ವಿಶೇಷ ಕ್ರಿಮಿನಲ್ ಕಾನೂನುಗಳೆಂಬ ಇನ್ನೊಂದು ಸಾಂಕ್ರಾಮಿಕ

Update: 2020-07-22 19:30 GMT

ಸಾಮಾನ್ಯ ಕ್ರಿಮಿನಲ್ ನ್ಯಾಯ ಕಾನೂನಿನ ಅದಕ್ಷತೆಯಿಂದಾಗಿಯೇ ಇಲ್ಲಿ; ಭಾರತದಲ್ಲಿ ವಿಶೇಷ ಕ್ರಿಮಿನಲ್ ಕಾನೂನುಗಳ ಆವಶ್ಯಕತೆ ಉಂಟಾಗುತ್ತದೆಂದು ದಶಕಗಳ ಲಾಗಾಯ್ತು ನಮಗೆ ಹೇಳಲಾಗಿದೆ. ಭಯೋತ್ಪಾದನೆಯಂತಹ ವಿಶೇಷ/ಅಸಾಮಾನ್ಯ ಅಪರಾಧಗಳನ್ನು ನಿಭಾಯಿಸಲು ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಪ್ರಕ್ರಿಯೆ ಸಂಹಿತೆ ಮತ್ತು ಭಾರತೀಯ ಪುರಾವೆ ಕಾಯ್ದೆ ಅಪರಾಧಗಳಿಗೆ ಅನ್ವಯಿಸುವ ಸಾಮಾನ್ಯ, ಸಾರ್ವತ್ರಿಕ ಕಾನೂನುಗಳು. ಇವುಗಳು ಭಯೋತ್ಪಾದನೆಯಂತಹ ಅಪರಾಧಗಳನ್ನು ತಡೆಯಲು ಸಾಕಾಗದು, ಆದ್ದರಿಂದ ಹಲವಾರು ವಿಶೇಷ ಕ್ರಿಮಿನಲ್ ಕಾನೂನುಗಳನ್ನು ಮಾಡಬೇಕಾಗುತ್ತದೆಂದು ವಾದಿಸಲಾಗಿದೆ. ಹೆಚ್ಚಾಗಿ ಇಂತಹ ಕಾನೂನುಗಳನ್ನು ಒಂದು ಭಯೋತ್ಪಾದಕ ದಾಳಿ ನಡೆದ ಬಳಿಕ ಕೂಡಲೇ ಮಾಡಲಾಗುತ್ತದೆ. ದಾಳಿಯ ತೀವ್ರತೆಯ ನೆನಪು ಹಸಿಯಾಗಿರುವಾಗಲೇ ಇಂತಹ ಕಾನೂನುಗಳಿಗೆ ಸಾರ್ವಜನಿಕ ಬೆಂಬಲ ಪ್ರಬಲವಾಗಿರುತ್ತದೆ. ಭಯೋತ್ಪಾದನೆಯಂತಹ ಒಂದು ಅಪರಾಧಕ್ಕೆ ಒಂದು ಅಸಾಮಾನ್ಯ ಕಾನೂನಿನ ಅಗತ್ಯವಿದೆ ಎಂಬುದನ್ನು ದೇಶದ ಜನತೆ ಒಪ್ಪುತ್ತದೆ ಮತ್ತು ನಮ್ಮ ಪರಿಕಲ್ಪನೆಯಲ್ಲಿ ಯಾರು ಭಯೋತ್ಪಾದಕರೋ ಅಂತಹವರ ವಿರುದ್ಧ ಮಾತ್ರ ಈ ಕಾನೂನನ್ನು ಬಳಸಲಾಗುತ್ತದೆ ಎಂದು ಕೂಡ ನಾವು ತಿಳಿಯುತ್ತೇವೆ. ಆದರೆ ಎಂಬತ್ತರ ದಶಕದಿಂದ ಇಂದಿನವರೆಗೆ ಯಾರು ಭಯೋತ್ಪಾದಕ ಎಂಬ ಪರಿಕಲ್ಪನೆಯೇ ಬದಲಾಗುತ್ತಾ ಬಂದಿದೆ.

