×
Ad

ಕಳ್ಳತನ ಪ್ರಕರಣ: ಬೆಂಗಳೂರಿನಲ್ಲಿ ಕೊಲಂಬಿಯಾ ಗ್ಯಾಂಗ್ ಬಂಧನ, 2.58 ಕೋಟಿ ರೂ. ಮೌಲ್ಯದ ಚಿನ್ನಾಭರಣ ಜಪ್ತಿ

Update: 2020-07-30 18:43 IST

ಬೆಂಗಳೂರು, ಜು.30: ಕನ್ನಡ ಚಿತ್ರರಂಗದ ನಟ ಶಿವರಾಜ್‍ ಕುಮಾರ್ ಅವರ ನಿವಾಸದ ಬಳಿ ಕಳ್ಳತನ ಮಾಡಿದ್ದ ಆರೋಪ ಪ್ರಕರಣ ಸಂಬಂಧ ಕೊಲಂಬಿಯಾ ಗ್ಯಾಂಗ್ ಅನ್ನು ಬಂಧಿಸಿರುವ ಇಲ್ಲಿನ ಈಶಾನ್ಯ ವಿಭಾಗದ ಪೊಲೀಸರು, 2 ಕೋಟಿ 58 ಲಕ್ಷ ಮೌಲ್ಯದ 6 ಕೆಜಿ 140 ಗ್ರಾಂ ಚಿನ್ನಾಭರಣ, 4 ಲಕ್ಷ ಮೌಲ್ಯದ 9 ಪಿಸ್ತೂಲ್‍ಗಳು, 23 ಜೀವಂತ ಗುಂಡುಗಳು, ಬೈಕ್, 3 ಪಾಸ್‍ ಪೋರ್ಟ್ ಗಳು, 1 ನಕಲಿ ಪಾಸ್‍ ಪೋರ್ಟ್ ಅನ್ನು ಜಪ್ತಿ ಮಾಡಿದ್ದಾರೆ.

ಗುರುವಾರ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಎಲಿಯೆನ್ ಪಡಿಲ್ಲಾ ಮಾರ್ಟನೇಟ್ (48), ಲೇಡಿ ಸ್ಟೆಪೆನಿಯಾ ಮನೋಜ್ ಮೋನ್‍ಸಾಲ್ವೆ (23), ಕ್ರಿಶ್ಚಿಯನ್ ಇನೀಸ್ ನವೋರೊ (34) ಬಂಧಿತ ಆರೋಪಿಗಳಾಗಿದ್ದು, ಮತ್ತೊಬ್ಬನಿಗಾಗಿ ಶೋಧ ನಡೆಸಲಾಗಿದೆ ಎಂದು ತಿಳಿಸಿದರು.

ಆರೋಪಿಗಳು ಎತ್ತರದ ಗೋಡೆಗಳನ್ನು ಸುಲಭವಾಗಿ ಜಿಗಿಯುವ ಪಾರ್ಕೂರ್ ತರಬೇತಿಯನ್ನು ಪಡೆದಿರುವುದು ತನಿಖೆಯಲ್ಲಿ ಕಂಡು ಬಂದಿದ್ದು, ಆರೋಪಿಗಳ ವಿಚಾರಣೆ ಸಂದರ್ಭದಲ್ಲಿ ಕೊತ್ತನೂರು ಪೊಲೀಸರು ಸ್ಪ್ಯಾನಿಷ್ ಭಾಷೆಯನ್ನು ಕಲಿತಿದ್ದಾರೆ ಎಂದು ಹೇಳಿದರು.

ಆರೋಪಿಗಳು ಕೊಲಂಬಿಯಾ ಮೂಲದವರ ಕೃತ್ಯಗಳನ್ನು ನಡೆಸಲು ಮಾಸ್ಟರ್ ಮೈಂಡ್ ಆಗಿದ್ದ ಗುಸ್ತಾವೊ ಯಾನೆ ಮುಸ್ತಫನ್‍ ನನ್ನು ಸಂಪರ್ಕಿಸಿ ಬೆಂಗಳೂರು ನಗರವನ್ನು ಗುರಿಯಾಗಿಸಿಕೊಂಡು ಸರ್ವೀಸ್ ಅಪಾರ್ಟ್‍ಮೆಂಟ್‍ ಗಳಲ್ಲಿ ವಾಸವಾಗಿದ್ದರು. ಕೊತ್ತನೂರು ಹಾಗೂ ನಗರದ ಪ್ರತಿಷ್ಠಿತ ಪ್ರದೇಶಗಳ ನಿರ್ಜನ ಪ್ರದೇಶಗಳನ್ನು ಸೈಕಲ್‍ನಲ್ಲಿ ಸುತ್ತಾಡುತ್ತ ಬೀಗ ಹಾಕಿದ ಮನೆಗಳನ್ನು ಹಾಗೂ ಮನೆ ಮುಂದೆ ಪೇಪರ್, ಹಾಲು ಬಿದ್ದಿರುವುದನ್ನು ಗುರುತಿಸಿ ಸಂಜೆ ನಂತರ ಮತ್ತೆ ಬೈಕ್‍ನಲ್ಲಿ ಬಂದು ಖಚಿತಪಡಿಸಿಕೊಂಡು ಕೃತ್ಯ ನಡೆಸುತ್ತಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಅಷ್ಟೇ ಅಲ್ಲದೆ, ಆರೋಪಿಗಳು ಕೃತ್ಯ ನಡೆಸುವಾಗ ಬೆರಳ ಮುದ್ರೆ ಇನ್ನಿತರ ಗುರುತು ಸಿಗದಂತೆ ಕೊರೋನ ಸೈನಿಕರು ಧರಿಸುವ ಪಿಪಿಇ ಕಿಟ್, ದೇಹಪೂರ್ತಿ ಮುಚ್ಚುವ ಗೌನ್, ಗ್ಲೌಸ್, ಮಾಸ್ಕ್ ಧರಿಸಿ ಕಾಂಪೌಂಡ್ ಜಿಗಿದು ಒಳ ನುಗ್ಗುತ್ತಿದ್ದರು. ಇನ್ನು, ಇವರು ಕೃತ್ಯಕ್ಕೆ ಬಳಸುತ್ತಿದ್ದ ಸಾಧನಗಳು, ಹಿಂದೆ ಯಾವುದೇ ಕಳವು ಪ್ರಕರಣಗಳಲ್ಲಿ ವಶಪಡಿಸಿಕೊಳ್ಳುವುದಕ್ಕಿಂತ ಭಿನ್ನವಾಗಿದ್ದು, ಅವುಗಳನ್ನು ಕಂಡು ಆಘಾತವುಂಟಾಗಿದೆ ಎಂದು ಹೇಳಿದರು.

