ಸುರಕ್ಷಿತ ರೋಗ ನಿರೋಧಕ ವ್ಯವಸ್ಥೆಯನ್ನು ಸೃಷ್ಟಿಸಿದ ಆಕ್ಸ್‌ಫರ್ಡ್ ಕೊರೋನ ಲಸಿಕೆ: ವಿಜ್ಞಾನಿಗಳ ಹೇಳಿಕೆ

Update: 2020-07-20 17:08 GMT
ಸಾಂದರ್ಭಿಕ ಚಿತ್ರ

ಲಂಡನ್, ಜು. 20: ತಮ್ಮ ಪ್ರಾಯೋಗಿಕ ಕೊರೋನ ವೈರಸ್ ಲಸಿಕೆಯು ಆರಂಭಿಕ ಪ್ರಯೋಗದಲ್ಲಿ, ಅದನ್ನು ಸೇವಿಸಿದ ನೂರಾರು ಜನರಲ್ಲಿ ಸುರಕ್ಷಿತ ರೋಗನಿರೋಧಕ ವ್ಯವಸ್ಥೆಯನ್ನು ಸೃಷ್ಟಿಸಿದೆ ಎಂದು ಬ್ರಿಟನ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಹೇಳಿದ್ದಾರೆ ಎಂದು ಅಸೋಸಿಯೇಟಡ್ ಪ್ರೆಸ್ ಸುದ್ದಿಸಂಸ್ಥೆ ವರದಿ ಮಾಡಿದೆ.

ಆಕ್ಸ್‌ಫರ್ಡ್ ಕೋವಿಡ್-19 ಲಸಿಕೆ ಕಾರ್ಯಕ್ರಮದಲ್ಲಿ ತೊಡಗಿಕೊಂಡಿರುವ ಬ್ರಿಟಿಶ್ ಸಂಶೋಧಕರು ಸುಮಾರು 1,000 ಜನರಲ್ಲಿ ಲಸಿಕೆಯ ಪ್ರಯೋಗವನ್ನು ಎಪ್ರಿಲ್‌ನಲ್ಲಿ ಆರಂಭಿಸಿದ್ದಾರೆ. ಪ್ರಯೋಗದಲ್ಲಿ ಭಾಗವಹಿಸಿದ ಸ್ವಯಂಸೇವಕರ ಪೈಕಿ ಅರ್ಧದಷ್ಟು ಮಂದಿ ಲಸಿಕೆಯನ್ನು ಸೇವಿಸಿದ್ದಾರೆ ಎಂದು ವರದಿ ತಿಳಿಸಿದೆ. ಇಂಥ ಆರಂಭಿಕ ಪ್ರಯೋಗಗಳನ್ನು ಸಾಮಾನ್ಯವಾಗಿ ಔಷಧಗಳ ಸುರಕ್ಷತೆಯನ್ನು ಅಧ್ಯಯನ ಮಾಡುವುದಕ್ಕಾಗಿ ನಡೆಸಲಾಗುತ್ತದೆ. ಆದರೆ, ಈ ಪ್ರಕರಣದಲ್ಲಿ, ಪ್ರಯೋಗದಲ್ಲಿ ಭಾಗವಹಿಸಿದ ಸ್ವಯಂಸೇವಕರಲ್ಲಿ ಲಸಿಕೆಯು ಯಾವ ರೀತಿಯ ರೋಗನಿರೋಧಕ ವ್ಯವಸ್ಥೆಯನ್ನು ರೂಪಿಸಿದೆ ಎಂಬುದನ್ನೂ ಸಂಶೋಧಕರೂ ಅಧ್ಯಯನ ಮಾಡುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ತಮ್ಮ ಪ್ರಾಯೋಗಿಕ ಕೋವಿಡ್-19 ಲಸಿಕೆಯು 18ರಿಂದ 55 ವರ್ಷ ವಯಸ್ಸಿನವರಲ್ಲಿ ಉಭಯ ರೋಗನಿರೋಧಕ ಶಕ್ತಿಯನ್ನು ರೂಪಿಸಿರುವುದನ್ನು ನಾವು ಪತ್ತೆಹಚ್ಚಿದ್ದೇವೆ ಎಂದು ‘ದ ಲ್ಯಾನ್ಸೆಟ್’ ಪತ್ರಿಕೆಯಲ್ಲಿ ಸೋಮವಾರ ಪ್ರಕಟಗೊಂಡ ಸಂಶೋಧನಾ ವರದಿಯಲ್ಲಿ ವಿಜ್ಞಾನಿಗಳು ಹೇಳಿದ್ದಾರೆ.

ಲಸಿಕೆಯು ರೋಗನಿರೋಧಕ ವ್ಯವಸ್ಥೆಯ ಎರಡೂ ವಿಭಾಗಗಳಿಗೆ ಚಾಲನೆ ನೀಡುತ್ತದೆ ಹಾಗೂ ಸೋಂಕನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವ ಪ್ರತಿಕಾಯಗಳನ್ನೂ ಉತ್ಪಾದಿಸುತ್ತದೆ ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಜೆನ್ನರ್ ಇನ್‌ಸ್ಟಿಟ್ಯೂಟ್‌ನ ಡಾ. ಆ್ಯಡ್ರಿಯನ್ ಹಿಲ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News