ಉತ್ತರಪ್ರದೇಶ: ಅಪಹೃತ ಲ್ಯಾಬ್ ಟೆಕ್ನೀಶಿಯನ್ ಹತ್ಯೆ ಮಾಡಿದ ದುಷ್ಕರ್ಮಿಗಳು

Update: 2020-07-24 18:08 GMT

ಲಕ್ನೊ, ಜು.24: ಕಳೆದ ತಿಂಗಳು ಅಪಹರಣಕ್ಕೀಡಾಗಿದ್ದ ಲ್ಯಾಬ್ ಟೆಕ್ನೀಶಿಯನ್(ಪ್ರಯೋಗಾಲಯ ತಂತ್ರಜ್ಞ)ನನ್ನು ಅಪಹರಣಕಾರರು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದು, ಕರ್ತವ್ಯ ನಿರ್ಲಕ್ಷ ತೋರಿದ ಕಾರಣಕ್ಕೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಸಹಿತ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ವಜಾಗೊಳಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಕಾನ್ಪುರದ ಪ್ರಯೋಗಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 28 ವರ್ಷದ ಸಂಜೀತ್ ಯಾದವ್‌ರನ್ನು ಕಳೆದ ತಿಂಗಳು ಅಪಹರಿಸಲಾಗಿತ್ತು. ಬಿಡುಗಡೆಗೆ 30 ಲಕ್ಷ ರೂ. ಒತ್ತೆಹಣಕ್ಕೆ ಬೇಡಿಕೆ ಇರಿಸಲಾಗಿತ್ತು. ಈ ಬಗ್ಗೆ ಯಾದವ್ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರ ಸೂಚನೆಯಂತೆ ಜುಲೈ 13ರಂದು ನಿಗದಿತ ಸ್ಥಳದಲ್ಲಿ ಅಪಹರಣಕಾರರಿಗೆ 30 ಲಕ್ಷ ರೂ. ಹಸ್ತಾಂತರಿಸಲಾಗಿತ್ತು. ಆದರೆ ಭಾರೀ ಸಂಖ್ಯೆಯಲ್ಲಿ ಪೊಲೀಸರು ಮರೆಯಲ್ಲಿ ನಿಂತು ಕಾಯುತ್ತಿದ್ದರೂ ಅಪಹರಣಕಾರರು ಹಣ ಪಡೆದು, ಯಾದವ್‌ನನ್ನು ಬಿಡುಗಡೆಗೊಳಿಸದೆ ಪರಾರಿಯಾಗಿದ್ದರು.

ಈ ಘಟನೆಯಿಂದ ಉತ್ತರಪ್ರದೇಶದ ಪೊಲೀಸರ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಬಳಿಕ ದುಷ್ಕರ್ಮಿಗಳ ಪತ್ತೆ ಕಾರ್ಯಾಚರಣೆ ಮುಂದುವರಿಸಿದ್ದ ಪೊಲೀಸರು ಹಲವು ಶಂಕಿತ ವ್ಯಕ್ತಿಗಳನ್ನು ಬಂಧಿಸಿದ್ದು, ಇಬ್ಬರು ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಆದರೆ ಸಂಜೀತ್ ಯಾದವ್‌ರನ್ನು ಕೊಂದು, ಮೃತದೇಹವನ್ನು ಪಾಂಡು ನದಿಗೆ ಎಸೆದಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಯಾದವ್‌ನೊಂದಿಗೆ ಈ ಹಿಂದೆ ಮತ್ತೊಂದು ಲ್ಯಾಬ್‌ನಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದರು.

ಪ್ರಕರಣಕ್ಕೆ ಸಂಬಂಧಿಸಿ, ಕರ್ತವ್ಯ ನಿರ್ಲಕ್ಷ ತೋರಿದ ಹಿನ್ನೆಲೆಯಲ್ಲಿ ಎಡಿಷನಲ್ ಸುಪರಿಂಟೆಂಡೆಂಟ್ ಆಫ್ ಪೊಲೀಸ್ (ದಕ್ಷಿಣ) ಅಪರ್ಣಾ ಗುಪ್ತ, ವೃತ್ತ ನಿರೀಕ್ಷಕ ಮನೋಜ್ ಕುಮಾರ್ ಗುಪ್ತ, ಠಾಣಾಧಿಕಾರಿ ರಂಜೀತ್ ರಾಯ್, ಪೊಲೀಸ್ ಹೊರಠಾಣೆಯ ಉಸ್ತುವಾರಿ ಅಧಿಕಾರಿ ರಾಜೇಶ್ ಕುಮಾರ್‌ರನ್ನು ಸರಕಾರ ಅಮಾನತುಗೊಳಿಸಿದೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಸಮಾಜವಾದಿ ಪಕ್ಷದ ಮುಖಂಡ, ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಘಟನೆಯನ್ನು ಖಂಡಿಸಿದ್ದು, ಬಿಜೆಪಿ ಸರಕಾರದ ನೈತಿಕತೆಯೂ ಅಪಹರಣವಾದಂತೆ ಕಾಣುತ್ತದೆ ಎಂದು ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News