ಹಾಸ್ಯಾಸ್ಪದವಾಗಿರುವ ಸಿನೆಮಾ ಪತ್ರಿಕೋದ್ಯಮ

Update: 2020-07-25 19:30 GMT

ಬಾಲಿವುಡ್‌ನಲ್ಲಿ ಸಿನೆಮಾ ಪತ್ರಿಕೋದ್ಯಮವನ್ನು ವದಂತಿಗಳ, ಉದ್ರೇಕಕಾರಿತ್ವದ ಮತ್ತು ಅತಿಯಾದ ಪ್ರಚಾರದ ಅತಿರಂಜಿತ ಮಟ್ಟಕ್ಕೆ ಇಳಿಸಲಾಗಿದೆ. ಬಹುತೇಕ ಸಿನೆಮಾ ವಿಮರ್ಶೆಗಳು ಸಿನೆಮಾದ ಹಾಡು, ನೃತ್ಯ, ವಸ್ತ್ರಾಲಂಕಾರದ ಬಗ್ಗೆ ಕೆಲವು ಕಮೆಂಟ್‌ಗಳಿರುವ ಸಿನೆಮಾದ ಕಥಾ ಸಾರಾಂಶವನ್ನು ಕೆಟ್ಟದಾಗಿ ಬರೆದಿರುವ ಬರಹಗಳು. ಸಿನೆಮಾಗಳ ಬಗ್ಗೆ ಹೇಗೆ ಬರೆಯಬಾರದು ಎಂಬುದಕ್ಕೆ ಇವು ಉದಾಹರಣೆಗಳು.


ನಟ ಸುಶಾಂತ್ ಸಿಂಗ್ ರಾಜಪೂತ್ ಅವರ ಸಾವು ಹಲವು ಪ್ರಶ್ನೆಗಳನ್ನೆತ್ತಿದೆ. ನಟರನ್ನು ನಿಂದಿಸುವ, ಅವರ ಬಗ್ಗೆ ಸುಳ್ಳು ಸುದ್ದಿ ಪ್ರಕಟಿಸುವ ಸಿನೆಮಾ ಸಂಬಂಧಿ ಸುದ್ದಿಪತ್ರಿಕೆಗಳ, ಚಾನೆಲ್‌ಗಳ ಬಗ್ಗೆ ಹಲವರು ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ. ಸುದ್ದಿಗಳನ್ನು ಸೃಷ್ಟಿಸಲಾಗುತ್ತದೆ ಮತ್ತು ಯಾವ ನಟರನ್ನು ಗುರಿ ಮಾಡಿ ಅಂತಹ ಸುದ್ದಿಗಳನ್ನು ಪ್ರಕಟಿಸಲಾಗುತ್ತದೋ, ಆ ನಟನ ಪ್ರತಿಸ್ಪರ್ಧಿಗಳು ಅಂತಹ ಸುದ್ದಿಗಳನ್ನು ನಿಯಂತ್ರಿಸುತ್ತಾರೆ ಎಂದು ಕೆಲವರು ಹೇಳಿದ್ದಾರೆ. ಅಂತಹ ಸುದ್ದಿಗಳು ಗಾಳಿ ಮಾತನ್ನು, ವದಂತಿಗಳನ್ನು ಆಧರಿಸಿದ್ದು. ಹಲವು ವೇಳೆ ಆ ಸುದ್ದಿಯನ್ನು ಬರೆದಾತನ ಹೆಸರನ್ನು ಕೂಡ ಉಲ್ಲೇಖಿಸಿರುವುದಿಲ್ಲ. ಅದನ್ನು ಸುದ್ದಿ ಎಂದು ಕರೆಯುವುದೇ ಹಾಸ್ಯಾಸ್ಪದ.