ಕಳೆದ ಅಕ್ಟೋಬರ್ ನಲ್ಲಿ ಶಿವರಾಜ್‍ ಕುಮಾರ್ ಅವರ ಪಕ್ಕದ ಮನೆಯಲ್ಲಿ ಕನ್ನಗಳವು ನಡೆದಿತ್ತು. ರಾತ್ರಿ ಗಸ್ತಿನಲ್ಲಿದ್ದ ಸಂಪಿಗೆ ಹಳ್ಳಿ ಪೊಲೀಸರು ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದಾಗ ಆರೋಪಿಗಳು ತಾವು ತಂದಿದ್ದ ಕಾರನ್ನು ಬಿಟ್ಟು 15 ಅಡಿ ಎತ್ತರದ ಗೋಡೆಯನ್ನು ಜಿಗಿದು ಪರಾರಿಯಾಗಿದ್ದರು. ಸ್ಥಳದಲ್ಲಿ ಮಾಹಿತಿ ಸಂಗ್ರಹಿಸಿ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ತರಿಸಿ ಎತ್ತರದ ಗೋಡೆ ಜಿಗಿಯಲು ತರಬೇತಿ ಪಡೆದಿದ್ದರೆ ಮಾತ್ರ ಸಾಧ್ಯವೆಂಬುದನ್ನು ಪತ್ತೆ ಹಚ್ಚಲಾಯಿತು. ಅದರಂತೆ 2018ರಲ್ಲಿ ಇದೇ ತರಹದ ಸಾಧನಗಳನ್ನು ಬಳಸಿ ಕಳವು ಮಾಡಿದ ಮಾಹಿತಿ ಕಲೆಹಾಕಿ ಹಳೆ ಆರೋಪಿಗಳ ಫೋಟೊಗಳನ್ನು ತರಿಸಿ ಅವುಗಳನ್ನು ತುಲನೆ ಮಾಡಿ ನೋಡಿದಾಗ ಮಾಸ್ಟರ್ ಮೈಂಡ್ ಗುಸ್ತಾವೊ ಪಾತ್ರವಿರುವುದು ಖಚಿತವಾಗಿದೆ ಎಂದು ಆಯುಕ್ತರು ವಿವರಿಸಿದರು.

ಕಳವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಈಶಾನ್ಯ ವಿಭಾಗದ ಡಿಸಿಪಿ ಡಾ.ಭೀಮಾಶಂಕರ್ ಗುಳೇದ್ ಅವರು ವಿಶೇಷ ತಂಡವನ್ನು ರಚಿಸಿದ್ದು, 2 ತಿಂಗಳುಗಳ ಕಾಲ ತಂಡದ ಅಧಿಕಾರಿಗಳು ನಿರಂತರ ಶ್ರಮಿಸಿ ಥಣಿಸಂದ್ರದ ಪೆಟ್ರೋಲ್ ಬಂಕ್ ಬಳಿ ಅನುಮಾನಾಸ್ಪದ ವ್ಯಕ್ತಿಯೊಬ್ಬರನ್ನು ನಿಲ್ಲಿಸಿ ತಪಾಸಣೆ ನಡೆಸಿದಾಗ ಆರೋಪಿಯೊಬ್ಬ ಸಿಕ್ಕಿ ಬಿದ್ದಿದ್ದಾನೆ. ನಂತರ ಕಾರ್ಯಾಚರಣೆಯಲ್ಲಿ ಗುಂಪಿನ ಸದಸ್ಯರನ್ನು ಬಂಧಿಸಲಾಗಿದೆ ಎಂದು ಭಾಸ್ಕರ್ ರಾವ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್, ಡಿಸಿಪಿ ಡಾ. ಭೀಮಾಶಂಕರ್ ಗುಳೇದ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News