ರಾಜ್ಯಕ್ಕೆ ತೃತೀಯ ಸ್ಥಾನ ಗಳಿಸಿದ ಅಲ್ಮಾಸ್ ಬಾನುಗೆ ‘ಫಾಲ್ಕನ್’ನಿಂದ ಉಚಿತ ನೀಟ್ ತರಬೇತಿ

Update: 2020-07-15 11:07 GMT
ತನ್ನ ಹೆತ್ತವರೊಂದಿಗೆ ಅಲ್ಮಾಸ್ ಬಾನು

ಬೆಂಗಳೂರು, ಜು.15: ಪ್ರಸಕ್ತ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ರಾಜ್ಯಕ್ಕೆ ತೃತೀಯ ಸ್ಥಾನ ಗಳಿಸಿದ ವಿದ್ಯಾರ್ಥಿನಿಯೊಬ್ಬಳಿಗೆ ಫಾಲ್ಕನ್ ಪಿಯು ಕಾಲೇಜು ಉಚಿತವಾಗಿ ನೀಟ್ (NEET) ತರಬೇತಿ ನೀಡಲು ಮುಂದಾಗಿದೆ.

ತುಮಕೂರು ಜಿಲ್ಲೆಯ ಕುಣಿಗಲ್‌ನ ವಿದ್ಯಾರ್ಥಿನಿ ಅಲ್ಮಾಸ್ ಬಾನು ದ್ವಿತೀಯ ಪಿಯು ವಿಜ್ಞಾನ ವಿಭಾಗದಲ್ಲಿ 594(99 ಶೇ.) ಅಂಕಗಳನ್ನು ಗಳಿಸಿ ರಾಜ್ಯಕ್ಕೆ ತೃತೀಯ ಸ್ಥಾನ ಗಳಿಸಿದ್ದಾರೆ. ಇವರು ಭೌತಶಾಸ್ತ್ರ, ಗಣಿತದಲ್ಲಿ 100ರಲ್ಲಿ 100 ಅಂಕ ಹಾಗೂ ರಸಾಯನಶಾಸ್ತ್ರದಲ್ಲಿ 100ರಲ್ಲಿ 99 ಅಂಕಗಳನ್ನು ಗಳಿಸಿದ್ದಾರೆ. ಅಲ್ಮಾಸ್ ಕಾಲೇಜಿನ ತರಗತಿಗಳಲ್ಲದೆ ಯಾವುದೇ ಟ್ಯೂಶನ್ ಪಡೆಯದೆ ಈ ಸಾಧನೆ ಮಾಡಿದ್ದಾರೆ.

ಅಲ್ಮಾಸ್‌ರ ತಂದೆ ಹಳ್ಳಿಯಲ್ಲಿ ಸಣ್ಣ ಕಿರಾಣಿ ಅಂಗಡಿಯೊಂದನ್ನು ನಡೆಸುತ್ತಿದ್ದಾರೆ.

ಅಲ್ಮಾಸ್ ಹೆಚ್ಚಿನ ಶಿಕ್ಷಣ ಪಡೆದು ವೈದ್ಯೆಯಾಗುವ ಅಭಿಲಾಷೆ ಹೊಂದಿದ್ದಾರೆ. ಇದೀಗ ಅಲ್ಮಾಸ್‌ರ ಕನಸಿಗೆ ನೀರೆರೆಯಲು ಬೆಂಗಳೂರಿನ ಶಾಹೀನ್ಸ್ ಫಾಲ್ಕನ್ ಪಿಯು ಕಾಲೇಜಿನ ಎಂ.ಡಿ. ಅಬ್ದುಲ್ ಸುಭಾನ್ ಮುಂದಾಗಿದ್ದಾರೆ. ಅಲ್ಮಾಸ್‌ರಿಗೆ ಉಚಿತವಾಗಿ ‘ನೀಟ್’ ತರಬೇತಿ ನೀಡಲು ಫಾಲ್ಕನ್ ಕ್ರಮ ಕೈಕೊಳ್ಳಲಿದೆ.

ದಿನನಿತ್ಯ ನೇರಪ್ರಸಾರದ ಮೂಲಕ ನೀಟ್‌ಗೆ ಸಂಬಂಧಿಸಿದ ಆನ್‌ಲೈನ್ ತರಗತಿಗಳು, ದಿನನಿತ್ಯ ಆನ್‌ಲೈನ್ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಇದೆಲ್ಲವನ್ನು ಫಾಲ್ಕನ್ ಉಚಿತವಾಗಿ ನೀಡಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News