‘ಚೀನಾದ ಅತಿಕ್ರಮಣ ನಡೆದಿದೆ’ ಎಂದು ಒಪ್ಪಿಕೊಂಡಿದ್ದ ದಾಖಲೆಗಳು ರಕ್ಷಣಾ ಸಚಿವಾಲಯದ ವೆಬ್ ಸೈಟ್ ನಿಂದ ಮಾಯ!

Update: 2020-08-06 08:30 GMT

ಹೊಸದಿಲ್ಲಿ: ಮೇ ತಿಂಗಳಲ್ಲಿ ಚೀನಾದ ಸೈನಿಕರು ಪೂರ್ವ ಲಡಾಖ್‍ ನಲ್ಲಿ ಭಾರತದ ಭೂಭಾಗದೊಳಗೆ ನುಸುಳಿದ್ದರು ಎಂಬುದನ್ನು ಅಧಿಕೃತವಾಗಿ ಒಪ್ಪಿಕೊಂಡಿದ್ದ ದಾಖಲೆಗಳನ್ನು ರಕ್ಷಣಾ ಇಲಾಖೆಯ ವೆಬ್ ಸೈಟ್ ನಿಂದ ತೆಗೆದು ಹಾಕಲಾಗಿದೆ.

“ಚೀನಾದ ಕಡೆಯು ಕುಗ್ರಂಗ್ ನಾಲಾ (ಪೆಟ್ರೋಲಿಂಗ್ ಪಾಯಿಂಟ್-15, ಹಾಟ್ ಸ್ಪ್ರಿಂಗ್ಸ್ ನ ಉತ್ತರ ಭಾಗದಲ್ಲಿ), ಗೋಗ್ರಾ (ಪಿಪಿ-17ಎ) ಹಾಗೂ ಪ್ಯಾಂಗೊಂಗ್ ತ್ಸೊ ಇದರ ಉತ್ತರದ ಭಾಗದಲ್ಲಿ  ಮೇ 17-18ರಂದು  ಅತಿಕ್ರಮಿಸಿತ್ತು'' ಎಂದು ಮಂಗಳವಾರ ರಕ್ಷಣಾ ಸಚಿವಾಲಯದ ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಲಾಗಿರುವ ದಾಖಲೆಯಲ್ಲಿ ಹೇಳಲಾಗಿತ್ತು.

ಈ ಬಗ್ಗೆ ವರದಿ ಮಾಡಿದ್ದ timesofindia.com ಚೀನಾ ಅತಿಕ್ರಮಣದ ಬಗ್ಗೆ ರಕ್ಷಣಾ ಇಲಾಖೆ ಅಧಿಕೃತವಾಗಿ ಒಪ್ಪಿಕೊಂಡಿದೆ ಎಂದು ವರದಿ ಮಾಡಿತ್ತು. ರಕ್ಷಣಾ ಸಚಿವಾಲಯದ ವೆಬ್ ಸೈಟ್ ನ ‘ವಾಟ್ಸ್ ನ್ಯೂ’ ಸೆಕ್ಷನ್ ನಲ್ಲಿದ್ದ ಈ ದಾಖಲೆಯಲ್ಲಿ ‘ಪರಿಸ್ಥಿತಿಯನ್ನು ತಿಳಿಗೊಳಿಸಲು ಎರಡೂ ಕಡೆಯ ಸೇನೆಗಳ ನಡುವೆ ಮಾತುಕತೆ ನಡೆದಿದೆ. ಜೂನ್ 6ರಂದು ಕಾರ್ಪ್ಸ್ ಕಮಾಂಡರ್ ಮಾತುಕತೆಗಳು ನಡೆದಿವೆ” ಎಂದು ತಿಳಿಸಲಾಗಿತ್ತು.

ಆದರೆ ಇಂದು ಬೆಳಗ್ಗೆ ವೆಬ್ ಸೈಟ್ ನಲ್ಲಿದ್ದ ಆ ದಾಖಲೆ ಮಾಯವಾಗಿದೆ. ಚೀನಾ ಅತಿಕ್ರಮಣದ ಬಗ್ಗೆ ರಕ್ಷಣಾ ಸಚಿವಾಲಯವೇ ಒಪ್ಪಿಕೊಂಡಿದೆ ಎಂದು ವರದಿಯಾದ ಬಳಿಕ ಪ್ರಧಾನಿ ಮೋದಿ ವಿರುದ್ಧ ವಿಪಕ್ಷ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, “ಪ್ರಧಾನಿ ಏಕೆ ಸುಳ್ಳು ಹೇಳುತ್ತಿದ್ದಾರೆ?” ಎಂದು ಪ್ರಶ್ನಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News