ಜಾಧವ್‌ ಪರ ವಕೀಲರ ನೇಮಕಕ್ಕೆ ಭಾರತಕ್ಕೆ ಅವಕಾಶ ನೀಡಿದ ಪಾಕ್ ಹೈಕೋರ್ಟ್

Update: 2020-08-03 16:38 GMT

ಇಸ್ಲಾಮಾಬಾದ್, ಆ. 3: ಪಾಕಿಸ್ತಾನದಲ್ಲಿ ಬೇಹುಗಾರಿಕೆಯ ಆರೋಪದಲ್ಲಿ ಸೇನಾ ನ್ಯಾಯಾಲಯದಿಂದ ಮರಣದಂಡನೆಗೆ ಒಳಗಾಗಿರುವ ಭಾರತದ ಮಾಜಿ ನೌಕಾಪಡೆ ಅಧಿಕಾರಿ ಕುಲಭೂಷಣ್ ಜಾಧವ್ ಪರವಾಗಿ ವಕೀಲರನ್ನು ನೇಮಿಸಲು ಭಾರತಕ್ಕೆ ಒಂದು ಅವಕಾಶ ನೀಡಬೇಕು ಎಂದು ಇಸ್ಲಾಮಾಬಾದ್ ಹೈಕೋರ್ಟ್ ಸೋಮವಾರ ಹೇಳಿದೆ ಹಾಗೂ ಪ್ರಕರಣದ ಮುಂದಿನ ವಿಚಾರಣೆಯನ್ನು ಸೆಪ್ಟಂಬರ್ 3ಕ್ಕೆ ಮುಂದೂಡಿದೆ.

ಆದರೆ, ಜಾಧವ್‌ರನ್ನು ಪ್ರತಿನಿಧಿಸುವ ವಕೀಲರು ಪಾಕಿಸ್ತಾನಿ ರಾಷ್ಟ್ರೀಯರಾಗಿರಬೇಕು ಎಂದು ನ್ಯಾಯಾಲಯ ಹೇಳಿತು ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಅಟಾರ್ನಿ ಜನರಲ್ ಖಾಲಿದ್ ಜಾವೇದ್ ಖಾನ್ ಹೇಳಿದರು. ಪಾಕಿಸ್ತಾನಿ ಕಾನೂನು ತಂಡಕ್ಕೆ ಸಹಾಯ ಮಾಡಲು ಭಾರತೀಯ ವಕೀಲರಿಗೆ ಅವಕಾಶ ನೀಡುವ ಯಾವುದೇ ಆಯ್ಕೆಯನ್ನು ನ್ಯಾಯಾಲಯ ಈವರೆಗೆ ನೀಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಹೇಳಿದರು.

ವಕೀಲರೊಬ್ಬರನ್ನು ನೇಮಿಸಲು ಭಾರತ ಸರಕಾರ ಮತ್ತು ಕುಲಭೂಷಣ್ ಜಾಧವ್‌ಗೆ ಇನ್ನೊಂದು ಅವಕಾಶವನ್ನು ನೀಡಬೇಕು ಎಂದು ನ್ಯಾಯಾಲಯ ಹೇಳಿತು.

ಜಾಧವ್‌ಗೆ ವಕೀಲರನ್ನು ನೇಮಿಸುವಂತೆ ಕೋರಿ ಪಾಕಿಸ್ತಾನ ಸರಕಾರವು ಜುಲೈ 22ರಂದು ಇಸ್ಲಾಮಾಬಾದ್ ಹೈಕೋರ್ಟ್‌ಗೆ ಹೋಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News