ಸರಕಾರಿ ಆಸ್ಪತ್ರೆಗಳಿಗೆ ದಾಖಲಾಗದೆ ಖಾಸಗಿ ಆಸ್ಪತ್ರೆಗಳ ಮೊರೆ ಹೋಗುತ್ತಿರುವ ಸಚಿವರು, ಸಿಎಂಗಳು!

Update: 2020-08-03 11:25 GMT

ಹೊಸದಿಲ್ಲಿ: ಕೋವಿಡ್ 19 ಸೋಂಕು ದೃಢಪಟ್ಟ ನಂತರ ದೇಶದ ಗೃಹ ಸಚಿವ ಅಮಿತ್ ಶಾ ಅವರಿಂದ ಹಿಡಿದು ಕೆಲ ಮುಖ್ಯಮಂತ್ರಿಗಳು ಹಾಗೂ ಸಚಿವರುಗಳು ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಬದಲು ಖಾಸಗಿ ಆಸ್ಪತ್ರೆಗಳಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು scroll.in ವರದಿ ಮಾಡಿದೆ.

ರವಿವಾರ ಸಂಜೆ ಕೋವಿಡ್ ದೃಢಪಟ್ಟ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುರುಗ್ರಾಮದಲ್ಲಿರುವ ಮೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರಕಾರಿ ಒಡೆತನದ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ತಜ್ಞ ವೈದ್ಯರುಗಳ ತಂಡ ಅಲ್ಲಿಗೆ ಭೇಟಿ ನೀಡಲಿದೆ ಎಂಬ ಸುದ್ದಿಯೂ ಇದೆ.

ತರುವಾಯ ರವಿವಾರ ಕೋವಿಡ್ ಪಾಸಿಟಿವ್ ದೃಢಪಟ್ಟ ಕರ್ನಾಟಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕೂಡ ಬೆಂಗಳೂರಿನ ಖಾಸಗಿ ಆಸ್ಪತ್ರೆ ಮಣಿಪಾಲ್ ಹಾಸ್ಪಿಟಲ್‍ ನಲ್ಲಿ ದಾಖಲಾಗಿದ್ದಾರೆ. ರವಿವಾರದಂದೇ ಕೋವಿಡ್ ದೃಢಪಟ್ಟ ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರೂ ಖಾಸಗಿ ಆಸ್ಪತ್ರೆ ಕಾವೇರಿ ಹಾಸ್ಪಿಟಲ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆದರೆ ರವಿವಾರ ಕೋವಿಡ್ 19 ಸೋಂಕಿನಿಂದ ಮೃತಪಟ್ಟ ಉತ್ತರ ಪ್ರದೇಶದ ತಾಂತ್ರಿಕ ಶಿಕ್ಷಣ ಸಚಿವೆ ಕಮಲ್ ರಾಣಿ ವರುಣ್ ಅವರು ಮಾತ್ರ ಲಕ್ನೋದ ಸರಕಾರಿ ಸಂಜಯ್ ಗಾಂಧಿ ಪೋಸ್ಟ್ ಗ್ರಾಜುವೇಟ್ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯನ್ಸ್ ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಕಳೆದ ತಿಂಗಳು ಕೋವಿಡ್ ಚಿಕಿತ್ಸೆಗೆ ದಾಖಲಾಗಿದ್ದ ದಿಲ್ಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರು ಮೊದಲು ದಿಲ್ಲಿ ಸರಕಾರದ ಒಡೆತನದ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರೂ ನಂತರ ಅವರಿಗೆ ಪ್ಲಾಸ್ಮಾ ಥೆರಪಿಗಾಗಿ ಮ್ಯಾಕ್ಸ್ ಆಸ್ಪತೆಗೆ ದಾಖಲಿಸಲಾಗಿತ್ತು. ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಪ್ಲಾಸ್ಮಾ ಥೆರಪಿಗೆ ಅನುಮತಿಯಿಲ್ಲದೇ ಇದ್ದುದರಿಂದ ತಾನು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾಗಿ ಜೈನ್ ಹೇಳಿದ್ದಾರೆ. ವೈದ್ಯರು ಪ್ಲಾಸ್ಮಾ ಥೆರಪಿ ಶಿಫಾರಸು ಮಾಡಿದ್ದರಿಂದ ತಡ ಮಾಡದೆ ಖಾಸಗಿ ಆಸ್ಪತ್ರೆಗೆ ದಾಖಲಿಸಬೇಕೆಂದು ಜೈನ್ ಅವರ ಪತ್ನಿ ಮುಖ್ಯಮಂತ್ರಿಗೆ  ಕರೆ ಮಾಡಿ ಮನವಿ ಮಾಡಿದ್ದರೆನ್ನಲಾಗಿದೆ.

ಕೊರೋನ ಪಾಸಿಟಿವ್ ಆಗಿರುವ ತಮಿಳುನಾಡಿನ ಹಲವು ಸಚಿವರು ಕೂಡ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ಸೋಂಕು ದೃಢಪಟ್ಟಿರುವ ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಭೋಪಾಲ್‍ನ ಖಾಸಗಿ ಚಿರಾಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜಕಾರಣಿಗಳು ಕೋವಿಡ್ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿರುವುದು ಟ್ವಿಟರಿಗರ ಗಮನವನ್ನೂ ಸೆಳೆದಿದ್ದು ರಾಜಕಾರಣಿಗಳು ಸರಕಾರಿ ಕೋವಿಡ್ ಆಸ್ಪತೆಗಳಿಗೆ ದಾಖಲಾದರೆ ಅಲ್ಲಿನ ಸೇವೆ ಹಾಗೂ ಸವಲತ್ತುಗಳಲ್ಲೂ ಸುಧಾರಣೆಯಾಗಬಹುದು ಎಂದು ಟ್ವಿಟ್ಟರಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News