“ರಫೇಲ್, ಅಯೋಧ್ಯೆ ತೀರ್ಪು ನೀಡಿದ ನ್ಯಾಯಾಧೀಶರಿಗೆ ರಾಜ್ಯಸಭಾ ಸ್ಥಾನ, ಝಡ್ ಪ್ಲಸ್ ಭದ್ರತೆ”

Update: 2020-08-06 11:30 GMT

ಹೊಸದಿಲ್ಲಿ: “ಹಿಂದಿನ ಮುಖ್ಯ ನ್ಯಾಯಮೂರ್ತಿ  ರಂಜನ್ ಗೊಗೊಯಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದ ಉದ್ಯೋಗಿಯೊಬ್ಬರನ್ನು ಸುಪ್ರೀಂ ಕೋರ್ಟ್ ಆಕೆಯ ಹಿಂದಿನ ಹುದ್ದೆಯಲ್ಲಿಯೇ ಮರುಸ್ಥಾಪಿಸಬಹುದಾದರೆ, ನ್ಯಾಯಾಂಗದ ಕುರಿತಂತೆ ಹಾಗೂ ಹಾಲಿ ಮುಖ್ಯ ನ್ಯಾಯಮೂರ್ತಿಗಳ ಒಂದು ಕಾರ್ಯದ ಕುರಿತಂತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಹೋರಾಟಗಾರ ಪ್ರಶಾಂತ್ ಭೂಷಣ್ ಅವರಿಗೆ ನ್ಯಾಯಾಂಗ ನಿಂದನೆ ನೋಟಿಸ್ ಹೇಗೆ ಜಾರಿಗೊಳಿಸಬಹುದಾಗಿದೆ?'' ಎಂಬ ಪ್ರಶ್ನೆಯನ್ನು ಹಿರಿಯ ವಕೀಲ ದುಷ್ಯಂತ್ ದವೆ ಸುಪ್ರೀಂ ಕೋರ್ಟ್ ವಿಚಾರಣೆ ವೇಳೆ ಎತ್ತಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಎಸ್. ಎ. ಬೊಬ್ಡೆ ಅವರು ಹಾರ್ಲೆ ಡೇವಿಡ್ಸನ್ ಬೈಕಿನಲ್ಲಿ ಕುಳಿತಿರುವಾಗ ತೆಗೆಯಲಾದ ಫೋಟೋ ಕುರಿತಂತೆ  ಹಾಗೂ ಕಳೆದ ನಾಲ್ಕು ಮುಖ್ಯ ನ್ಯಾಯಮೂರ್ತಿಗಳ ಅವಧಿಯಲ್ಲಿ ದೇಶದಲ್ಲಿ ಪ್ರಜಾಪ್ರಭುತ್ವದ ನಾಶವಾಗಿದೆ ಎಂಬ ಆರೋಪ ಹೊರಿಸಿ ಮಾಡಿದ್ದ ಟ್ವೀಟಿಗೆ ಸುಪ್ರೀಂ ಕೋರ್ಟಿನಿಂದ ಭೂಷಣ್ ಎದುರಿಸುತ್ತಿರುವ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ವೇಳೆ ದುಷ್ಯಂತ್ ದವೆ ಮೇಲಿನ ಪ್ರಶ್ನೆ ಎತ್ತಿದ್ದಾರೆ.

“ಮಾಜಿ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿದಾಕೆಯನ್ನು ಸುಪ್ರೀಂ ಕೋರ್ಟ್‍ ವಾಪಸ್ ತೆಗೆದುಕೊಂಡಿದೆ. ಏನಿದರ ಅರ್ಥ?, ಆಕೆಯ ಆರೋಪಗಳಲ್ಲಿ  ಸತ್ಯವಿದೆಯೆಂದು ಆಕೆ ಹೇಳುತ್ತಿದ್ದಾರೆ. ಆಕೆ ಸಿಜೆಐಯಂತಹ ಉನ್ನತ  ಹುದ್ದೆಯಲ್ಲಿರುವವರ ಮೇಲೆ ಆರೋಪ ಮಾಡಿದ್ದಾರೆ. ಅದು ಸುಳ್ಳಾಗಿದ್ದರೆ ಅದು ನ್ಯಾಯಾಂಗ ನಿಂದನೆಗೆ ಸಮನಾಗಿದೆ, ಭೂಷಣ್ ಅವರ ಪ್ರಕರಣವನ್ನೂ ಅದೇ ದೃಷ್ಟಿಕೋನದಿಂದ ನೋಡಬೇಕು'' ಎಂದು ದವೆ ಮನವಿ ಮಾಡಿದರು.

ಗೊಗೊಯಿ ಪ್ರಕರಣದ ಕುರಿತು ಮತ್ತೆ ಮಾತನಾಡಿದ ದವೆ , “ಒಬ್ಬ ನ್ಯಾಯಾಧೀಶರು (ರಂಜನ್ ಗೊಗೊಯಿ) ಶನಿವಾರದಂದು ತಮ್ಮ ವಿರುದ್ಧವೇ ದಾಖಲಾಗಿರುವ ಲೈಂಗಿಕ ಕಿರುಕುಳ ಪ್ರಕರಣದ ವಿಚಾರಣೆಗೆ ಕೂರುತ್ತಾರೆ. ನಂತರ ಅವರಿಗೆ ರಾಜ್ಯಸಭಾ ಸ್ಥಾನ ಹಾಗೂ ಝಡ್ ಪ್ಲಸ್ ಭದ್ರತೆ ದೊರೆಯುತ್ತದೆ. ಇದು  ಗೊಗೊಯಿ ಅವರು ರಫೇಲ್, ಅಯೋಧ್ಯೆ ಹಾಗೂ ಸಿಬಿಐ ನಿರ್ದೇಶಕರ ಪ್ರಕರಣಗಳಲ್ಲಿ ನೀಡಿದ ತೀರ್ಪುಗಳ ಕುರಿತಂತೆ ಗಂಭೀರ ಪ್ರಶ್ನೆಗಳನ್ನು ಎತ್ತುತ್ತದೆ'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News