2-1 ಅಂತರದಲ್ಲಿ ಸರಣಿ ವಶಪಡಿಸಿಕೊಂಡ ಇಂಗ್ಲೆಂಡ್

Update: 2020-07-29 05:13 GMT

ಮ್ಯಾಂಚೆಸ್ಟರ್: ಇಲ್ಲಿ ನಡೆದ ಮೂರನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಪ್ರವಾಸಿ ವೆಸ್ಟ್‌ಇಂಡೀಸ್‌ನ್ನು 269 ರನ್‌ಗಳ ಅಂತರದಲ್ಲಿ ಮಣಿಸಿ ಆತಿಥೇಯ ಇಂಗ್ಲೆಂಡ್ 3 ಟೆಸ್ಟ್‌ಗಳ ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿದೆ.

 ಓಲ್ಡ್ ಟ್ರಾಫರ್ಡ್‌ನಲ್ಲಿ ಟೆಸ್ಟ್‌ನ ಅಂತಿಮ ದಿನವಗಿರುವ ಮಂಗಳವಾರ ಕ್ರಿಸ್ ವೋಕ್ಸ್ (50ಕ್ಕೆ 5) ಮತ್ತು ಸ್ಟುವರ್ಟ್ ಬ್ರಾಡ್ (36ಕ್ಕೆ 4) ದಾಳಿಗೆ ಸಿಲುಕಿದ ವೆಸ್ಟ್‌ಇಂಡೀಸ್ ಎರಡನೇ ಇನಿಂಗ್ಸ್‌ನಲ್ಲಿ 37.1 ಓವರ್‌ಗಳಲ್ಲಿ 129 ರನ್‌ಗಳಿಗೆ ಆಲೌಟಾಯಿತು.

 ಗೆಲುವಿಗೆ 399 ರನ್‌ಗಳ ಸವಾಲನ್ನು ಪಡೆದಿದ್ದ ವೆಸ್ಟ್‌ಇಂಡೀಸ್ ಪಂದ್ಯದ ಮೂರನೇ ದಿನದಾಟದಂತ್ಯಕ್ಕೆ ಎರಡನೇ ಇನಿಂಗ್ಸ್‌ನಲ್ಲಿ 6 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 10 ರನ್ ಗಳಿಸಿತ್ತು. ನಾಲ್ಕನೇ ದಿನದ ಆಟ ಮಳೆಗೆ ಕೊಚ್ಚಿಹೋಗಿತ್ತು.

ಪಂದ್ಯದ ಅಂತಿಮ ದಿನ ಆಟಕ್ಕೆ ಮಳೆಯ ಅಡಚಣೆ ಇದ್ದರೂ, ಇಂಗ್ಲೆಂಡ್‌ನ ಗೆಲುವಿಗೆ ಮಳೆ ಅಡ್ಡಿಯಾಗಲಿಲ್ಲ. ಸ್ಟುವರ್ಟ್ ಬ್ರಾಡ್ ಮತ್ತು ವೋಕ್ಸ್ ವಿಂಡೀಸ್‌ನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಿ ಗೆಲುವು ದೊರಕಿಸಿಕೊಟ್ಟರು.

 ಕೋವಿಡ್-19 ಸಾಂಕ್ರಾಮಿಕ ರೋಗಗದ ನಂತರ ಇಂಗ್ಲೆಂಡ್ ಮೊದಲ ಟೆಸ್ಟ್ ಸರಣಿಯನ್ನು ವಶಪಡಿಸಿಕೊಂಡಿದೆ. ಮುಂದಿನ ವಾರ ಪಾಕಿಸ್ತಾನ ವಿರುದ್ಧ ಮತ್ತೊಂದು ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. 34 ವರ್ಷದ ಬ್ರಾಡ್ ವೆಸ್ಟ್ ಇಂಡೀಸ್‌ನ ಮೊದಲ ಇನಿಂಗ್ಸ್‌ನಲ್ಲಿ ಕೊನೆಯ 4 ವಿಕೆಟ್‌ಗಳನ್ನು ಮತ್ತು ಅವರ 2ನೇ ಇನಿಂಗ್ಸ್‌ನಲ್ಲಿ ಮೊದಲ ಮೂರು ವಿಕೆಟ್‌ಗಳನ್ನು ಉಡಾಯಿಸಿ 500 ವಿಕೆಟ್‌ಗಳ ಮೈಲಿಗಲ್ಲು ತಲುಪಿಸಿದ್ದರು.

