ವೇಟ್‌ಲಿಫ್ಟರ್ ಪರ್ದೀಪ್ ಸಿಂಗ್ 4 ವರ್ಷಗಳ ಕಾಲ ಅಮಾನತು

Update: 2020-07-16 04:13 GMT

 ಹೊಸದಿಲ್ಲಿ: ಕಾಮನ್ವೆಲ್ತ್ ಕ್ರೀಡಾಕೂಟ (2018)ದಲ್ಲಿ ಬೆಳ್ಳಿ ಪದಕ ವಿಜೇತ ಮತ್ತು ರಾಷ್ಟ್ರೀಯ ಚಾಂಪಿಯನ್ ಆಗಿರುವ ವೇಟ್‌ಲಿಫ್ಟರ್ ಪರ್ದೀಪ್ ಸಿಂಗ್ ಅವರನ್ನು ಉದ್ದೀಪನಾ ದ್ರವ್ಯ ಸೇವಿಸಿರುವ ಆರೋಪದಲ್ಲಿ ನಾಲ್ಕು ವರ್ಷಗಳ ಕಾಲ ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ.

ಪರ್ದೀಪ್ ಅವರ ರಕ್ತದ ಮಾದರಿಯ ಪರೀಕ್ಷಿಸಿದಾಗ ಅವರ ರಕ್ತದಲ್ಲಿ ಮಾನವ ಬೆೆಳವಣಿಗೆಯ ಹಾರ್ಮೋನ್ (ಎಚ್‌ಜಿಎಚ್) ಅಂಶ ಪತ್ತೆಯಾಗಿದೆ. ಎಚ್‌ಜಿಸಿ ಡೋಪಿಂಗ್ ಭಾರತದಲ್ಲಿ ಇದು ಮೊದಲ ಪ್ರಕರಣವಾಗಿದೆ.

    ವರ್ಲ್ಡ್ ಆ್ಯಂಟಿ-ಡೋಪಿಂಗ್ ಏಜೆನ್ಸಿ (ವಾಡಾ) ಎಚ್‌ಜಿಸಿಯನ್ನು ಸ್ಪರ್ಧೆಗಳಲ್ಲಿ ಮತ್ತು ಹೊರಗೆ ನಿಷೇಧಿಸುತ್ತದೆ. ಇದನ್ನು ಅನಾಬೊಲಿಕ್ ವಿಭಾಗದಲ್ಲಿ ಪಟ್ಟಿ ಮಾಡಲ್ಪಟ್ಟಿದೆ. ಪರ್ದೀಪ್ ಸಿಂಗ್ ಅವರು ಎಚ್‌ಜಿಎಚ್ ಡೋಪಿಂಗ್ ಪ್ರಕರಣದಲ್ಲಿ ಅಮಾನತುಗೊಂಡ ಮೊದಲ ಅಥ್ಲೀಟ್ ಆಗಿದ್ದಾರೆ ಎಂದು ರಾಷ್ಟ್ರೀಯ ಆ್ಯಂಟಿ-ಡೋಪಿಂಗ್ ಏಜೆನ್ಸಿ (ನಾಡಾ) ಮಹಾನಿರ್ದೇಶಕ ಅಗರ್ವಾಲ್ ಹೇಳಿದ್ದಾರೆ.

   ನಾಡಾ ಪರೀಕ್ಷೆ ಆರಂಭಿಸಿದ ಬಳಿಕ ರಕ್ತದ ಮಾದರಿಯಲ್ಲಿ ಎಚ್‌ಜಿಎಚ್ ಪತ್ತೆಹಚ್ಚಿದ ಮೊದಲ ಪ್ರಕರಣವಾಗಿದೆ ಎಂದು ಅಗರ್ವಾಲ್ ಆಂಗ್ಲ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

ಕೆಲವು ಕ್ರೀಡಾಪಟುಗಳು ಕಾರ್ಯ ಕ್ಷಮತೆಯನ್ನು ಹೆಚ್ಚಿ ಸಲು ಎಚ್‌ಜಿಎಚ್ ಬಳಸುತ್ತಿದ್ದಾರೆ ಎಂಬ ಸಲಹೆಯನ್ನು ನಾಡಾ ಸ್ವೀಕರಿಸಿದೆ ಎಂದು ಅಗರ್ವಾಲ್ ಹೇಳಿದ್ದಾರೆ.

  ‘‘ಇಂತಹ ಔಷಧದ ಬಳಕೆ ಮೊದಲು ಇರಲಿಲ್ಲ. ಆದರೆ ಇದನ್ನು ಭಾರತದಲ್ಲಿ ಬಳಸಲಾಗುತ್ತಿದೆ ಎಂದು ಹೇಳುವ ಕೆಲವು ವರದಿಗಳನ್ನು ನಾವು ಸ್ವೀಕರಿಸಿದ್ದೇವೆ. ವೇಟ್‌ಲಿಫ್ಟರ್ ಪರ್ದೀಪ್ ಸಿಂಗ್‌ರನ್ನು ನಾಲ್ಕು ವರ್ಷಗಳ ಕಾಲ ತಾತ್ಕಾಲಿಕ ಅಮಾನತು ಮಾಡಲಾಗಿದೆ ’’ ಎಂದು ಅಗರ್ವಾಲ್ ಹೇಳಿದರು.

  ಕಳೆದ ಡಿಸೆಂಬರ್‌ನಲ್ಲಿ ಪಟಿಯಾಲಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್‌ನಲ್ಲಿ ನಡೆದ ಶಿಬಿರದ ವೇಳೆ ಪರ್ದೀಪ್ ಅವರ ಮಾದರಿಯನ್ನು ಸಂಗ್ರಹಿಸಿ ದೋಹಾದ ವಾಡಾ-ಮಾನ್ಯತೆ ಪಡೆದ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು, ಯಾಕೆಂದರೆ ದಿಲ್ಲಿಯ ರಾಷ್ಟ್ರೀಯ ಡೋಪ್ ಪರೀಕ್ಷಾ ಪ್ರಯೋಗಾಲಯವನ್ನು ಇನ್ನೂ ಸ್ಥಗಿತಗೊಳಿಸಲಾಗಿದೆ .

   ಡೋಪಿಂಗ್ ಪರೀಕ್ಷೆಯಲ್ಲಿ ಅನು ತ್ತೀರ್ಣಗೊಂಡ ಪರ್ದೀಪ್‌ಗೆ ಫಲಿತಾಂಶದ ಬಗ್ಗೆ ಮಾರ್ಚ್‌ನಲ್ಲಿ ತಿಳಿಸಲಾಗಿತ್ತು. ಆದರೆ ಲಾಕ್‌ಡೌನ್ ಕಾರಣದಿಂದಾಗಿ ಬಿ-ಸ್ಯಾಂಪಲ್ ಪರೀಕ್ಷೆಯ ನಂತರ ಮಂಗಳವಾರ ಪರ್ದೀಪ್ ಅವರ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News