​ಆಗಸ್ಟ್ 3 ಅಥವಾ 5ರಂದು ರಾಮ ಮಂದಿರಕ್ಕೆ ಶಿಲಾನ್ಯಾಸ ಸಾಧ್ಯತೆ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ

Update: 2020-07-19 17:11 GMT

ಅಯೋಧ್ಯೆ, ಜು. 19: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮ ಆಗಸ್ಟ್ 3 ಅಥವಾ 5ರಂದು ನಡೆಯಲಿದೆ ಎಂದು ಉತ್ತರಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಮೇಲ್ವಿಚಾರಣೆ ನಡೆಸಲು ರೂಪಿಸಲಾದ ಟ್ರಸ್ಟ್ ರವಿವಾರ ಹೇಳಿದೆ. 
ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗಿದೆ ಎಂದು ಅದು ಹೇಳಿದೆ.

ನಕ್ಷತ್ರಗಳು ಹಾಗೂ ಗ್ರಹಗಳ ಚಲನೆಯ ಲೆಕ್ಕಾಚಾರದಲ್ಲಿ ಪ್ರಧಾನಿ ಅವರು ಶುಭ ದಿನವಾದ ಆಗಸ್ಟ್ 3 ಹಾಗೂ 5ರಂದು ಭೇಟಿ ನೀಡಬಹುದೆಂದು ನಾವು ಸಲಹೆ ನೀಡಿದ್ದೇವೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ನ ಅಧ್ಯಕ್ಷ ನೃತ್ಯ ಗೋಪಾಲ ದಾಸ್ ಅವರ ವಕ್ತಾರ ಮಹಾಂತ ಕಮಲ್ ನಯನ ದಾಸ್ ತಿಳಿಸಿದ್ದಾರೆ.

 ಶಿಲಾನ್ಯಾಸ ಕಾರ್ಯಕ್ರಮಕ್ಕೆ ತಾತ್ಕಾಲಿಕ ದಿನಾಂಕ ನಿಗದಿಪಡಿಸಲು ರಾಮ ಮಂದಿರ ಟ್ರಸ್ಟ್ನ ಸದಸ್ಯರು ಶನಿವಾರ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮಾಜಿ ಪ್ರಾಥಮಿಕ ಕಾರ್ಯದರ್ಶಿ ಹಾಗೂ ರಾಮಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ, ಉತ್ತರಪ್ರದೇಶದ ಪ್ರಾಥಮಿಕ ಕಾರ್ಯದರ್ಶಿ ಅವನೀಶ್ ಅವಸ್ಥಿ ಮೊದಲಾದವರು ಉಪಸ್ಥಿತರಿದ್ದರು. ರಾಮ ಮಂದಿರ ನಿರ್ಮಾಣಕ್ಕೆ ಹಣ ಸಂಗ್ರಹಿಸಲು ದೇಶಾದ್ಯಂತದ 10 ಕೋಟಿ ಕುಟುಂಬಗಳನ್ನು ಸಂಪರ್ಕಿಸಲಾಗಿದೆ. ರಾಮ ಮಂದಿರ ನಿರ್ಮಾಣಕ್ಕೆ ಮೂರು ವರ್ಷ ಕಾಲ ಬೇಕಾಗಬಹುದು ಎಂದು ರಾಮ ಮಂದಿರ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News