ಲಾಕ್‍ಡೌನ್‍ನಿಂದ ಆರ್ಥಿಕ ಸಂಕಷ್ಟ: ಒಂದೇ ದಿನ ಗುಜರಾತ್‍ನ ಮೂವರು ಉದ್ಯಮಿಗಳು ಆತ್ಮಹತ್ಯೆ

Update: 2020-07-23 06:24 GMT

ಅಹ್ಮದಾಬಾದ್: ಗುಜರಾತ್‍ನಲ್ಲಿ ನಿಲ್ಲದ ಕೋವಿಡ್ ಸಮಸ್ಯೆ, ಜತೆಗೆ ಲಾಕ್‍ಡೌನ್ ಹೇರಿಕೆಯಿಂದಾಗಿ ಉದ್ಯಮದಲ್ಲಿ ನಷ್ಟದಿಂದಾಗಿ ಎದುರಾಗಿರುವ ಆರ್ಥಿಕ ಸಂಕಷ್ಟದಿಂದ ಬೇಸತ್ತು ಮೂವರು ಉದ್ಯಮಿಗಳು ಒಂದೇ ದಿನ ಆತ್ಮಹತ್ಯೆಗೈದಿದ್ದಾರೆ ಎಂದು Ahmedabad Mirror ವರದಿ ಮಾಡಿದೆ.

ಆತ್ಮಹತ್ಯೆ ಮಾಡಿಕೊಂಡವರ ಪೈಕಿ ಒಬ್ಬರು ಅಹ್ಮದಾಬಾದ್‍ ನವರಾಗಿದ್ದರೆ ಇನ್ನಿಬ್ಬರು ರಾಜ್‍ಕೋಟ್‍ನವರಾಗಿದ್ದಾರೆ.

ಅಹ್ಮದಾಬಾದ್‍ನ ಪ್ರಹ್ಲಾದ್‍ ನಗರದಲ್ಲಿ ವಾಸವಾಗಿದ್ದ 68 ವರ್ಷದ ಕೆಮಿಕಲ್ ಉದ್ಯಮಿ ಸುಶೀಲ್ ತಿಬ್ರವಾಲ್ ತಾವು ವಾಸಿಸುತ್ತಿದ್ದ 12 ಅಂತಸ್ತುಗಳ ವಸತಿ ಸಮುಚ್ಛಯದ ಟೆರೇಸಿನಿಂದ ಕೆಳಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾವು ಸಾಲ ಪಡೆದಿದ್ದ ವ್ಯಕ್ತಿಯ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಅವರು ತಮ್ಮ ಡೆತ್ ನೋಟಿನಲ್ಲಿ ಬರೆದಿದ್ದಾರೆ. ಅವರು ಶೇ 5ರ ಬಡ್ಡಿಗೆ ಪಡೆದಿದ್ದ 20 ಲಕ್ಷ ರೂ. ಸಾಲ ಮರುಪಾವತಿಸಿಲ್ಲವೆಂದು ಸಾಲ ನೀಡಿದಾತ ಕುಟುಂಬವನ್ನೇ ಕೊಲ್ಲುವ ಬೆದರಿಕೆ ಹಾಕಿದ್ದನೆಂದು ಅವರ ಪುತ್ರ, ಪ್ಲೈವುಡ್ ಉದ್ಯಮಿಯಾಗಿರುವ ಸಾಕೇತ್ ಹೇಳಿದ್ದಾರೆ.

ಅಲ್ಲದೇ, ರಾಜಕೋಟ್‍ನಲ್ಲಿ ಸಣ್ಣ ಫ್ಯಾಕ್ಟರಿಯೊಂದನ್ನು ನಡೆಸುತ್ತಿದ್ದ ಜಯಂತಿಭಾಯಿ ಭಲನಿ ಹಾಗೂ ಸಾರಿಗೆ ಉದ್ಯಮಿ ಧರ್ಮೇಂದ್ರ ಸಿನ್ಹ ಜಡೇಜ ಎಂಬವರು ತಾವು ಪಡೆದ ಸಾಲ ಮರುಪಾವತಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಧರ್ಮೇಂದ್ರ ಸಿನ್ಹ ರಾಜಕೋಟ್‍ನಲ್ಲಿನ ತಮ್ಮ ಕಚೇರಿಗೆ ತೆರಳಿ ಅಲ್ಲಿ ನೇಣು ಬಿಗಿದು ಆತ್ಮಹತ್ಯ ಮಾಡಿಕೊಂಡಿದ್ದರೆ, 51 ವರ್ಷದ ಜಯಂತಿಭಾಯಿ ನೆರೆಯ ತ್ರಂಬ ಗ್ರಾಮದಲ್ಲಿ ಬಾವಿಗೆ ಜಿಗಿದು ಪ್ರಾಣ ಕಳೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News