ಭಾರತೀಯರಿಗೆ ದೊಡ್ಡ ಹೊಡೆತ ನೀಡುವ ಮತ್ತೊಂದು ಆದೇಶಕ್ಕೆ ಟ್ರಂಪ್ ಸಹಿ

Update: 2020-08-04 17:55 GMT

ವಾಶಿಂಗ್ಟನ್, ಆ. 4: ಅಮೆರಿಕ ಸರಕಾರಕ್ಕೆ ಒಳಪಟ್ಟ ಸಂಸ್ಥೆಗಳು ವಿದೇಶಿ ಉದ್ಯೋಗಿಗಳಿಗೆ, ಅದರಲ್ಲೂ ಮುಖ್ಯವಾಗಿ ಎಚ್-1ಬಿ ವೀಸಾದಲ್ಲಿ ಅಮೆರಿಕದಲ್ಲಿ ಇರುವವರಿಗೆ ಕೆಲಸದ ಗುತ್ತಿಗೆಗಳನ್ನು ಅಥವಾ ಉಪಗುತ್ತಿಗೆಗಳನ್ನು ನೀಡುವುದನ್ನು ನಿಷೇಧಿಸುವ ಸರಕಾರಿ ಆದೇಶವೊಂದಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಸಹಿ ಹಾಕಿದ್ದಾರೆ. ಇದು ಅಮೆರಿಕದಲ್ಲಿ ಉದ್ಯೋಗ ಅರಸುತ್ತಿರುವ ಭಾರತೀಯ ಮಾಹಿತಿ ತಂತ್ರಜ್ಞಾನ ಪರಿಣಿತರಿಗೆ ದೊಡ್ಡ ಹೊಡೆತವಾಗಿದೆ.

2020ರ ಕೊನೆಯವರೆಗೆ ಎಚ್-1ಬಿ ಸೇರಿದಂತೆ ಹಲವು ಉದ್ಯೋಗ ವೀಸಾಗಳನ್ನು ವಿತರಣೆಯನ್ನು ಸ್ಥಗಿತಗೊಳಿಸಿ ಅಮೆರಿಕ ಅಧ್ಯಕ್ಷರು ಜೂನ್ 23ರಂದು ಹೊರಡಿಸಿದ ಸರಕಾರದ ಆದೇಶದ ಬೆನ್ನಿಗೇ ಈ ಹೊಸ ಆದೇಶ ಹೊರಬಿದ್ದಿದೆ. ಮಹತ್ವದ ಚುನಾವಣಾ ವರ್ಷದಲ್ಲಿ ಅಮೆರಿಕದ ಉದ್ಯೋಗಿಗಳ ಹಿತಾಸಕ್ತಿಗಳನ್ನು ರಕ್ಷಿಸುವುದಕ್ಕಾಗಿ ಆ ಆದೇಶವನ್ನು ಟ್ರಂಪ್ ಹೊರಡಿಸಿದ್ದರು.

ಟ್ರಂಪ್ ಈಗ ಹೊರಡಿಸಿರುವ ಹೊಸ ನಿರ್ಬಂಧಗಳು ಜೂನ್ 24ರಿಂದಲೇ ಜಾರಿಗೆ ಬರುತ್ತವೆ.

ಭಾರತೀಯ ಮಾಹಿತಿ ತಂತ್ರಜ್ಞಾನ ಪರಿಣತರು ಹಾತೊರೆಯುತ್ತಿರುವ ಎಚ್-1ಬಿ ವೀಸಾದಡಿಯಲ್ಲಿ, ಅಮೆರಿಕದ ಕಂಪೆನಿಗಳು ವಿಶೇಷ ಪರಿಣಿಯ ಕ್ಷೇತ್ರಗಳಲ್ಲಿ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತವೆ. ಈ ವೀಸಾದಡಿಯಲ್ಲಿ ಅಮೆರಿಕದ ತಂತ್ರಜ್ಞಾನ ಕಂಪೆನಿಗಳು ಪ್ರತಿ ವರ್ಷ ಭಾರತ ಮತ್ತು ಚೀನಾ ಮುಂತಾದ ದೇಶಗಳಿಂದ ಸಾವಿರಾರು ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತವೆ.

‘‘ಅಮೆರಿಕನ್ನರಿಗೆ ಆದ್ಯತೆ ನೀಡುವ ಅತ್ಯಂತ ಸರಳ ನಿಯಮದಂತೆ ಕೇಂದ್ರ ಸರಕಾರ ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನು ಖಾತರಿಪಡಿಸುವುದಕ್ಕಾಗಿ ನಾನು ಇಂದು ಈ ಸರಕಾರಿ ಆದೇಶಕ್ಕೆ ಸಹಿ ಹಾಕುತ್ತಿದ್ದೇನೆ’’ ಎಂದು ಹೊಸ ಸರಕಾರಿ ಆದೇಶಕ್ಕೆ ಸಹಿ ಹಾಕುವ ಮುನ್ನ ಶ್ವೇತಭವನದ ಓಲವ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ಹೇಳಿದರು.

‘‘ಅಗ್ಗದ ವಿದೇಶಿ ಕೆಲಸಗಾರರನ್ನು ಪಡೆಯುವುದಕ್ಕಾಗಿ ಕಠಿಣ ಪರಿಶ್ರಮದ ಅಮೆರಿಕನ್ನರನ್ನು ಕೆಲಸದಿಂದ ತೆಗೆಯುವುದನ್ನು ನನ್ನ ಆಡಳಿತ ಸಹಿಸುವುದಿಲ್ಲ’’ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News