ಪರಿಣಾಮವಾಗಿ, ಭಾರತದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ಇಂದು ನಾವು ವಿಶೇಷ ಕ್ರಿಮಿನಲ್ ಕಾನೂನುಗಳ ಒಂದು ಸರಮಾಲೆಯನ್ನೇ ಕಾಣಬಹುದಾಗಿದೆ. ಈ ಕಾನೂನುಗಳು ಭಾರತೀಯ ದಂಡ ಸಂಹಿತೆ (ಐ.ಪಿ.ಸಿ.)ಗಿಂತ ಹೇಗೆ ಭಿನ್ನವಾಗಿದೆ ಎಂದು ಸ್ವಲ್ಪಗಮನಿಸೋಣ. ಐ.ಪಿ.ಸಿ. ಕೂಡ ಭಯೋತ್ಪಾದಕ ಚಟುವಟಿಕೆಗಳನ್ನು ಒಳಗೊಳ್ಳುತ್ತದೆ ಮತ್ತು ಅವುಗಳಿಗೆ ಗರಿಷ್ಠ ಶಿಕ್ಷೆಯನ್ನೂ ವಿಧಿಸುತ್ತದೆ. ಉದಾಹರಣೆಗೆ, ಭಾರತ ಸರಕಾರದ ವಿರುದ್ಧ ಯುದ್ಧ ಹೂಡುವ ಒಳಸಂಚು ಅಥವಾ ಯುದ್ಧ ಹೂಡುವುದಕ್ಕೆ ಐ.ಪಿ.ಸಿ. ಅನುಕ್ರಮವಾಗಿ, ಜೀವಾವಧಿ ಶಿಕ್ಷೆ ಮತ್ತು ಮರಣದಂಡನೆ ಶಿಕ್ಷೆಯನ್ನು ವಿಧಿಸುತ್ತದೆ. ಐ.ಪಿ.ಸಿ. ಯಾವುದೇ ನಿರ್ದಿಷ್ಟ ಅಪರಾಧವನ್ನು ಒಳಗೊಳ್ಳುವುದಿಲ್ಲವಾದರೆ ಅದಕ್ಕೆ ಏಕೆ ತಿದ್ದುಪಡಿ ತರಬಾರದು? ವಿಶೇಷ ಕಾನೂನನ್ನು ಮಾಡುವ ಅವಶ್ಯಕತೆ ಯಾಕೆ ಮತ್ತು ಎಲ್ಲಿಂದ ಬರುತ್ತದೆ.?
ಈ ವಿಶೇಷ ಕಾನೂನುಗಳ ವಿವರಗಳಲ್ಲಿ ಮೇಲಿನ ಪ್ರಶ್ನೆಗಳಿಗೆ ಉತ್ತರವಿದೆ. ಸಾರ್ವತ್ರಿಕ ಕ್ರಿಮಿನಲ್ ಕಾನೂನುಗಳ ಪ್ರಕ್ರಿಯೆಗಳಿಗೆ ಸಂಬಂಧಿಸಿದ ಅಂಶಗಳು ವಿಶೇಷ ಕಾನೂನುಗಳಿಗಿಂತ ಭಿನ್ನವಾಗಿರುತ್ತವೆ. ಅಂದರೆ, ಜಾಮೀನು ಪಡೆಯುವ ಹಕ್ಕು ಮತ್ತು ಅಪರಾಧ ನ್ಯಾಯಾಲಯದಲ್ಲಿ ಸಾಬೀತಾಗುವವರೆಗೆ ಆಪಾದಿತ ಅಪರಾಧಿಯಲ್ಲ ಎಂಬ ಮುಖ್ಯ ತತ್ವಗಳು ವಿಶೇಷ ಕ್ರಿಮಿನಲ್ ಕಾನೂನುಗಳಲ್ಲಿ ಇರುವುದಿಲ್ಲ. ಅಲ್ಲದೇ ಯುಎಪಿಎ(ಅನ್‌ಲಾಫುಲ್ ಆಕ್ಟಿವಿಟೀಸ್ ಪ್ರಿವೆನ್ಷನ್ ಆ್ಯಕ್ಟ್-ಅಕ್ರಮ ಚಟುವಟಿಕೆ (ತಡೆ) ಕಾಯ್ದೆ)ಯಲ್ಲಿ ಸಾಮಾನ್ಯ ಕ್ರಿಮಿನಲ್ ಕಾನೂನು ಹೇಳುವ ವಿಚಾರಣಾ ಪೂರ್ವ ಕಸ್ಟಡಿಯ ಅವಧಿಯನ್ನು ಬೇಕಾಬಿಟ್ಟಿ ವಿಸ್ತರಿಸಬಹುದಾಗಿದೆ.

