ಜನಾಂಗೀಯ ನಿಂದನೆ ವಿಚಾರದಲ್ಲಿ ಆರ್ಚರ್‌ಗೆ ಬೆಂಬಲ ನೀಡುವ ಅಗತ್ಯವಿದೆ: ಹೋಲ್ಡರ್

Update: 2020-07-24 05:24 GMT

ಲಂಡನ್: ‘‘ಕೋವಿಡ್-19 ಶಿಷ್ಟಾಚಾರ ಉಲ್ಲಂಘನೆಯ ಬಳಿಕ ಜನಾಂಗೀಯ ನಿಂದನೆಗೆ ಒಳಗಾಗಿರುವ ಜೋಫ್ರಾ ಆರ್ಚರ್‌ಗೆಬೆಂಬಲ ನೀಡುವ ಅಗತ್ಯವಿದೆ. ಇಂಗ್ಲೆಂಡ್‌ನ ಪ್ರತಿಭಾವಂತ ವೇಗದ ಬೌಲರ್ ಇಲ್ಲದೆ ಕ್ರಿಕೆಟ್ ಇರಲು ಸಾಧ್ಯವಿಲ್ಲ’’ ಎಂದು ವೆಸ್ಟ್ ಇಂಡೀಸ್ ನಾಯಕ ಜೇಸನ್ ಹೋಲ್ಡರ್ ಹೇಳಿದ್ದಾರೆ.

ಹೋವೆಯಲ್ಲಿರುವ ತನ್ನ ಮನೆಗೆ ಅನಧಿಕೃತವಾಗಿ ಭೇಟಿ ನೀಡುವ ಮೂಲಕ ಟೆಸ್ಟ್ ಸರಣಿಯಲ್ಲಿ ಜಾರಿಯಲ್ಲಿರುವ ಜೈವಿಕ-ಸುರಕ್ಷತೆಯ ನಿಯಮವನ್ನು ಉಲ್ಲಂಘಿಸಿದ್ದ ಆರ್ಚರ್ ಓಲ್ಡ್ ಟ್ರಾಫೋರ್ಡ್ ನಲ್ಲಿ ನಡೆದಿರುವ ಮೂರು ಪಂದ್ಯಗಳ ಸರಣಿಯ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡದಿಂದ ಕೈಬಿಡಲ್ಪಟ್ಟಿದ್ದರು ಹಾಗೂ ಅವರಿಗೆ ದಂಡವನ್ನು ವಿಧಿಸಲಾಗಿತ್ತು.

ಬಾರ್ಬಡೋಸ್ ಸಂಜಾತ ವೇಗದ ಬೌಲರ್ ಆರ್ಚರ್, ಆನ್‌ಲೈನ್‌ನಲ್ಲಿ ಜನಾಂಗೀಯ ನಿಂದನೆ ಎದುರಿಸಿದ ಬಳಿಕ ವೆಸ್ಟ್‌ಇಂಡೀಸ್ ವಿರುದ್ಧ ಮ್ಯಾಂಚೆಸ್ಟರ್‌ನಲ್ಲಿ ಶುಕ್ರವಾರದಿಂದ ಆರಂಭವಾಗಲಿರುವ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಡಲು ಮಾನಸಿಕವಾಗಿ ಸಿದ್ಧವಾಗದೆ ಇರುವ ಕುರಿತು ‘ಡೈಲಿ ಮೇಲ್’ನಲ್ಲಿ ಬರೆದಿರುವ ತನ್ನ ಅಂಕಣಬರಹದಲ್ಲಿ ಸುಳಿವು ನೀಡಿದ್ದಾರೆ.

‘‘ಕಳೆದ ಚಳಿಗಾಲದಲ್ಲಿ ನ್ಯೂಝಿಲ್ಯಾಂಡ್‌ನಲ್ಲಿ ನಡೆದಿದ್ದ ಪಂದ್ಯದ ವೇಳೆ ಅವರಿಗೆ(ಆರ್ಚರ್)ಜನಾಂಗೀಯ ನಿಂದನೆ ಮಾಡಲಾಗಿತ್ತು. ನಿಂದಿಸಿರುವ ಕಿವೀಸ್ ಅಭಿಮಾನಿಗೆ 2022ರ ತನಕ ನಿಷೇಧ ಹೇರಲಾಗಿತ್ತು. ಇದೀಗ ಮತ್ತೊಮ್ಮೆ ಜನಾಂಗೀಯ ನಿಂದನೆ ಕೇಳಿದಾಗ ಯಾವುದೇ ವ್ಯಕ್ತಿಗೆ ಆಘಾತವಾಗುವುದು ಸಹಜ. ಎಂದಿಗಿಂತಲೂ ಹೆಚ್ಚಾಗಿ ನಾವೆಲ್ಲರೂ ಆರ್ಚರ್ ಬೆನ್ನಿಗೆ ನಿಂತು ಒಗ್ಗಟ್ಟಿನಿಂದ ಬೆಂಬಲ ನೀಡುವ ಸಮಯ ಈಗ ಬಂದಿದೆ. ನಾವು ವರ್ಣಭೇದ ನೀತಿ ಹಾಗೂ ನಿಂದನೆಯನ್ನು ನಿರ್ಮೂಲನೆ ಮಾಡಬೇಕಾಗಿದೆ. ವೆಸ್ಟ್‌ಇಂಡೀಸ್ ತಂಡವಾಗಿ ನಾವು ಅವರಿಗೆ ಏನು ಸಹಾಯ ಮಾಡಬಹುದೋ, ಅದನ್ನು ಮಾಡುತ್ತೇವೆ’’ ಎಂದು ಗುರುವಾರ ‘ಡೈಲಿ ಮೇಲ್’ನಲ್ಲಿ ಪ್ರಕಟವಾಗಿರುವ ತನ್ನ ಅಂಕಣಬರಹದಲ್ಲಿ ಹೋಲ್ಡರ್ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News