ಸಿನೆಮಾ ಸಂಪಾದಕ ಹಾಗೂ ಲೇಖಕ ಅಪೂರ್ವ ಅಸ್ರಾಣಿ ತನ್ನ ವಿಶ್ವಾಸಾರ್ಹತೆಗೆ ಮಸಿ ಬಳಿಯುವ ಹಲವು ಲೇಖನಗಳನ್ನು ಬರೆದು ತನ್ನನ್ನು ಹೇಗೆ ಅವಮಾನಿಸಲಾಯಿತು ಎಂಬ ಬಗ್ಗೆ ದೀರ್ಘವಾದ ಒಂದು ಬ್ಲಾಗ್ ಬರೆದಿದ್ದಾರೆ. ಹಾಗೆಯೇ ನಟ ಹಿಮಾಂಶು ಮಲಿಕ್ ಕೂಡ ತನಗಾದ ಕಹಿ ಅನುಭವ ಹಾಗೂ ಹಿಂದಿ ಸಿನೆಮಾ ಉದ್ಯಮದ ಕುತಂತ್ರ, ಷಡ್ಯಂತ್ರಗಳ ಬಗ್ಗೆ ಒಂದು ಲೇಖನ ಬರೆದಿದ್ದಾರೆ ಅದೇನಿದ್ದರೂ ಈ ಸುದ್ದಿಗಳ ವದಂತಿಗಳ ಭರಾಟೆಯಲ್ಲಿ ನಾವು ಗಂಭೀರವಾದ ಒಂದು ವಿಷಯವನ್ನು ಬದಿಗೆ ತಳ್ಳಿ ಬಿಡಬಾರದು: ಅದೇ, ಭಾರತದಲ್ಲಿ ಸಿನೆಮಾ ವರದಿಗಾರಿಕೆಯ ಅಥವಾ ಇನ್ನಷ್ಟು ನಿರ್ದಿಷ್ಟವಾಗಿ ಹೇಳಬೇಕೆಂದರೆ ಬಾಲಿವುಡ್‌ನಲ್ಲಿ ಸಿನೆಮಾ ವರದಿಗಾರಿಕೆಯ ಸ್ವರೂಪ. ಸಿನೆಮಾ ಸುದ್ದಿಗಳ ವಿಕೃತ ರೂಪ.

ಬಾಲಿವುಡ್‌ನಲ್ಲಿ ಸಿನೆಮಾ ಪತ್ರಿಕೋದ್ಯಮವನ್ನು ವದಂತಿಗಳ, ಉದ್ರೇಕಕಾರಿತ್ವದ ಮತ್ತು ಅತಿಯಾದ ಪ್ರಚಾರದ ಅತಿರಂಜಿತ ಮಟ್ಟಕ್ಕೆ ಇಳಿಸಲಾಗಿದೆ. ಬಹುತೇಕ ಸಿನೆಮಾ ವಿಮರ್ಶೆಗಳು ಸಿನೆಮಾದ ಹಾಡು, ನೃತ್ಯ, ವಸ್ತ್ರಾಲಂಕಾರದ ಬಗ್ಗೆ ಕೆಲವು ಕಮೆಂಟ್‌ಗಳಿರುವ ಸಿನೆಮಾದ ಕಥಾ ಸಾರಾಂಶವನ್ನು ಕೆಟ್ಟದಾಗಿ ಬರೆದಿರುವ ಬರಹಗಳು. ಸಿನೆಮಾಗಳ ಬಗ್ಗೆ ಹೇಗೆ ಬರೆಯಬಾರದು ಎಂಬುದಕ್ಕೆ ಇವು ಉದಾಹರಣೆಗಳು. ಈ ಸಿನೆಮಾ ವಿಮರ್ಶಕರು ಸಿನೆಮಾವೊಂದು ನಿರ್ವಾತ ಪ್ರದೇಶದಲ್ಲಿ ಸಂಭವಿಸುತ್ತದೆಂದು ತಿಳಿದಿದ್ದಾರೆ. ಅವರ ವಿಮರ್ಶೆಯಲ್ಲಿ ಸಿನೆಮಾದ ಸಾಮಾಜಿಕ, ಸಾಂಸ್ಕೃತಿಕ ಆಯಾಮಗಳ ಉಲ್ಲೇಖವೇ ಇರುವುದಿಲ್ಲ. ಇನ್ನು ಉಳಿದ ಭಾಗ ಸಿನೆಮಾ ನಟ ನಟಿಯರ ಸಂದರ್ಶನಗಳಿಂದ ತುಂಬಿರುತ್ತದೆ. ಸಂದರ್ಶನದಲ್ಲಿ ಕೇಳಲಾಗುವ ಪ್ರಶ್ನೆಗಳನ್ನು ಸಂದರ್ಶನದ ಮೊದಲೇ ಕಳುಹಿಸಲಾಗಿರುತ್ತದೆ. ಇನ್ನು ಸಿನೆಮಾ ನಟರ ಜೀವನಶೈಲಿ, ಅವರ ಮನೆ, ಅವರ ರಜಾ ಪ್ರವಾಸಗಳು, ಅವರ ಮಕ್ಕಳು ಹಾಗೂ ಬರ್ತ್‌ಡೇ ಪಾರ್ಟಿಗಳು ಮತ್ತು ಇಂತಹ ಕೊನೆಯಿಲ್ಲದ ಸಂಗತಿಗಳ ವಿವರಗಳು. ಈ ದೇಶದಲ್ಲಿ ಸಿನೆಮಾ ಸಂಬಂಧಿಸಿ ವರದಿಯೆಂದರೆ ವದಂತಿಗಳು, ಗಾಸಿಪ್ ಮತ್ತು ಹಗರಣಗಳು ಎಂಬಂತಾಗಿದೆ. ಇದರರ್ಥ ಉತ್ತಮ ವಿಮರ್ಶೆಗಳು ಇಲ್ಲವೇ ಇಲ್ಲ ಎಂದಲ್ಲ. ಆದರೆ ಅವು ಅತಿ ವಿರಳ.

