ದಿನಗೂಲಿ ನೌಕರರಿಗೆ ವಂಚನೆ ಆರೋಪ: ಪಶು ವಿವಿ ವ್ಯವಸ್ಥಾಪಕ ಮಂಡಳಿ ಸದಸ್ಯರ ಸದಸ್ಯತ್ವ ರದ್ದತಿಗೆ ದಸಂಸ ಆಗ್ರಹ

Update: 2020-07-15 15:20 GMT

ಬೆಂಗಳೂರು, ಜು. 15: ನೌಕರಿ ಖಾಯಂ ಮಾಡಿಸುವ ನೆಪದಲ್ಲಿ ದಿನಗೂಲಿ ನೌಕರರಿಂದ ಸಾವಿರಾರು ರೂ.ಹಣವನ್ನು ಪಡೆದು ವಂಚಿಸಿರುವ ಕರ್ನಾಟಕ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಶ್ವ ವಿದ್ಯಾಲಯದ ವ್ಯವಸ್ಥಾಪಕ ಮಂಡಳಿ ಸದಸ್ಯರಾದ ಶಂಕರೇಗೌಡ, ಮುಕುಂದವರ್ಮ ಹಾಗೂ ವೆಂಕಟರೆಡ್ಡಿ ಅವರ ಸದಸ್ಯತ್ವವನ್ನು ರದ್ದು ಮಾಡಲು ಸರಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಆಗ್ರಹಿಸಿ ದಲಿತ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಧರಣಿ ಸತ್ಯಾಗ್ರಹ ನಡೆಸಿದ್ದಾರೆ.

ಬುಧವಾರ ಇಲ್ಲಿನ ಹೆಬ್ಬಾಳದಲ್ಲಿರುವ ಪಶು ವೈದ್ಯಕೀಯ ವಿವಿ ಮುಂಭಾಗದಲ್ಲಿ ಕೊರೋನ ಮಾರ್ಗಸೂಚಿ ಪಾಲಿಸಿ ಧರಣಿ ಸತ್ಯಾಗ್ರಹ ನಡೆಸಿದ ಒಕ್ಕೂಟದ ಕಾರ್ಯಕರ್ತರು, ವ್ಯವಸ್ಥಾಪಕ ಮಂಡಳಿ ಸದಸ್ಯರಾದ ಶಂಕರೇಗೌಡ, ಮುಕುಂದವರ್ಮ ಹಾಗೂ ವೆಂಕಟರೆಡ್ಡಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ದಿನಗೂಲಿ ನೌಕರರಿಗೆ ಕೂಡಲೇ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.

ಸತ್ಯಾಗ್ರಹದ ನೇತೃತ್ವ ವಹಿಸಿದ್ದ ದಸಂಸ(ಭೀಮಶಕ್ತಿ) ರಾಜ್ಯಾಧ್ಯಕ್ಷ ಹೆಬ್ಬಾಳ್ ವೆಂಕಟೇಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಿಶ್ವ ವಿದ್ಯಾಲಯಗಳು ಜಾತೀಯತೆ ಮತ್ತು ಭ್ರಷ್ಟಾಚಾರದ ಕೇಂದ್ರಗಳಾಗಿವೆ. ಹೀಗಾಗಿ ಭವಿಷ್ಯದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಗಗನಕುಸುಮವೇ ಆಗಿದೆ. ದಿನಗೂಲಿ ನೌಕರರಿಂದ ಹಣ ವಸೂಲಿ ಮಾಡುವಂತಹ ವ್ಯವಸ್ಥಾಪಕ ಮಂಡಳಿಯ ಭ್ರಷ್ಟ ಸದಸ್ಯರು, ವಿವಿಯಲ್ಲಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದರು.

ನೌಕರಿ ಖಾಯಂ ಆಸೆಯಿಂದ ಸಾವಿರಾರು ರೂ.ಹಣವನ್ನು ಕಳೆದುಕೊಂಡಿರುವ ದಿನಗೂಲಿ ನೌಕರರಿಗೆ ಅವರ ಹಣವನ್ನು ವ್ಯವಸ್ಥಾಪಕ ಮಂಡಳಿ ಸದಸ್ಯರು ಕೂಡಲೇ ಹಿಂದಿರುಗಿಸಬೇಕು. ವ್ಯವಸ್ಥಾಪಕ ಮಂಡಳಿಯ ವಂಚಕ ಸದಸ್ಯರ ಸದಸ್ಯತ್ವವನ್ನು ತಕ್ಷಣವೇ ರದ್ದುಗೊಳಿಸಲು ಸರಕಾರಕ್ಕೆ ಶಿಫಾರಸ್ಸು ಮಾಡಬೇಕು. ಅಲ್ಲದೆ, ಮಾನವೀಯತೆ ದೃಷ್ಟಿಯಿಂದ ಹತ್ತಾರು ವರ್ಷಗಳಿಂದ ವಿವಿಯಲ್ಲಿ ದುಡಿಯುತ್ತಿರುವ ಎಲ್ಲ ದಿನಗೂಲಿ ನೌಕರರನ್ನು ಖಾಯಂಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.

ಆ ಬಳಿಕ ಪಶು ವೈದ್ಯಕೀಯ ವಿವಿ ಕುಲಪತಿಗೆ ಮನವಿ ಸಲ್ಲಿಸಲಾಯಿತು. ಧರಣಿ ಸತ್ಯಾಗ್ರಹದಲ್ಲಿ ದಸಂಸ ಮುಖಂಡರಾದ ವಿ.ನಾಗರಾಜ್, ಎಂ.ವೆಂಕಟಸ್ವಾಮಿ, ಲಕ್ಷ್ಮಿನಾರಾಯಣ ನಾಗವಾರ, ಮುನಿ ಆಂಜಿನಪ್ಪ, ನಾಗರಾಜ್ ಹಾಗೂ ವಿಶ್ವ ವಿದ್ಯಾಲಯದ ದಿನಗೂಲಿ ನೌಕರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News