 ಬ್ರಾಡ್ ಜೊತೆ ಪ್ರಹಾರ ನಡೆಸಿದ್ದ ಆ್ಯಂಡರ್ಸನ್‌ಗೆ ಒಂದು ವಿಕೆಟ್ ಸಿಗಲಿಲ್ಲ. ಪತನಗೊಂಡ 10 ವಿಕೆಟ್‌ಗಳಲ್ಲಿ 9ನ್ನು ಬ್ರಾಡ್ ಮತ್ತು ವೋಕ್ಸ್ ಹಂಚಿಕೊಂಡರು. ಶೈ ಹೋಪ್ 31ರನ್ ಗಳಸಿರುವುದು ವಿಂಡೀಸ್ ಪರ 2ನೇ ಇನಿಂಗ್ಸ್‌ನಲ್ಲಿ ದಾಖಲಾದ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. ಜೆರ್ಮೈನ್ ಬ್ಲಾಕ್‌ವುಡ್ (23), ಶಾಮರ್ ಬ್ರೂಕ್ಸ್ (22), ಬ್ರಾಥ್‌ವೈಟ್ (19) ಮತ್ತು ಜೇಸನ್ ಹೋಲ್ಡರ್(12) ಎರಡಂಕೆಯ ಕೊಡುಗೆ ನೀಡಿದರು.

   ಬ್ರಾಥ್‌ವೈಟ್‌ರನ್ನು ಎಲ್‌ಬಿಡಬ್ಲು ಬಲೆಗೆ ಬೀಳಿಸಿದ ಬ್ರಾಡ್ ಟೆಸ್ಟ್ ಕ್ರಿಕೆಟ್‌ನಲ್ಲಿ 500ನೇ ವಿಕೆಟ್ ಪೂರೈಸಿದರು. ಶೈ ಹೋಪ್ ಸ್ವಲ್ಪ ಹೊತ್ತು ಕ್ರೀಸ್‌ನಲ್ಲಿ ಗುಡುಗಿದರು. ಅವರು 38 ಎಸೆತಗಳಲ್ಲಿ 6 ಬಾರಿ ಚೆಂಡನ್ನು ಬೌಂಡರಿ ಗೆರೆ ದಾಟಿಸಿದರು. ಆದರೆ ಅವರಿಗೆ ವೋಕ್ಸ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ಅವಕಾಶ ನೀಡಲಿಲ್ಲ. ಬ್ರೂಕ್ಸ್ ಕೂಡಾ ವೋಕ್ಸ್‌ಗೆ ವಿಕೆಟ್ ಒಪ್ಪಿಸಿದರು. ರೋಸ್ಟನ್ ಚೇಸ್(7) ರನೌಟಾದರು. ನಾಯಕ ಜೇಸನ್ ಹೋಲ್ಡರ್, ಡೋವ್ರಿಚ್(8) ಮತ್ತು ರಾಕೀಮ್ ಕಾರ್ನ್ ವಾಲ್(2) ಇವರನ್ನು ವೋಕ್ಸ್ ಎಲ್‌ಬಿಡಬ್ಲು ಬಲೆಗೆ ಬೀಳಿಸುವ ಮೂಲಕ 50ಕ್ಕೆ 5 ವಿಕೆಟ್ ಉಡಾಯಿಸಿದರು. . ಕೊನೆಯಲ್ಲಿ ಬ್ಲಾಕ್‌ವುಡ್‌ರನ್ನು ಪೆವಿಲಿಯನ್‌ಗಟ್ಟಿದ ಬ್ರಾಡ್ ವಿಂಡೀಸ್‌ನ 2ನೇ ಇನಿಂಗ್ಸ್ ನ್ನು ಮುಗಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News