ಒಟ್ಟಿನಲ್ಲಿ ವಿಶೇಷ ಕ್ರಿಮಿನಲ್ ಕಾನೂನುಗಳ ನಿಯಮಗಳು, ವಿಧಿಗಳು ಕ್ರಿಮಿನಲ್ ವಿಚಾರಣೆಯನ್ನೇ, ವಿಚಾರಣೆ ವ್ಯವಸ್ಥೆಯನ್ನೇ ಬುಡಮೇಲುಗೊಳಿಸುತ್ತವೆ. ಬುಡಮೇಲುಗೊಳಿಸುವುದೆಂದು ನಾನು ಯಾಕೆ ಹೇಳುತ್ತೇನೆಂದರೆ ಯುಎಪಿಎ ಅಂತಹ ಕಾನೂನುಗಳು ಮೇಲೆ ಹೇಳಿರುವಂತೆ ಕ್ರಿಮಿನಲ್ ಕಾನೂನುಗಳ ಎರಡು ಮೂಲ ತತ್ವಗಳನ್ನೇ ಅಲ್ಲಗಳೆಯುತ್ತವೆ.

ಉದಾಹರಣೆಗೆ ಭೀಮಾ ಕೋರೆಗಾಂವ್ ಮೊಕದ್ದಮೆಯಲ್ಲಿ ಆಪಾದಿತರಿಗೆ ಏನಾಗಿದೆ ನೋಡಿ. ಅವರ ಮೇಲಿನ ಆಪಾದನೆಗಳು ಇನ್ನೂ ಸಾಬೀತಾಗಿಲ್ಲ ಮತ್ತು ಅವರ ವಿರುದ್ಧ ಇರುವ ಸಾಕ್ಷ್ಯಗಳ ಪರೀಕ್ಷೆ ಆಗಿಲ್ಲ; ಅವರಿನ್ನೂ ವರ್ಷಗಳಿಂದ ಜೈಲಿನಲ್ಲೇ ಕೊಳೆಯುತ್ತಿದ್ದಾರೆ. ಯಾವುದೇ ಒಂದು ನಾಗರಿಕ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ಹೀಗೆ ಆಪಾದಿತರು ವಿಚಾರಣೆ ಇಲ್ಲದೆ ಜೈಲಿನಲ್ಲಿ ಕೊಳೆಯುವುದು ಅಪೇಕ್ಷಣೀಯವೇ? ಎಂದು ಕೇಳಲೇಬೇಕಾಗಿದೆ. ವಿಚಾರಣೆ ಇನ್ನೂ ಆರಂಭವೇ ಆಗದಿರುವಾಗ ಆಪಾದಿತರು ವರ್ಷಗಟ್ಟಲೆ ಜೈಲಿನಲ್ಲಿ ಇರುವುದು ಹಾಗೂ ಅವರಿಗೆ ಮತ್ತೆ ಮತ್ತೆ ಜಾಮೀನು ನಿರಾಕರಿಸುವುದು ಸರಿಯೇ? ಎಂದು ಪ್ರಶ್ನಿಸಲೇ ಬೇಕಾಗುತ್ತದೆ.
