ಐಸಿಸಿ ಏಕದಿನ ರ್ಯಾಂಕಿಂಗ್: ಅಗ್ರಸ್ಥಾನ ಕಾಯ್ದು ಕೊಂಡ ಕೊಹ್ಲಿ, ರೋಹಿತ್

Update: 2020-07-30 05:25 GMT

ದುಬೈ: ಐಸಿಸಿ ಏಕದಿನ ರ್ಯಾಂಕಿಂಗ್‌ನಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ಮತ್ತು ಉಪ ನಾಯಕ ರೋಹಿತ್ ಶರ್ಮಾ ಅಗ್ರ ಎರಡು ಬ್ಯಾಟಿಂಗ್ ಸ್ಥಾನಗಳನ್ನು ಕಾಯ್ದುಕೊಂಡಿದ್ದಾರೆ. ವೇಗಿ ಜಸ್ಪ್ರೀತ್ ಬುಮ್ರಾ ಬೌಲರ್‌ಗಳ ರ್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನ ಗಳಿಸಿದ್ದಾರೆ.

871 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಕೊಹ್ಲಿ ಅಗ್ರಸ್ಥಾನದಲ್ಲಿದ್ದರೆ, ರೋಹಿತ್ (855) ಮತ್ತು ಪಾಕಿಸ್ತಾನದ ಬಾಬರ್ ಆಝಮ್ (829) ನಂತರದ ಸ್ಥಾನದಲ್ಲಿದ್ದಾರೆ. ಬೌಲರ್‌ಗಳ ಪಟ್ಟಿಯಲ್ಲಿ ನ್ಯೂಝಿಲ್ಯಾಂಡ್‌ನ ನ ವೇಗಿ ಟ್ರೆಂಟ್ ಬೌಲ್ಟ್ (722) ಮೊದಲ ಸ್ಥಾನದಲ್ಲಿದ್ದರೆ, ಬುಮ್ರಾ (719) ಎರಡನೇ, ಅಫ್ಘಾನಿಸ್ತಾನದ ಮುಜೀಬ್ ಉರ್ ರಹ್ಮಾನ್ (701) ಮೂರನೇ ಸ್ಥಾನದಲ್ಲಿದ್ದಾರೆ.

ರವೀಂದ್ರ ಜಡೇಜ (8ನೇ ಸ್ಥಾನ) ಅಗ್ರ 10 ಆಲ್‌ರೌಂಡರ್‌ಗಳ ಶ್ರೇಯಾಂಕದಲ್ಲಿ ಸ್ಥಾನ ಪಡೆದ ಏಕೈಕ ಭಾರತದ ಆಟಗಾರ. ಈ ವಿಭಾಗದಲ್ಲಿ ಅಫ್ಘಾನಿಸ್ತಾನದ ಮುಹಮ್ಮದ್ ನಬಿ ಮೇಲುಗೈ ಸಾಧಿಸಿದ್ದಾರೆ. ಇಂಗ್ಲೆಂಡ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ನಂತರದ ಸ್ಥಾನದಲ್ಲಿದ್ದಾರೆ.

   

ವಿಶ್ವ ಚಾಂಪಿಯನ್ ಇಂಗ್ಲೆಂಡ್ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಸೂಪರ್ ಲೀಗ್‌ನ ಮೊದಲ ಪಂದ್ಯದಲ್ಲಿ ಗುರುವಾರ ಐರ್‌ಲ್ಯಾಂಡ್ ತಂಡವನ್ನು ಎದುರಿಸಲಿದೆ. ಈ ಸರಣಿಯಲ್ಲಿ ಮೂರು ಪಂದ್ಯಗಳಿರುತ್ತವೆ. ವಿಶ್ವಕಪ್ ವಿಜೇತ ತಂಡದ ನಾಯಕ ಇಯಾನ್ ಮೊರ್ಗನ್ 23 ನೇ ಸ್ಥಾನದಲ್ಲಿದ್ದ ಮೂರನೇ ಅತ್ಯುತ್ತಮ ಬ್ಯಾಟ್ಸ್‌ಮನ್ ಆಗಿದ್ದಾರೆ.

  ಏಕದಿನ ಪಂದ್ಯಗಳಿಗೆ ಹೆಸರಿಸಲಾದ ಇಂಗ್ಲೆಂಡ್‌ನ ಆಟಗಾರರು ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಾಲ್ಗೊಂಡಿರಲಿಲ್ಲ. ಇಂಗ್ಲೆಂಡ್ ತನ್ನ ಪ್ರಧಾನ ವೇಗದ ಬೌಲರ್‌ಗಳನ್ನು ಹೊಂದಿಲ್ಲ. ಅವಳಿ ಸ್ಪಿನ್ನರ್‌ಗಳಾದ ಆದಿಲ್ ರಶೀದ್ (29 ನೇ ಸ್ಥಾನ) ಮತ್ತು ಉಪನಾಯಕ ಮೊಯಿನ್ ಅಲಿ (44 ನೇ) ಏಕದಿನ ಪಂದ್ಯದಲ್ಲಿ ನೇತೃತ್ವ ವಹಿಸಲಿದ್ದಾರೆ.

ಐರ್‌ಲ್ಯಾಂಡ್ ನಾಯಕ ಆ್ಯಂಡಿ ಬಾಲ್ಬಿರ್ನಿ ಬ್ಯಾಟ್ಸ್ ಮನ್‌ಗಳ ರ್ಯಾಂಕಿಂಗ್‌ನಲ್ಲಿ 46ನೇ ಸ್ಥಾನದಲ್ಲಿದ್ದಾರೆ.

 ಇಂಗ್ಲೆಂಡ್-ಐರ್‌ಲ್ಯಾಂಡ್ ಸರಣಿಯು ಬಹುನಿರೀಕ್ಷಿತ ಸೂಪರ್ ಲೀಗ್‌ನ ಆರಂಭವನ್ನು ಸೂಚಿಸುತ್ತದೆ. ಇದು 2023 ರಲ್ಲಿ ಭಾರತದಲ್ಲಿ ನಡೆಯಲಿರುವ ಮುಂದಿನ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್‌ಗೆ ಅರ್ಹತಾ ಪಂದ್ಯಗಳಾಗಿವೆ. 2023ರಲ್ಲಿ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ತಂಡಗಳು 10. ಆತಿಥೇಯ ಭಾರತ ಮತ್ತು ಇತರ ಏಳು ತಂಡಗಳು ನೇರವಾಗಿ ಸ್ಥಾನ ಪಡೆಯಲಿದ್ದು, ಉಳಿದ 2 ತಂಡಗಳು ಅರ್ಹತಾ ಪಂದ್ಯಗಳ ಮೂಲಕ ಅವಕಾಶವನ್ನು ಪಡೆಯಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News