ಮೀನುಗಾರರ ಆರ್ಥಿಕ, ಸಾಮಾಜಿಕ ಅಭಿವೃದ್ಧಿಗೆ ಸರಕಾರ ಬದ್ಧ: ಸಿಎಂ ಯಡಿಯೂರಪ್ಪ

Update: 2020-07-30 11:12 GMT

ಬೆಂಗಳೂರು, ಜು. 30: ಕರಾವಳಿ ಸೇರಿದಂತೆ ರಾಜ್ಯದಲ್ಲಿನ ಮೀನುಗಾರರ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಸರಕಾರ ಬದ್ಧ. ಮೀನುಗಾರರಿಗೆ ಶೀಘ್ರವೇ ವಿಶೇಷ ಕಾರ್ಯಕ್ರಮ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇಂದಿಲ್ಲಿ ಪ್ರಕಟಿಸಿದ್ದಾರೆ.

ಗುರುವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮೀನುಗಾರಿಕೆ ಇಲಾಖೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ `ಮೀನು ಕೃಷಿಕರ ದಿನಾಚರಣೆ'ಯನ್ನು ಉದ್ಘಾಟಿಸಿದರು ಹಾಗೂ ಮೀನುಗಾರಿಕೆ ಇಲಾಖೆಯ ಮಾಹಿತಿಯನ್ನೊಳಗೊಂಡ ಅಂಕಿ-ಅಂಶಗಳ ಸಂಚಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಮೀನು ಕೃಷಿ ಅಭಿವೃದ್ಧಿಗೆ ಆಯವ್ಯಯದಲ್ಲಿ 291 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಜತೆಗೆ ಕರಾವಳಿಯ ಅಭಿವೃದ್ಧಿಗೆ 450 ಕೋಟಿ ರೂ. ನೀಡಲಾಗಿದೆ ಎಂದರು.

ಯಾಂತ್ರಿಕೃತ ಮೀನುಗಾರಿಕೆಗೆ ಪ್ರೋತ್ಸಾಹಿಸಲು ವಾರ್ಷಿಕ 150 ಕೋಟಿ ರೂ. ಡೀಸೆಲ್ ಸಬ್ಸಿಡಿಯನ್ನು ಮೀನುಗಾರರಿಗೆ ನೀಡಲಾಗುತ್ತಿದೆ. ಕೇಂದ್ರ ಸರಕಾರದ ಮತ್ಸ್ಯ ಸಂಪದ ಯೋಜನೆಯಡಿಯೂ ಹೆಚ್ಚಿನ ಅನುದಾನ ಪಡೆಯಲು ರಾಜ್ಯ ಸರಕಾರ ಕ್ರಮ ವಹಿಸಲಿದೆ ಎಂದ ಅವರು, ಮೀನು ಕೃಷಿ ಪ್ರೋತ್ಸಾಹ ಯೋಜನೆಗಳಲ್ಲಿ ರಾಜ್ಯ ದೇಶದಲ್ಲೆ ಮೊದಲ ಸ್ಥಾನಕ್ಕೆ ಏರುವ ಭರವಸೆ ಇದೆ ಎಂದರು.

ಇದೇ ವೇಳೆ ಕರ್ತವ್ಯದ ವೇಳೆ ಅಕಾಲಿಕ ಮರಣ ಹೊಂದಿದ ಮೀನುಗಾರರ ಕುಟುಂಬಕ್ಕೆ 6 ಲಕ್ಷ ರೂಪಾಯಿಗಳ  ಪರಿಹಾರ ಧನದ ಚೆಕ್ ಅನ್ನು ಮುಖ್ಯಮಂತ್ರಿ ಯಡಿಯೂರಪ್ಪನವರು ವಿತರಿಸಿದರು ಹಾಗೂ ಫಲಾನುಭವಿಗಳಿಗೆ ಮೀನು ಮರಿಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಮೀನುಗಾರಿಕೆ ಹಾಗೂ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ, ಕಂದಾಯ ಸಚಿವ ಆರ್.ಅಶೋಕ್, ಶಾಸಕ ರಘುಪತಿ ಭಟ್, ಮೀನುಗಾರಿಕಾ ಇಲಾಖೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News