ಈಗ ನಾವು ಕೇಳಬೇಕಾದ ಪ್ರಶ್ನೆ:
ಸಿನೆಮಾ ವರದಿ, ವಿಮರ್ಶೆ, ಬರವಣಿಗೆ ಇಷ್ಟು ಕೆಳಮಟ್ಟಕ್ಕೆ ಯಾಕೆ ಇಳಿಯಿತು? ಉದಾರೀಕರಣೋತ್ತರ ಭಾರತದಲ್ಲಿ ದೇಶದ ಮೀಡಿಯಾ ರಂಗದಲ್ಲಿ ಆದ ಪ್ರಮುಖ ಬದಲಾವಣೆಗಳು ಮತ್ತು ಕೆಲವರು ಕರೆದಿರುವಂತೆ ಜೀವನಶೈಲಿ ಪತ್ರಿಕೋದ್ಯಮ ಇದಕ್ಕೆ ಕಾರಣವಿರಬಹುದು. ಸಿನೆಮಾ ಬರವಣಿಗೆ ಕೇಂದ್ರ ಬಿಂದು ನಟರ ಜೀವನಶೈಲಿ ಮತ್ತು ಪ್ರಮುಖ ನಟರ ಸುತ್ತ ಒಂದು ಪ್ರಭಾವಲಯವನ್ನು ನಿರ್ಮಿಸುವುದಷ್ಟೇ ಆಯಿತು. ಸಿನೆಮಾ ಪತ್ರಿಕೆಗಳ ಮುಖಪುಟದಲ್ಲಿ ಯಾವ ನಟರ ಫೋಟೋ ಇದೆ ಮತ್ತು ಅವರು ನೀಡುವ ಮಸಾಲೆ ವಿವರಗಳನ್ನು ಅವಲಂಬಿಸಿ ಪತ್ರಿಕೆಗಳು ಮಾರಾಟವಾಗ ತೊಡಗಿದವು. ಆ ಪತ್ರಿಕೆಗಳು ತಮ್ಮದೇ ಆದ ಸಿನೆಮಾ ಪ್ರಶಸ್ತಿಗಳು ನೀಡುವುದನ್ನು ಕೂಡ ಆರಂಭಿಸಿದವು. ಹೀಗೆ ಸಿನೆಮಾ ಪತ್ರಿಕೆಗಳ ಮತ್ತು ಸಿನೆಮಾ ಉದ್ಯಮದ ನಡುವೆ ಒಂದು ಅಪವಿತ್ರ ಸಂಬಂಧ, ಮೈತ್ರಿ ಬೆಳೆಯಿತು. ಸಿನೆಮಾ ಪ್ರಶಸ್ತಿ ಪ್ರದಾನ ಸಮಾರಂಭವಂತೂ ಸಂಬಂಧಿತ ಟಿವಿ ಚಾನೆಲ್‌ನ ಟಿಆರ್‌ಪಿ ಹೆಚ್ಚಿಸುವ ಒಂದು ಭವ್ಯ ಸಮಾರಂಭವಲ್ಲದೆ ಮತ್ತೇನೂ ಅಲ್ಲ. ಸಿನೆಮಾ ರಂಗದಲ್ಲಿರುವ ಅತ್ಯುತ್ತಮರನ್ನು, ಅತಿ ಶ್ರೇಷ್ಠರನ್ನು ಗೌರವಿಸುತ್ತಿದ್ದೇವೆ ಎನ್ನುವ ಸಂಘಟಕರ ಹೇಳಿಕೆಗಳು ಕೇವಲ ಅನುಕೂಲಸಿಂಧು ಅಲ್ಲದೆ ಬೇರೇನೂ ಅಲ್ಲ.

