ಐಪಿಎಲ್ ಆತಿಥ್ಯ ವಹಿಸಲು ಯುಎಇ ಸಿದ್ಧ : ಎಮಿರೇಟ್ಸ್ ಕ್ರಿಕೆಟ್ ಮಂಡಳಿ

Update: 2020-07-28 05:00 GMT

ಮುಂಬೈ: ಈ ವರ್ಷ ಯುಎಇಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆತಿಥ್ಯ ವಹಿಸುವ ಬಿಸಿಸಿಐ ಪತ್ರಕ್ಕೆ ಪ್ರತಿಕ್ರಿಯೆಯಾಗಿ ಎಮಿರೇಟ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಇದೀಗ ಅಧಿಕೃತ ಹೇಳಿಕೆಯನ್ನು ಸಿದ್ಧಪಡಿಸುತ್ತಿದೆ.

 ಪಂದ್ಯಾವಳಿ ಸೆಪ್ಟಂಬರ್ 19ರಂದು ಪ್ರಾರಂಭವಾಗಲಿದ್ದು, ನವೆಂಬರ್ 8 ರಂದು ಮುಕ್ತಾಯಗೊಳ್ಳಲಿದೆ, ಇದಕ್ಕಾಗಿ ಸಿದ್ಧತೆ ಗಳು ಬೇಗನೆ ನಡೆಯಬೇಕಿದೆ. ಆಗಸ್ಟ್ 15ರೊಳಗೆ ತಂಡಗಳು ಯುಎಇಗೆ ಹಾರಲು ಪ್ರಯತ್ನಿ ಸುತ್ತಿರುವುದರಿಂದ, ಆಟಗಾರರು ಆಟಕ್ಕೆ ಮರಳಲು ಅಗತ್ಯವಾದ ಮೂಲಸೌಕರ್ಯಗಳನ್ನು ಒದಗಿಸಿಕೊಡಲು ಇಸಿಬಿ ಸಹ ತಯಾರಿ ನಡೆಸಿದೆ.

   ‘‘ಇಸಿಬಿ, ಬಿಸಿಸಿಐನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ ಮತ್ತು ನಾವು ಐಪಿಎಲ್‌ನ್ನು ಸ್ವಾಗತಿಸಲು ಸಿದ್ಧರಿದ್ದೇವೆ. ಪಂದ್ಯಾವಳಿಯನ್ನು ಆಯೋಜಿಸಲು ನಾವು ಸಂತೋಷಪಡುತ್ತೇವೆ. ಯುಎಇಯಲ್ಲಿ ಐಪಿಎಲ್ ಆತಿಥ್ಯ ವಹಿಸಲು ಬಿಸಿಸಿಐ ಸಿದ್ಧ ಮತ್ತು ಸರಕಾರದ ಅಧಿಕೃತ ಅನುಮತಿಗಾಗಿ ಕಾಯುತ್ತಿರುವುದಾಗಿ ಬಿಸಿಸಿಐ ನಮಗೆ ಪತ್ರ ಬರೆದಿದೆ’’ಎಂದು ಇಸಿಬಿ ಅಧಿಕಾರಿಗಳು ಸೋಮವಾರ ಆಂಗ್ಲ ಪತ್ರಿಕೆಯೊಂದಕ್ಕೆ ತಿಳಿಸಿದರು. ಶೀಘ್ರದಲ್ಲೇ ಈ ಸಂಬಂಧ ಹೇಳಿಕೆಯನ್ನು ನೀಡಲಾಗುವುದು ಎಂದು ಅವರು ಹೇಳಿದರು.

ಯುಎಇ ಅಧಿಕಾರಿಗಳಿಂದ ಅಗತ್ಯ ಅನುಮೋದನೆ ಪಡೆಯಲು ಎಮಿರೇಟ್ಸ್ ಮಂಡಳಿ ಬಿಸಿಸಿಐಗೆ ಸಹಕರಿಸಲಿದೆ. ಇವೆಲ್ಲವೂ ಭಾರತ ಸರಕಾರದ ಪ್ರಾಥಮಿಕ ಅನುಮೋದನೆಗೆ ಒಳಪಟ್ಟಿದ್ದು, ಶೀಘ್ರದಲ್ಲೇ ನಿರೀಕ್ಷಿಸಲಾಗಿದೆ.

  ಐಪಿಎಲ್ ಫ್ರಾಂಚೈಸಿಗಳು ಈಗಾಗಲೇ ಇಸಿಬಿಯೊಂದಿಗೆ ಸಂಪರ್ಕದಲ್ಲಿದ್ದು, ವಸತಿ, ಆತಿಥ್ಯ, ಅಗತ್ಯವಾದ ಜೈವಿಕ ಸುರಕ್ಷಿತ ವಾತಾವರಣ, ಅಂತರ್ ನಗರ ಪ್ರಯಾಣ (ರಸ್ತೆಯ ಮೂಲಕ), ವೈದ್ಯಕೀಯ ಮೂಲಸೌಕರ್ಯ ಕಲ್ಪಿಸುವುದು ಸೇರಿದಂತೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುವುದಾಗಿ ಇಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News