ಬೆಂಗಳೂರು: ವ್ಯಕ್ತಿಯ ಹತ್ಯೆಗೆ ಸುಪಾರಿ; ಇಬ್ಬರು ಆರೋಪಿಗಳಿಗೆ ಗುಂಡೇಟು

Update: 2020-07-26 12:04 GMT

ಬೆಂಗಳೂರು,  ಜು.26: ವ್ಯಕ್ತಿಯೊಬ್ಬನ ಹತ್ಯೆಗೆ ಹಣ ಪಡೆದಿದ್ದ ಆರೋಪ ಕೇಳಿಬಂದ ಹಿನ್ನೆಲೆ ಇಬ್ಬರು ಸುಪಾರಿ ಹಂತಕರ ಮೇಲೆ ಪೊಲೀಸರು ಗುಂಡು ಹಾರಿಸಿ ಬಂಧಿಸಿರುವ ಘಟನೆ ರವಿವಾರ ನಡೆದಿದೆ.

ನಗರದ ನಿವಾಸಿಗಳಾದ ಭರತ್, ಅರುಣ್ ಎಂಬವರು ಪೊಲೀಸರ ಗುಂಡೇಟಿನಿಂದ ಗಾಯಗೊಂಡು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಮೀನು ವಿಚಾರಕ್ಕೆ ಅರುಣ್ ಮತ್ತು ಭರತ್ ಕಳೆದ ಕೆಲ ದಿನಗಳ ಹಿಂದೆ ರಾಜಶೇಖರ್ ಎಂಬವರ ಹತ್ಯೆ ಮಾಡಲು 10 ಲಕ್ಷ ರೂ. ಸುಪಾರಿ ಪಡೆದಿದ್ದರು. ನಂತರ ಜು.23 ರಂದು ಹೆಸರಘಟ್ಟ ಬಳಿ ಯುವಕರ ಗುಂಪೊಂದು ಕಟ್ಟಿಕೊಂಡು ರಾಜಶೇಖರ್ ಅವರ ಕೊಲೆಗೆ ಯತ್ನಿಸಿದ್ದರು ಎನ್ನಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರು ದಾಖಲಾಗಿದ್ದರೂ ತಮ್ಮ ಪ್ರಯತ್ನದಿಂದ ಹಿಂದೆ ಸರಿಯದ ಆರೋಪಿಗಳು ಮತ್ತೆ ರಾಜಶೇಖರ್ ಅವರ ಕೊಲೆ ಮಾಡಲು ಯತ್ನಿಸಿದ್ದರು ಎಂದು ತಿಳಿದುಬಂದಿದೆ.

ಈ ಕುರಿತು ಖಚಿತ ಮಾಹಿತಿ ತಿಳಿದ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದಾಗ ಮಾರಕಾಸ್ತ್ರಗಳಿಂದ ಪೊಲೀಸರ ಮೇಲೆ ಆರೋಪಿಗಳು ಹಲ್ಲೆ ಮಾಡಲು ಮುಂದಾಗಿದ್ದಾರೆ. ನಂತರ ಪೊಲೀಸರು ಒಂದು ಸುತ್ತು ಗುಂಡು ಹಾರಿಸಿ ಆರೋಪಿಗಳನ್ನು ಶರಣಾಗುವಂತೆ ಸೂಚಿಸಿದ್ದರು. ಆದರೂ, ಆರೋಪಿಗಳು ಪೊಲೀಸರು ಮೇಲೆ ಹಲ್ಲೆ ಮುಂದುವರಿಸಿದಾಗ ತಮ್ಮ ಆತ್ಮರಕ್ಷಣೆಗಾಗಿ ಸೋಲದೇವನಹಳ್ಳಿ ಇನ್ಸ್ ಪೆಕ್ಟರ್ ಶಿವಸ್ವಾಮಿ ಅವರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆಯಲ್ಲಿ ಸೋಲದೇವನಹಳ್ಳಿ ಠಾಣೆಯ ಪೇದೆಗಳಾದ ಶ್ರೀಧರ್ ಮತ್ತು ಸಿದ್ದಲಿಂಗಮೂರ್ತಿ ಎಂಬವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News