ನಟರ ವೈಯಕ್ತಿಕ ವಿವರಗಳನ್ನು ಬಂಡವಾಳ ಮಾಡಿಕೊಂಡು ಬರೆಯುವ ಸಿನೆಮಾ ಬರವಣಿಗೆ ಸ್ವಲ್ಪವೇ ಸಮಯದಲ್ಲಿ ಒಂದು ಉದ್ಯಮವಾಯಿತು. ಸ್ಪರ್ಧಾತ್ಮಕ ಸಿನೆಮಾ ಬರವಣಿಗೆ ಮತ್ತು ವಿಶ್ಲೇಷಣೆಗೆ ಸಿಗುತ್ತಿದ್ದ ಸ್ಥಳಾವಕಾಶ ಸಂಕುಚನಗೊಳ್ಳ ಲಾರಂಭಿಸಿತು. ಸಿನೆಮಾ ಸ್ಟಾರ್‌ಗಳು ವಿಮಾನ ನಿಲ್ದಾಣಗಳಲ್ಲಿ ಬಂದಿಳಿಯುವ ಅಥವಾ ಅವರು ಮನೆಯಿಂದ ಹೊರಡುವ ಫೋಟೊಗಳನ್ನು ತೋರಿಸುವ ಮೂಲಕ ಟ್ಯಾಬ್ಲಾಯ್ಡಾ ರೀತಿಯ ವರದಿ ವಿಜೃಂಭಿಸಿತು. ಓದುಗರು ನೋಡಲು ಇಷ್ಟಪಡುವುದು ಇದನ್ನೇ ಎಂದು ನಮಗೆ ಹೇಳಲಾಯಿತು.

ಇಂತಹ ಸಿನೆಮಾ ವರದಿ ಎಗ್ಗಿಲ್ಲದೆ ಕದ್ದು ನೋಡುವ ಚಟವನ್ನು (ವಯೂರಿಸಂ) ಪ್ರೋತ್ಸಾಹಿಸುತ್ತದೆ ಮತ್ತು ಕೊಳಕು ಉಪಭೋಗ ವಾದ (ಕನ್ಸೂರಿಸಂ) ಅನ್ನು ಹುಟ್ಟು ಹಾಕುತ್ತದೆ. ಇಂತಹ ವಾತಾವರಣದಲ್ಲಿ ನಿಜವಾಗಿ ಯಾವ ಸಿನೆಮಾಗಳ ಬಗ್ಗೆ ಬರೆಯಬೇಕೋ ಅಂತಹ ಸಿನೆಮಾಗಳ ಬಗ್ಗೆ ಯಾವ ವರದಿಯೂ ಪ್ರಕಟವಾಗುವುದಿಲ್ಲ.

(ಲೇಖಕರು ಪೂನಾದ ಫ್ಲೇಮ್ ವಿಶ್ವವಿದ್ಯಾನಿಲಯದಲ್ಲಿ ಬೋಧಕರಾಗಿದ್ದಾರೆ.)
 

Writer - ಕುನಾಲ್ ರೇ

contributor

Editor - ಕುನಾಲ್ ರೇ

contributor

Similar News