ಕೋವಿಡ್ ನಿಯಂತ್ರಿಸುವಲ್ಲಿ ರಾಜ್ಯ ಸರಕಾರ ವಿಫಲ: ಮಾಜಿ ಸಚಿವ ಕೃಷ್ಣಭೈರೇಗೌಡ

Update: 2020-07-15 13:40 GMT

ಬೆಂಗಳೂರು, ಜು.15: ರಾಜ್ಯದಲ್ಲಿ ಕೋವಿಡ್-19ನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವಲ್ಲಿ ರಾಜ್ಯ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಮಾಜಿ ಸಚಿವ ಕೃಷಬೈರೇಗೌಡ ಆರೋಪಿಸಿದ್ದಾರೆ.

ಬಧವಾರ ಇಲ್ಲಿನ ಬ್ಯಾಟರಾಯನಪುರ ಕ್ಷೇತ್ರದ ನವರತ್ನ ಅಗ್ರಹಾರದಲ್ಲಿ ಯುವ ಕಾಂಗ್ರೆಸ್ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಎನ್.ಕೆ.ಮಹೇಶ್‍ ಕುಮಾರ್ ರವರ ಜನ್ಮದಿನದ ಪ್ರಯುಕ್ತ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗುತ್ತಿದ್ದಂತೆಯೇ ರಾಜ್ಯ ಸರಕಾರದ ನಿರ್ಲಕ್ಷ್ಯ ಧೋರಣೆಯು ಹೆಚ್ಚಾಗುತ್ತಿದೆ. ಇದರಿಂದ ರೋಗಿಗಳು ಸೂಕ್ತ ಚಿಕಿತ್ಸೆ ಇಲ್ಲದೆ ಸಾಯುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋವಿಡ್ ಸಂಬಂಧ ಇದುವರೆಗೂ 3300 ಕೋಟಿ ರೂ. ಖರ್ಚು ಮಾಡಿರುವುದಾಗಿ ಲೆಕ್ಕ ತೋರಿಸುತ್ತಿರುವ ಸರಕಾರ ವೆಂಟಿಲೇಟರ್, ಸ್ಯಾನಿಟೈಸರ್, ಪಿಪಿಇ ಕಿಟ್, ಹಾಸಿಗೆ ಬಾಡಿಗೆ ನೆಪದಲ್ಲಿ ಕೋಟ್ಯಂತರ ರೂ.ದುರುಪಯೋಗ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಈ ವೇಳೆ ಕಾಂಗ್ರೆಸ್ ಯುವ ಘಟಕ ಸೇರಿದಂತೆ ಸ್ವಯಂಪ್ರೇರಿತರಾಗಿ ನೂರಾರು ಯುವಕರು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿದರು.

ರಾಜ್ಯ ಸರಕಾರ ಸರಿಯಾದ ರೀತಿಯಲ್ಲಿ ಕೋವಿಡ್-19 ಟೆಸ್ಟಿಂಗ್ ಮಾಡಿದರೆ ಬೆಂಗಳೂರು ನಗರದಲ್ಲಿ 2 ಲಕ್ಷಕ್ಕಿಂತ ಅಧಿಕ ಪ್ರಕರಣಗಳು ಪತ್ತೆಯಾಗುತ್ತವೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ. ಆದರೆ, ರಾಜ್ಯ ಸರಕಾರ ಹೆಚ್ಚಿನ ಪ್ರಮಾಣದಲ್ಲಿ ಟೆಸ್ಟಿಂಗ್ ಮಾಡದೆ ಪ್ರಕರಣಗಳನ್ನು ಮುಚ್ಚಿಡಲು ಪ್ರಯತ್ನಿಸುತ್ತಿದೆ.

-ಕೃಷ್ಣಭೈರೇಗೌಡ, ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News