ಟೋಕಿಯೊ ಒಲಿಂಪಿಕ್ಸ್ ನ ಕುಸ್ತಿಯಲ್ಲಿ ಭಾರತಕ್ಕೆ 3-4 ಪದಕ: ಭಜರಂಗ್ ಪೂನಿಯಾ

Update: 2020-08-03 04:07 GMT

ಹೊಸದಿಲ್ಲಿ: ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟಿರುವ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಕುಸ್ತಿಪಟುಗಳು ಉತ್ತಮ ಪ್ರದರ್ಶನ ನೀಡಿ 3ರಿಂದ 4 ಪದಕಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದು ಏಶ್ಯನ್ ಗೇಮ್ಸ್ ನಲ್ಲಿ ಚಿನ್ನ ಜಯಿಸಿದ ಭಜರಂಗ್ ಪೂನಿಯಾ ಹೇಳಿದ್ದಾರೆ.

ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪ್ರದರ್ಶನಗಳು ಉತ್ತಮ ರೂಪದಲ್ಲಿವೆ ಎಂದು ಸ್ಟಾರ್ ಕುಸ್ತಿಪಟು ನಂಬಿದ್ದಾರೆ.

‘‘ನಾವು ಟೋಕಿಯೊ ಒಲಿಂಪಿಕ್ಸ್ ನ ಕುಸ್ತಿಯಲ್ಲಿ ಮೂರರಿಂದ ನಾಲ್ಕು ಪದಕಗಳನ್ನು ಗೆಲ್ಲುತ್ತೇವೆ ಎಂದು ಭಾವಿಸುತ್ತೇನೆ. ವಿಶ್ವ ಚಾಂಪಿಯನ್‌ಶಿಪ್ ಒಲಿಂಪಿಕ್ಸ್‌ಗಿಂತ ಕಠಿಣ ಪಂದ್ಯಾವಳಿ.ಆದರೆ ನಾವು ಅಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇವೆ. ಹಾಗಾಗಿ ಭಾರತೀಯ ಕುಸ್ತಿಪಟುಗಳ ಪ್ರದರ್ಶನ ಉತ್ತಮ ವಾಗಿದೆ. ಇದು ಪದಕಕ್ಕಾಗಿ ಪ್ರಬಲ ಸ್ಪರ್ಧಿಗಳನ್ನಾಗಿ ಮಾಡುತ್ತದೆ ಎಂದು ಪೂನಿಯಾ ‘ಇನ್ ದಿ ಸ್ಪೋರ್ಟ್ಸ್‌ಲೈಟ್’ ನಲ್ಲಿ ಹೇಳಿದರು.

  2020ರಲ್ಲಿ ನಡೆಯಬೇಕಿದ್ದ ಒಲಿಂಪಿಕ್ಸ್ ಕ್ರೀಡಾಕೂಟವು ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಒಂದು ವರ್ಷ ಮುಂದೂಡಲ್ಪಟ್ಟಿದೆ. ಕಝಕಿಸ್ತಾನದಲ್ಲಿ ನಡೆದ 2019ರ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಪೂನಿಯಾ (ಕಂಚು, 65 ಕೆ.ಜಿ), ದೀಪಕ್ ಪೂನಿಯಾ (ಬೆಳ್ಳಿ, 86 ಕೆ.ಜಿ), ವಿನೇಶ್ ಫೋಗಾಟ್ (ಕಂಚು, 53 ಕೆ.ಜಿ) ಮತ್ತು ರವಿ ಕುಮಾರ್ ದಹಿಯಾ (ಕಂಚು, 57 ಕೆ.ಜಿ) ಜಯಿಸಿ ಒಲಿಂಪಿಕ್ಸ್‌ನಲ್ಲಿ ಸ್ಥಾನವನ್ನು ದೃಢಪಡಿಸಿದ್ದರು.

ಕುಸ್ತಿಯಲ್ಲಿ ತೊಡಗಿಸಿಕೊಳ್ಳದೆ ಇರುತ್ತಿದ್ದರೆ ಸಾಮಾನ್ಯ ಹಳ್ಳಿಯ ಬದುಕಿಗೆ ಸೀಮಿತವಾಗಿರುತ್ತಿದ್ದೆ. ಮೊದಲ ವಿಶ್ವ ಚಾಂಪಿಯನ್‌ಶಿಪ್ ಪದಕ ಜಯಿಸಿರುವುದು ವೃತ್ತಿಜೀವನದ ಅವಿಸ್ಮರಣೀಯ ಪ್ರಶಸ್ತಿಯೆಂದು ಪೂನಿಯಾ ಹೇಳಿದ್ದಾರೆ. ಹರ್ಯಾಣದ ಹುಡುಗ ಪೂನಿಯಾ ತನ್ನ 19ನೇ ಹರೆಯದಲ್ಲಿ 2013ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಜಯಿಸಿದ್ದರು.

