ಮಾರ್ಸಿಲಿಯಲ್ಲಿ ಕಾಡ್ಗಿಚ್ಚು: ಸಾವಿರಾರು ನಿವಾಸಿಗಳ ಸ್ಥಳಾಂತರ

Update: 2020-08-05 18:30 GMT

ಮಾರ್ಸಿಲೀ (ಫ್ರಾನ್ಸ್), ಆ. 5: ಫ್ರಾನ್ಸ್‌ನ ದಕ್ಷಿಣದ ನಗರ ಮಾರ್ಸಿಲಿಯಲ್ಲಿರುವ ಬೃಹತ್ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು ಹೊತ್ತಿಕೊಂಡಿದ್ದು, ಸುಮಾರು 2,700 ಮಂದಿಯನ್ನು ಬುಧವಾರ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳವಾರ ಅಪರಾಹ್ನ ಕಾಣಿಸಿಕೊಂಡ ಕಾಡಿನ ಬೆಂಕಿಯನ್ನು ಆರಿಸಲು ಸುಮಾರು 1,800 ಅಗ್ನಿಶಾಮಕ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಬಲವಾದ ಗಾಳಿಯಿಂದಾಗಿ ಬೆಂಕಿಯು ತೀವ್ರತೆ ಪಡೆದುಕೊಂಡು ವೇಗವಾಗಿ ಹರಡುತ್ತಿದೆ.

ಬೆಂಕಿಯು ಸುಮಾರು 2,500 ಎಕರೆ ಸ್ಥಳದ ಮರಗಿಡಗಳನ್ನು ಆಪೋಶನ ಪಡೆದುಕೊಂಡಿದೆ ಹಾಗೂ ಜನವಸತಿ ಪ್ರದೇಶಗಳು ಮತ್ತು ಕರಾವಳಿ ಸಮೀಪದ ಪ್ರವಾಸಿ ತಾಣಗಳಿಗೆ ಬೆದರಿಕೆಯೊಡ್ಡಿದೆ ಎಂದು ಅಗ್ನಿಶಾಮಕ ದಳ ತಿಳಿಸಿದೆ.

ಯಾವುದೇ ಸಾವು-ನೋವು ಈವರೆಗೆ ಸಂಭವಿಸಿಲ್ಲ, ಆದರೆ ವಸ್ತುರೂಪದ ನಷ್ಟವನ್ನು ಇನ್ನಷ್ಟೇ ಲೆಕ್ಕಹಾಕಬೇಕಾಗಿದೆ ಎಂದು ಅದು ಹೇಳಿದೆ.

ಬೆಂಕಿಯು ಬುಧವಾರ ಸಂಜೆಯವರೆಗೂ ನಿಯಂತ್ರಣಕ್ಕೆ ಬಂದಿಲ್ಲ.

ಕರಾವಳಿಯ ಕ್ಯಾಂಪ್‌ಸೈಟ್‌ಗಳಿಗೆ ಬಂದಿದ್ದ ಕೆಲವು ಪ್ರವಾಸಿಗರನ್ನು ದೋಣಿಗಳ ಮೂಲಕ ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News