ಅಲ್ಲದೆ, ಸರಕಾರವು ಸಾಮಾನ್ಯವಾಗಿ ಭಿನ್ನಮತೀಯರ ಹಾಗೂ ಕಾರ್ಯಕರ್ತರ, ತನ್ನ ಟೀಕಾಕಾರರ ವಿರುದ್ಧ ಅವರ ಬಾಯಿ ಮುಚ್ಚಿ ಸಲು ಬಯಸುತ್ತದೆ. ದಿಲ್ಲಿಯಲ್ಲಿ ಸಿಎಎ ಪ್ರತಿಭಟನಾಕಾರರಲ್ಲಿ ಆಯ್ದ ಕೆಲವರನ್ನು ಬಂಧಿಸಲಾಯಿತು. ಜಾಗತಿಕ ಸಾಂಕ್ರಾಮಿಕವೊಂದರ ನಡುವೆ ಯುಎಪಿಎಯ ಅಡಿಯಲ್ಲಿ ಇನ್ನಷ್ಟು ಆಪಾದನೆಗಳನ್ನು ಸೇರಿಸಿ ಹೀಗೆ ಭಿನ್ನಮತೀಯರ ಬಾಯಿ ಮುಚ್ಚಿಸುವುದು ಈ ಕಾನೂನುಗಳ ಹಾಸ್ಯಾಸ್ಪದ ಬಳಕೆಗೆ ಒಂದು ಉದಾಹರಣೆಯಾಗಿದೆ. ಇದನ್ನೆಲ್ಲ ರಾಷ್ಟ್ರೀಯ ಭದ್ರತೆ ಹಾಗೂ ಭಯೋತ್ಪಾದನೆಯನ್ನು ಹತ್ತಿಕ್ಕುವುದು ಎಂಬ ವಾದದ ನೆಲೆಯಲ್ಲಿ, ನೆಪದಲ್ಲಿ ಮಾಡಲಾಗುತ್ತಿದೆ.

ಸರಕಾರ ಈಗಾಗಲೇ ತಂದಿರುವ ವಿಶೇಷ ಕಾನೂನುಗಳ ಅಡಿಯಲ್ಲಿ ಭಿನ್ನಮತೀಯರನ್ನು ಹತ್ತಿಕ್ಕುವುದು ಸರಕಾರಕ್ಕೆ ಸುಲಭವಾಗಿದೆ: ತನಗಿಷ್ಟವಾಗದವರ ವಿರುದ್ಧ ಕಾನೂನುಗಳನ್ನು ಬಳಸಿ ಅದರ ಪ್ರಕ್ರಿಯೆಯಲ್ಲಿ ಅವರು ಒದ್ದಾಡುವಂತೆ ಮಾಡಿದರಾಯಿತು. ಈ ಕಾನೂನುಗಳಿಂದಾಗಿ ಭದ್ರತೆಯ ಒಂದು ಸುಳ್ಳು ಪರಿಕಲ್ಪನೆಗೆ ನಾವು ನಮ್ಮ ಹಕ್ಕುಗಳನ್ನು ವಸ್ತು ವಿನಿಮಯ (ಬಾರ್ಟರ್) ಮಾಡಿಕೊಳ್ಳುವಂತಾಗಿದೆ.

ಕೃಪೆ: deccanherald 

(ಲೇಖಕರು, ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ವಿವಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.)

Writer - ಕುನಾಲ್ ಅಂಬಸ್ತ

contributor

Editor - ಕುನಾಲ್ ಅಂಬಸ್ತ

contributor

Similar News