ರಾಜಸ್ತಾನ: ಕಾಂಗ್ರೆಸ್‌ನೊಂದಿಗೆ ಬಿಎಸ್ಪಿ ಶಾಸಕರ ವಿಲೀನ ಪ್ರಶ್ನಿಸಿ ಹೈಕೋರ್ಟ್‌ಗೆ ಬಿಜೆಪಿ ಅರ್ಜಿ

Update: 2020-07-24 17:27 GMT

ಜೈಪುರ, ಜು.24: ರಾಜಸ್ತಾನದಲ್ಲಿ ಕಳೆದ ವರ್ಷ ಬಹುಜನ ಸಮಾಜ ಪಕ್ಷ(ಬಿಎಸ್‌ಪಿ)ದ 6 ಶಾಸಕರು ಕಾಂಗ್ರೆಸ್‌ನೊಂದಿಗೆ ವಿಲೀನವಾಗಿರುವುದನ್ನು ಅಸಿಂಧುಗೊಳಿಸುವಂತೆ ಕೋರಿ ಬಿಜೆಪಿ ರಾಜಸ್ತಾನ ಹೈಕೋರ್ಟ್‌ನಲ್ಲಿ ಅರ್ಜಿ ದಾಖಲಿಸಿದೆ.

ಬಿಎಸ್ಪಿ ಶಾಸಕರ ವಿಲೀನದಿಂದಾಗಿ ವಿಧಾನಸಭೆಯಲ್ಲಿ ಅಶೋಕ್ ಗೆಹ್ಲೋಟ್ ನೇತ್ವತದ ಸರಕಾರದ ಬಲ 107ಕ್ಕೇರಿ (ಸದನದ ಸದಸ್ಯ ಬಲ 200) ಬಹುಮತ ಉಳಿಸಿಕೊಳ್ಳಲು ಸಾಧ್ಯವಾಗಿತ್ತು.

2018ರ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಪಿಯ ಟಿಕೆಟ್‌ನಡಿ ಸ್ಪರ್ಧಿಸಿದ್ದ ಸಂದೀಪ್ ಯಾದವ್, ವಾಜಿಬ್ ಅಲಿ, ದೀಪಚಂದ್ ಖೇರಿಯಾ, ಲಖನ್ ಮೀನಾ, ಜೋಗೇಂದ್ರ ಅವಾನಾ ಮತ್ತು ರಾಜೇಂದ್ರ ಗುಡ ಗೆದ್ದಿದ್ದರು. ಬಳಿಕ ಒಂದು ತಂಡವಾಗಿ ಕಾಂಗ್ರೆಸ್‌ನೊಂದಿಗೆ ವಿಲೀನವಾಗುವ ಇಚ್ಛೆ ವ್ಯಕ್ತಪಡಿಸಿ ಸ್ಪೀಕರ್‌ಗೆ ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ, ಈ ಶಾಸಕರು ಕಾಂಗ್ರೆಸ್‌ ನ ಅವಿಭಾಜ್ಯ ಅಂಗ ಎಂದು ಪರಿಗಣಿಸಬಹುದು ಎಂದು ಕಳೆದ ವರ್ಷದ ಸೆಪ್ಟೆಂಬರ್ 18ರಂದು ಸ್ಪೀಕರ್ ಸೂಚಿಸಿದ್ದರು. ಇದನ್ನು ಪ್ರಶ್ನಿಸಿ ಬಿಜೆಪಿ ಶಾಸಕ ಮದನ್ ದಿಲಾವರ್ ಸ್ಪೀಕರ್‌ಗೆ ಅರ್ಜಿ ಸಲ್ಲಿಸಿದ್ದು, ವಿಲೀನವನ್ನು ಪಕ್ಷಾಂತರ ಎಂದು ಪರಿಗಣಿಸಬಾರದು .ಆದ್ದರಿಂದ 6 ಶಾಸಕರನ್ನು ಅನರ್ಹಗೊಳಿಸಬೇಕೆಂದು ಅರ್ಜಿಯಲ್ಲಿ ವಾದಿಸಿದ್ದರು.

ಈಗ ಸಚಿನ್ ಪೈಲಟ್ ಬಣದ 19 ಶಾಸಕರನ್ನು ಅನರ್ಹಗೊಳಿಸಲು ನೋಟಿಸ್ ನೀಡಿರುವ ಸ್ಪೀಕರ್, ಕಾಂಗ್ರೆಸ್‌ ನೊಂದಿಗೆ ವಿಲೀನಗೊಂಡ 6 ಬಿಎಸ್ಪಿ ಶಾಸಕರ ವಿರುದ್ಧವೂ ಇದೇ ಮಾನದಂಡ ಬಳಸಬೇಕು ಎಂದು ಕೋರಿ ಮದನ್ ದಿಲಾವರ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಜುಲೈ 27ರಂದು ಏಕಸದಸ್ಯ ಪೀಠ ಅರ್ಜಿಯ ವಿಚಾರಣೆ ನಡೆಸಲಿದೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News