ಯಹೂದಿ-ಫೆಲೆಸ್ತೀನೀಯರು ಸಮಾನಹಕ್ಕುಗಳೊಂದಿಗೆ ಜೊತೆಜೊತೆಗೆ ವಾಸಿಸುವ ಕಲ್ಪನೆ ಮುಂದಿಟ್ಟ ಪ್ರಮುಖ ಯಹೂದಿ ಚಿಂತಕ

Update: 2020-07-18 03:53 GMT
ಫೋಟೊ ಕೃಪೆ: twitter.com/ PeterBeinart

ಜೆರುಸಲೇಮ್: ಜೋರ್ಡಾನ್ ನದಿ ಮತ್ತು ಮೆಡಿಟರೇನಿಯನ್ ಸಮುದ್ರದ ನಡುವಿನ ಪ್ರದೇಶದಲ್ಲಿ ಸಮಾನ ಹಕ್ಕುಗಳೊಂದಿಗೆ ಜೊತೆ ಜೊತೆಯಾಗಿ ಯಹೂದಿಗಳು ಮತ್ತು ಫೆಲೆಸ್ತೀನಿಯರು ವಾಸಿಸುವ ಪ್ರಜಾಸತ್ತಾತ್ಮಕ ರಾಷ್ಟ್ರವೊಂದರ ಕಲ್ಪನೆಯನ್ನು ಪ್ರಭಾವಿ ಅಮೆರಿಕನ್ ಇಸ್ರೇಲಿಗರೊಬ್ಬರು ಅನುಮೋದಿಸಿದ್ದಾರೆ ಹಾಗೂ ಆ ಮೂಲಕ ಯಹೂದಿ ವಲಯ ಮತ್ತು ವಾಶಿಂಗ್ಟನ್ ನ ನೀತಿ ನಿರೂಪಕ ವಲಯಗಳಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಇಸ್ರೇಲ್ ಮತ್ತು ಫೆಲೆಸ್ತೀನ್ ಎಂಬ ಎರಡು ದೇಶಗಳ ನಿರ್ಮಾಣವು ಇನ್ನು ಕಾರ್ಯಸಾಧುವಾಗಿರುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪೀಟರ್ ಬೈನಾರ್ಟ್ ಎಂಬ ಈ ಚಿಂತಕ ಈ ಮೂಲಕ ಇಸ್ರೇಲನ್ನು ಯಹೂದಿ ದೇಶವಾಗಿ ಕಾದುಕೊಂಡು ಬರಬೇಕೆನ್ನುವ ಪಾಶ್ಚಾತ್ಯ ವಿದೇಶ ನೀತಿ ನಿರೂಪಕರು ಮತ್ತು ಜಗತ್ತಿನಾದ್ಯಂತ ಇರುವ ಹಲವಾರು ಯಹೂದಿಗಳ ಪ್ರಧಾನ ಕಲ್ಪನೆಯನ್ನು ಧಿಕ್ಕರಿಸಿದ್ದಾರೆ.

ಇಸ್ರೇಲ್-ಫೆಲೆಸ್ತೀನ್ ಸಂಘರ್ಷವನ್ನು ಕೊನೆಗೊಳಿಸಲು ಅಮೆರಿಕ ಮತ್ತು ಯುರೋಪಿಯನ್ ರಾಜತಾಂತ್ರಿಕರು ದಶಕಗಳಿಂದ ವಿಫಲ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಆದರೆ, ಇಸ್ರೇಲ್ನ ಜೊತೆಜೊತೆಗೆ ಸ್ವತಂತ್ರ ಫೆಲೆಸ್ತೀನ್ ದೇಶವನ್ನು ನಿರ್ಮಿಸುವುದು, ಶಾಂತಿಯನ್ನು ಕಾಯ್ದುಕೊಳ್ಳುವ ಪ್ರಮುಖ ವಿಧಾನವಾಗಿದೆ ಎನ್ನುವ ಕಲ್ಪನೆಯನ್ನು ಅವರ ಪ್ರಯತ್ನಗಳು ದುರ್ಬಲಗೊಳಿಸಿವೆ ಎಂದು ಬೈನಾರ್ಟ್ ಹೇಳುತ್ತಾರೆ.
