ಕಠಿಣ ನಿರ್ಬಂಧದ ಕಾರಣ ಫಾರೂಕ್ ಅಬ್ದುಲ್ಲಾ ನಿವಾಸದಲ್ಲಿ ನಡೆಯಬೇಕಿದ್ದ ಸಭೆ ರದ್ದು

Update: 2020-08-05 18:51 GMT

ಶ್ರೀನಗರ, ಆ.5: ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದ ವರ್ಷಾಚರಣೆ ನಡೆಸಲು ಬಿಜೆಪಿಯವರಿಗೆ ಅವಕಾಶವಿದೆ. ಆದರೆ ನಮಗೆ ನನ್ನ ತಂದೆಯ ಮನೆಯ ಆವರಣದಲ್ಲಿಯೂ ಸಭೆ ಸೇರಲು ಆಡಳಿತ ಅವಕಾಶ ನೀಡಿಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಉಪಾಧ್ಯಕ್ಷ ಉಮರ್ ಅಬ್ದುಲ್ಲಾ ಹೇಳಿದ್ದಾರೆ.

ಬಿಜೆಪಿಯ ಬೂಟಾಟಿಕೆ ಬಯಲಾಗಿದೆ. ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದ ಬಳಿಕ ಉದ್ಭವಿಸಿರುವ ಪರಿಸ್ಥಿತಿಯ ಬಗ್ಗೆ ಹಾಗೂ ಪ್ರಜಾತಾಂತ್ರಿಕ ವಿಧಾನಗಳಿಂದ ವಿಶೇಷ ಸ್ಥಾನಮಾನದ ಮರುಸ್ಥಾಪನೆಯ ಕುರಿತು ಸಮಾಲೋಚನೆ ನಡೆಸಲು ನ್ಯಾಷನಲ್ ಕಾನ್ಫರೆನ್ಸ್‌ನ ಅಧ್ಯಕ್ಷ ಫಾರೂಕ್ ಅಬ್ದುಲ್ಲಾರ ನಿವಾಸದಲ್ಲಿ ಬುಧವಾರ ಆಯೋಜಿಸಿದ್ದ ಪ್ರಮುಖ ರಾಜಕೀಯ ಪಕ್ಷಗಳ ಸಭೆಯು ಆಡಳಿತ ವಿಧಿಸಿದ್ದ ಕಠಿಣ ನಿರ್ಬಂಧದಿಂದಾಗಿ ರದ್ದಾಗಿದೆ ಎಂದು ಅಬ್ದುಲ್ಲಾ ಟೀಕಿಸಿದ್ದಾರೆ.

  ಒಂದು ವರ್ಷದ ಬಳಿಕವೂ ರಾಜಕೀಯ ಪಕ್ಷಗಳ ಸಭೆ ನಡೆಯಲು ಆಡಳಿತ ಅನುಮತಿ ನೀಡುತ್ತಿಲ್ಲ. ಅವರಲ್ಲಿರುವ ಭಯ ಕಾಶ್ಮೀರದಲ್ಲಿ ಈಗಿರುವ ವಾಸ್ತವಿಕ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಹೇಳಿದ್ದಾರೆ. ಫಾರೂಕ್ ಅಬ್ದುಲ್ಲಾರ ಮನೆ ಇರುವ ಗುಪ್‌ಕರ್ ರಸ್ತೆಯ ಫೋಟೋವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿರುವ ಉಮರ್ ಅಬ್ದುಲ್ಲಾ, ಒಂದು ವರ್ಷದ ಬಳಿಕವೂ ಗುಪ್‌ಕರ್ ರಸ್ತೆಯ ದೃಶ್ಯ ಬದಲಾಗಿಲ್ಲ. ನಮ್ಮ ಮನೆಯ ಗೇಟಿನ ಎದುರುಭಾಗದಲ್ಲಿ ಪೊಲೀಸರ ವಾಹನ ನಿಂತಿದೆ. ಅಲ್ಲಲ್ಲಿ ಮುಳ್ಳುತಂತಿಯ ಬೇಲಿ ಅಳವಡಿಸಿದ್ದು ಯಾವ ವಾಹನವನ್ನೂ ಒಳಗೆ ಬಿಡುತ್ತಿಲ್ಲ ಎಂದು ಹೇಳಿದ್ದಾರೆ.

 ನ್ಯಾಷನಲ್ ಕಾನ್ಫರೆನ್ಸ್‌ನ ಸಂಸದರಾದ ಹಸ್ನೈನ್ ಮಸೂದಿ ಮತ್ತು ಅಕ್ಬರ್ ಲೋನ್, ಪಿಡಿಪಿ ರಾಜ್ಯಸಭಾ ಸದಸ್ಯ ಫಯಾಝ್ ಮೀರ್, ಸಿಪಿಐಎಂ ಮುಖಂಡ ಎಂವೈ ತರಿಗಾಮಿ, ಅಬ್ದುಲ್ಲಾರ ಸೋದರಳಿಯ ಮುಝಫರ್ ಶಹ ಮುಂತಾದ ಮುಖಂಡರು ಸಭೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿಲ್ಲ ಎಂದು ಉಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News