 21ರ ಹರೆಯದ ಡ್ಯಾನಿ ಅವರು ಯುವ ಕ್ರೀಡಾಪಟುಗಳು ಮತ್ತು ಅಭಿಮಾನಿಗಳಿಗೆ ಸ್ಫೂರ್ತಿ ನೀಡುವ ಏಕೈಕ ಉದ್ದೇಶದಿಂದ ಪ್ರಾರಂಭಿಸಿರುವ ಆನ್‌ಲೈನ್ ಲೈವ್ ಇನ್‌ಸ್ಟಾಗ್ರಾಮ್ ಚಾಟ್ ಸರಣಿಯಲ್ಲಿ ಚಾಂಪಿಯನ್ ಕ್ರೀಡಾಪಟುಗಳಾದ ಅಭಿನವ್ ಬಿಂದ್ರಾ, ಲಿಯಾಂಡರ್ ಪೇಸ್, ಪಿ.ವಿ ಸಿಂಧು, ಸತ್ಯನ್ ಜ್ಞಾನಶೇಖರನ್ ಮತ್ತು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಮತ್ತಿತರರು ಭಾಗವಹಿಸಿದ್ದಾರೆ.

 65 ಕೆ.ಜಿ ವಿಭಾಗದ ಸ್ಪರ್ಧೆಯ ಬಗ್ಗೆ ಮಾತನಾಡಿದ ಪೂನಿಯಾ ‘‘65 ಕೆ.ಜಿ ವಿಶ್ವದ ಕಠಿಣ ವರ್ಗವೆಂದು ನಾನು ಭಾವಿಸುತ್ತೇನೆ. ಇದರಲ್ಲಿ ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿಗಳನ್ನು ಅಥವಾ ಒಲಿಂಪಿಕ್ಸ್ ಚಿನ್ನದ ಪದಕಗಳನ್ನು ಸತತವಾಗಿ ಗೆದ್ದ ಯಾವುದೇ ಕುಸ್ತಿಪಟು ಇಲ್ಲ. ಪ್ರತಿಬಾರಿಯೂ ಯಾವಾಗಲೂ ಹೊಸ ಚಾಂಪಿಯನ್ ಮೂಡಿ ಬರುತ್ತಾರೆ’’ ಎಂದರು.

ಖೇಲೋ ಇಂಡಿಯಾದಂತಹ ಕಾರ್ಯಕ್ರಮಗಳನ್ನು ಆಯೋಜಿ ಸಿದ್ದಕ್ಕಾಗಿ ಸರಕಾರ ಮತ್ತು ಕ್ರೀಡಾ ಒಕ್ಕೂಟಗಳನ್ನು ಪೂನಿಯಾ ಶ್ಲಾಘಿಸಿದರು. ಇದು ಯುವ ಕ್ರೀಡಾಪಟುಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಹೆಚ್ಚು ಅಗತ್ಯವಿರುವ ವೇದಿಕೆಯನ್ನು ಒದಗಿಸಿದೆ ಎಂದರು.

‘‘ನಾವು ಖೇಲೋ ಇಂಡಿಯಾ ದಂತಹ ತಳಮಟ್ಟದಲ್ಲಿ ಕಾರ್ಯ ಕ್ರಮಗಳನ್ನು ಆಯೋಜಿ ಸುತ್ತಿರುವ ರೀತಿ, ಸಾಕಷ್ಟು ಯುವಕರು ಅದರಿಂದ ಅಗತ್ಯವಾದ ಬೆಂಬಲವನ್ನು ಪಡೆಯುತ್ತಿದ್ದಾರೆ, ಅದು ಮೊದಲೇ ಇರಲಿಲ್ಲ. ಅವರು ಈ ರೀತಿಯ ಬೆಂಬಲವನ್ನು ಪಡೆಯುತ್ತಿದ್ದರೆ, ಕುಸ್ತಿಯಲ್ಲಿ ಮಾತ್ರವಲ್ಲ, ಒಲಿಂಪಿಕ್ಸ್ ನಲ್ಲಿ ಭಾರತ ಪ್ರತಿ ಕ್ರೀಡೆಯಲ್ಲೂ ಪದಕಗಳನ್ನು ಗೆಲುತ್ತಿತ್ತು’’ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News