“ನನ್ನಂತೆ ಎರಡು-ದೇಶ ಪರಿಹಾರಕ್ಕೆ ಬದ್ಧತೆ ಹೊಂದಿದ ಯಹೂದಿಗಳು ಮತ್ತು ಯಹೂದಿಯೇತರರ ಒಂದು ವರ್ಗ ಅಮೆರಿಕದಲ್ಲಿದೆ. ಅವರು ಈಗ ಆ ಪರಿಹಾರದಲ್ಲಿ ನಿಧಾನವಾಗಿ ಭರವಸೆ ಕಳೆದುಕೊಳ್ಳುತ್ತಿದ್ದಾರೆ. ಆದರೆ ಅದಕ್ಕೆ ಪರ್ಯಾಯ ಏನು ಎನ್ನುವುದರ ಬಗ್ಗೆ ಅವರಲ್ಲಿ ಯಾವುದೇ ಕಲ್ಪನೆ ಇರಬೇಕೆಂದೇನೂ ಇಲ್ಲ’’ ಎಂದು ಬೈನಾರ್ಟ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. 
ಇದಕ್ಕೂ ಮೊದಲು ಅವರು ಜುಲೈ 8ರ ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯ ಸಂಪಾದಕೀಯ ಪುಟದಲ್ಲಿ ಇದೇ ವಿಷಯದ ಬಗ್ಗೆ ಲೇಖನವೊಂದನ್ನು ಬರೆದಿದ್ದಾರೆ ಹಾಗೂ ‘ಜೂಯಿಶ್ ಕರೆಂಟ್ಸ್’ ಎಂಬ ಮ್ಯಾಗಝಿನ್ ನಲ್ಲಿ ಇನ್ನೊಂದು ದೀರ್ಘ ಲೇಖನ ಬರೆದಿದ್ದಾರೆ.
ಇಸ್ರೇಲ್ ಮತ್ತು ಫೆಲೆಸ್ತೀನ್ ಎಂಬ ಎರಡು ದೇಶಗಳ ಪರಿಹಾರದ ಹಿಂದಿನ ತರ್ಕ ಸರಳವಾಗಿದೆ. ಮತದಾನದ ಅಧಿಕಾರ ಇಲ್ಲದ ಲಕ್ಷಾಂತರ ಫೆಲೆಸ್ತೀನೀಯರನ್ನು ನಿಯಂತ್ರಿಸುವುದನ್ನು ಇಸ್ರೇಲ್ ಮುಂದುವರಿಸಿದರೆ, ಇಸ್ರೇಲ್ ಕಠಿಣ ಆಯ್ಕೆಯೊಂದನ್ನು ಮಾಡಬೇಕಾಗುತ್ತದೆ; ಅದೇನೆಂದರೆ ಯಥಾಸ್ಥಿತಿಯನ್ನು ಕಾಯ್ದುಕೊಂಡು ಬರುವುದು ಹಾಗೂ ಆ ಮೂಲಕ ಪ್ರಜಾಸತ್ತೆಯನ್ನು ಕಳೆದುಕೊಳ್ಳುವುದು ಅಥವಾ ಫೆಲೆಸ್ತೀನಿಯರಿಗೆ ಮತದಾನದ ಹಕ್ಕನ್ನು ನೀಡುವುದು ಹಾಗೂ ಆ ಮೂಲಕ ತನ್ನ ಯಹೂದಿ ಬಹುಸಂಖ್ಯಾತ ಸ್ಥಾನಮಾನವನ್ನು ಕಳೆದುಕೊಳ್ಳುವುದು. ಸ್ವತಂತ್ರ ಫೆಲೆಸ್ತೀನ್ ದೇಶವು ಉಭಯ ತಂಡಗಳ ಆಶೋತ್ತರಗಳನ್ನು ಈಡೇರಿಸುವುದು ಎಂಬುದಾಗಿ ವ್ಯಾಪಕವಾಗಿ ಭಾವಿಸಲಾಗಿದೆ.
ಫೆಲೆಸ್ತೀನಿಯರು ತಮ್ಮದೆಂದು ಹೇಳುವ ಜಮೀನುಗಳಲ್ಲಿ ಇಸ್ರೇಲ್ ದಶಕಗಳಿಂದ ವಸತಿ ಸಂಕೀರ್ಣಗಳನ್ನು ನಿರ್ಮಿಸುತ್ತಾ ಬಂದಿರುವುದು ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ಮಧ್ಯಪ್ರಾಚ್ಯ ಶಾಂತಿ ಯೋಜನೆಯು ನಿರಂತರವಾಗಿ ಫೆಲೆಸ್ತೀನಿಯರ ಭೂಭಾಗವನ್ನು ಕಡಿತಗೊಳಿಸುತ್ತಾ ಬಂದಿರುವ ಹಿನ್ನೆಲೆಯಲ್ಲಿ ಪ್ರಾಯೋಗಿಕ ಫೆಲೆಸ್ತೀನ್ ದೇಶವೊಂದರ ನಿರ್ಮಾಣ ಅಸಾಧ್ಯವಾಗಿ ಪರಿಣಮಿಸಿದೆ ಎಂದು ಬೈನಾರ್ಟ್ ಹೇಳುತ್ತಾರೆ.
