'ರಾಮಮಂದಿರಕ್ಕೆ ಮುಸ್ಲಿಮರ ವಿರೋಧ ಇಲ್ಲ' ಎಂದು ಸಾರಲು ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡೆ: ಇಕ್ಬಾಲ್ ಅನ್ಸಾರಿ

Update: 2020-08-06 04:37 GMT

ರಾಮ ಮಂದಿರಕ್ಕೆ ವಿರೋಧವಲ್ಲ ಎಂಬ ಸಂದೇಶ ಸಾರುವ ಸಲುವಾಗಿ ರಾಮಜನ್ಮಭೂಮಿಗೆ ಭೇಟಿ ನೀಡಿದೆ

ಉತ್ತರ ಪ್ರದೇಶ, ಆ.6: ರಾಮಜನ್ಮಭೂಮಿ- ಬಾಬರಿ ಮಸೀದಿ ಜಮೀನು ವಿವಾದದಲ್ಲಿ ದಾವೆ ಹೂಡಿ ಕೊನೆಯವರೆಗೂ ನ್ಯಾಯಕ್ಕಾಗಿ ಹೋರಾಡಿದ ಇಕ್ಬಾಲ್ ಅನ್ಸಾರಿಯವರು ರಾಮಮಂದಿರ ಶಿಲಾನ್ಯಾಸ ಸಮಾರಂಭದಲ್ಲಿ ಭಾಗವಹಿಸಿದ್ದು ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಆದರೆ 'ರಾಮಮಂದಿರ ನಿರ್ಮಾಣಕ್ಕೆ ಮುಸ್ಲಿಮರ ವಿರೋಧ ಇಲ್ಲ' ಎಂದು ಸ್ಪಷ್ಟಪಡಿಸುವ ಸಲುವಾಗಿ ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದಾಗಿ ಅವರು ಸಮರ್ಥಿಸಿಕೊಂಡಿದ್ದಾರೆ.

ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ವಿಶೇಷ ಸಂದರ್ಶನಲ್ಲಿ ಮಾತನಾಡಿದ ಅವರು, ''ನನ್ನ ತಂದೆ ಬಾಬ್ರಿ ಮಸೀದಿಗಾಗಿ ಜೀವನ ಪರ್ಯಂತ ಹೋರಾಟ ನಡೆಸಿದರು. ಅವರ ಸಾವಿನ ಬಳಿಕ ನಾನು ಆ ಹೊಣೆ ವಹಿಸಿಕೊಂಡು ಅಯೋಧ್ಯೆ ದಾವೆಯ ಅರ್ಜಿದಾರನಾದೆ. ನಾವು ಕಾನೂನು ಹೋರಾಟ ನಡೆಸಿದೆವು. ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ತೀರ್ಪನ್ನು ಒಪ್ಪಿಕೊಳ್ಳುವುದು ನಮ್ಮ ಕರ್ತವ್ಯ. ಮುಸ್ಲಿಮರು ರಾಮ ಮಂದಿರಕ್ಕೆ ವಿರೋಧವಲ್ಲ ಎಂಬ ಸಂದೇಶವನ್ನು ಸಾರುವ ಸಲುವಾಗಿ ರಾಮಜನ್ಮಭೂಮಿಗೆ ಭೇಟಿ ನೀಡಿದೆ'' ಎಂದು ಅವರು ಸ್ಪಷ್ಟಪಡಿಸಿದರು.

ಸುಪ್ರೀಂ ತೀರ್ಪಿನ ಬಗ್ಗೆ ಕೇಳಿದ ಪ್ರಶ್ನೆಗೆ, ''ಮುಸ್ಲಿಮರು ಮಸೀದಿ ನಿರ್ಮಿಸಲು ದೇಗುಲ ಕೆಡವಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ನಮ್ಮ ಹಿಂದೂ ಸಹೋದರರು ನಮ್ಮೊಂದಿಗೆ ಇದ್ದಾರೆ. ಈ ಸಂತಸದ ಕ್ಷಣವನ್ನು ಸವಿಯಲು ನಾವು ಅವರ ಜತೆಗಿದ್ದೇವೆ'' ಎಂದು ಪ್ರತಿಕ್ರಿಯಿಸಿದರು.

'ಪ್ರಧಾನಿಗೆ ಏನು ಹೇಳಿದಿರಿ' ಎಂದು ಪ್ರಶ್ನಿಸಿದಾಗ, ''ನಾನು ಅವರಿಗೆ ರಾಮಚರಿತ ಮಾನಸದ ಪ್ರತಿ ನೀಡಲು ಬಯಸಿದ್ದೆ. ಆದರೆ ಕೋವಿಡ್-19 ಸಾಂಕ್ರಾಮಿಕದ ಕಾರಣದಿಂದಾಗಿ ಅವರು ಉಡುಗೊರೆ ಸ್ವೀಕರಿಸಲಿಲ್ಲ. ನಾವು ಶುಭಾಶಯ ವಿನಿಮಯ ಮಾಡಿಕೊಂಡೆವು. ರಾಮಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಪ್ರಧಾನಿ ಪರವಾಗಿ ಪುಸ್ತಕ ಸ್ವೀಕರಿಸಿದರು'' ಎಂದು ವಿವರಿಸಿದರು.

''ರಾಮಮಂದಿರ ಬಳಿಕ ಮುಸ್ಲಿಮರ ನಿಲುವೇನು ಎಂದು ಕೇಳಿದಾಗ, ಬಹುತೇಕ ಹಿಂದೂಗಳು ಸಹಿಷ್ಣುಗಳು. ರಾಮ ಅವರ ನಂಬಿಕೆ. ಅವರ ನಂಬಿಕೆಯನ್ನು ನಾವು ಗೌರವಿಸಿದರೆ, ದೇವಸ್ಥಾನ ನಿರ್ಮಾಣದ ಬಳಿಕವೂ ಎರಡು ಸಮುದಾಯಗಳ ನಡುವೆ ಸಂಘರ್ಷಕ್ಕೆ ಅವಕಾಶವಿಲ್ಲ'' ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News