರೀತಿಯ ಗೊಂದಲ ಉಂಟಾಗದಂತೆ ಸಕಲ ವ್ಯವಸ್ಥೆಯನ್ನು ಸೂಕ್ತವಾಗಿ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಕೋವಿಡ್-19 ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವ ಜೊತೆಗೆ ಪ್ರಯಾಣಿಕರ ಹಿತದೃಷ್ಟಿಯಿಂದ ಇತರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಲಾಕ್‍ಡೌನ್ ಘೋಷಣೆಯಿಂದ ಯಾರೂ ಆತಂಕಕ್ಕೆ ಒಳಗಾಗಬಾರದು. ನಮ್ಮ ಸರಕಾರ ಸಾರ್ವಜನಿಕರ ಹಿತ ರಕ್ಷಣೆಗೆ ಕೈಗೊಳ್ಳುತ್ತಿರುವ ಕ್ರಮಗಳಿಗೆ ಸೂಕ್ತ ಸಹಕಾರ ನೀಡಬೇಕೆಂದು ಲಕ್ಷ್ಮಣ ಸವದಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News