ಇದರ ಪರಿಣಾಮವೆಂದರೆ, ಎರಡು ಜನಾಂಗೀಯರನ್ನೊಳಗೊಂಡ ದೇಶವೊಂದರ ನಿರ್ಮಾಣ. ಆದರೆ ಈ ದೇಶದಲ್ಲಿ ಇಸ್ರೇಲಿಗಳು ಮೂಲಭೂತ ಹಕ್ಕುಗಳನ್ನು ಹೊಂದಿರುತ್ತಾರೆ, ಆದರೆ, ಲಕ್ಷಾಂತರ ಫೆಲೆಸ್ತೀನೀಯರಿಗೆ ಯಾವುದೇ ಮೂಲಭೂತ ಹಕ್ಕಿರುವುದಿಲ್ಲ.

“ಆದರೆ, ನೋವಿನ ಸಂಗತಿಯೆಂದರೆ, ನನ್ನಂತಹ ಉದಾರವಾದಿ ಯಹೂದಿಗಳು ದಶಕಗಳಿಂದ ಕಲ್ಪಿಸಿಕೊಂಡು ಬಂದಿರುವ ಪರಿಹಾರ (ಯಹೂದಿಗಳು ಮತ್ತು ಫೆಲೆಸ್ತೀನೀಯರಿಗೆ ಪ್ರತ್ಯೇಕ ದೇಶಗಳು) ವಿಫಲವಾಗಿದೆ’’ ಎಂದು ಬೈನಾರ್ಟ್ ಬರೆದಿದ್ದಾರೆ. “ಯಹೂದಿಗಳು ಮತ್ತು ಫೆಲೆಸ್ತೀನೀಯರನ್ನು ಪ್ರತ್ಯೇಕಿಸುವ ಗುರಿಯನ್ನು ತೊರೆದು, ಯಹೂದಿ-ಫೆಲೆಸ್ತೀನಿಯನ್ ಸಮಾನತೆಯನ್ನು ಸ್ವೀಕರಿಸಲು ಉದಾರವಾದಿ ಯಹೂದಿಗಳಿಗೆ ಇದು ಸಕಾಲ’’ ಎಂದಿದ್ದಾರೆ.
ಪ್ರಗತಿಪರ ಯಹೂದಿ ಧ್ವನಿಗಳಲ್ಲಿ ಬೈನಾರ್ಟ್ ಒಬ್ಬರು. ಅವರು ಯುವ ಅಮೆರಿಕನ್ ಯಹೂದಿಗಳಲ್ಲಿ ಜನಪ್ರಿಯರಾಗಿದ್ದಾರೆ. ಈ ಯುವ ಯಹೂದಿಗಳು ಇಸ್ರೇಲಿ ನೀತಿಗಳನ್ನು ತಮ್ಮ ಹೆತ್ತವರು ಮತ್ತು ಅಜ್ಜ-ಅಜ್ಜಿಯರಿಗಿಂತ ಹೆಚ್ಚು ಟೀಕಿಸುತ್ತಾರೆ.
ಅವರ ಹೇಳಿಕೆಯು ಯಹೂದಿ-ಅಮೆರಿಕನ್ ಜಗತ್ತಿನಲ್ಲಿ ಭೂಕಂಪವನ್ನೇ ಸೃಷ್ಟಿಸಿದೆ. ಇಸ್ರೇಲ್ ದೇಶಕ್ಕೆ ಬೆಂಬಲ ನೀಡುವ ವಿಷಯದಲ್ಲಿ ಯಹೂದಿ-ಅಮೆರಿಕನ್ನರಲ್ಲಿ ಒಮ್ಮತವಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುರ ತೀವ್ರವಾದಿ ಸರಕಾರದ ಕಟು ಟೀಕಾಕಾರಲ್ಲಿಯೂ ಪ್ರತ್ಯೇಕ ಇಸ್ರೇಲ್ ದೇಶ ಬೇಕು ಎನ್ನುವುದರ ಬಗ್ಗೆ ಒಮ್ಮತವಿದೆ.
ಬೈನಾರ್ಟ್ ಓರ್ವ ಅಮಾಯಕ, ಅವಾಸ್ತವವಾದಿ ಹಾಗೂ ಯಹೂದಿ ವಿರೋಧಿ ಎಂಬುದಾಗಿ ಎಲ್ಲ ವರ್ಗಗಳ ಯಹೂದಿಗಳು ಬಣ್ಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News