ಕೊರೋನ ಸೋಂಕಿನಿಂದ ಗುಣಮುಖರಾಗುವವರ ಸಂಖ್ಯೆ ಹೆಚ್ಚಳ: ಸಚಿವ ಡಾ.ಸುಧಾಕರ್

Update: 2020-08-06 13:29 GMT

ಬೆಂಗಳೂರು, ಆ. 6: ಕೋವಿಡ್ ರೋಗಿಗಳಿಗೆ ನೆರವಾಗಲು ಎಚ್‍ಎಎಲ್ ಸಂಸ್ಥೆಯು ಎರಡು ಆಂಬ್ಯುಲೆನ್ಸ್‍ಗಳನ್ನು ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗೆ ನೀಡಿದ್ದು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಆಂಬ್ಯುಲೆನ್ಸ್‍ಗಳನ್ನು ಸರಕಾರದ ಪರವಾಗಿ ಸ್ವೀಕರಿಸಿದರು.

ಗುರುವಾರ ಹಳೆ ವಿಮಾನ ನಿಲ್ದಾಣ ರಸ್ತೆಯ ಎಚ್‍ಎಎಲ್‍ನ ಕೋವಿಡ್ ಆರೈಕೆ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಚ್‍ಎಎಲ್ ಸಂಸ್ಥೆಯಿಂದ 2 ಆಂಬ್ಯುಲೆನ್ಸ್ ಗಳನ್ನು ಸ್ವೀಕರಿಸಿದ ಬಳಿಕ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, 200 ಹಾಸಿಗೆ ಇರುವ ಎಚ್‍ಎಎಲ್‍ನ ಕೋವಿಡ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಅಚ್ಚುಕಟ್ಟಾಗಿ ನಡೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೊರೋನ ವೈರಸ್ ಒಂದೊಂದು ದೇಶದಲ್ಲಿ ಒಂದೊಂದು ರೀತಿ ವರ್ತಿಸುತ್ತದೆ. ಈ ಬಗ್ಗೆ ಇನ್ನಷ್ಟು ಅಧ್ಯಯನಗಳಾಗಬೇಕಿದೆ. ಸರಕಾರ ಪರೀಕ್ಷೆ ಮಾಡುವುದು, ಚಿಕಿತ್ಸೆ ನೀಡುವುದು ಮೊದಲಾದ ಕ್ರಮಗಳನ್ನು ಕೈಗೊಂಡಿದೆ. ಕೆಲ ದಿನಗಳಿಂದ ರಾಜ್ಯದಲ್ಲಿ ಗುಣಮುಖರಾಗುವವರ ಸಂಖ್ಯೆ ಹೆಚ್ಚಾಗಿದೆ. ಸಾವಿನ ಪ್ರಮಾಣವೂ ಕಡಿಮೆಯಾಗಿದೆ. ವಿರೋಧ ಮಾಡುವವರು ಈ ಅಂಕಿ ಅಂಶಗಳನ್ನು ನೋಡಬೇಕು ಎಂದು ಸುಧಾಕರ್ ಹೇಳಿದರು.

ಇದೀಗ ಪ್ರತಿಷ್ಠಿತ ಎಚ್‍ಎಎಲ್ ಸಂಸ್ಥೆಯು ಸಿಎಸ್‍ಆರ್ ಯೋಜನೆಯಡಿ ಎರಡು ಆಂಬ್ಯುಲೆನ್ಸ್‍ಗಳನ್ನು ನಗರದ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗೆ ಉಚಿತವಾಗಿ ನೀಡಿದೆ. ಈ ಮೂಲಕ ಎಚ್‍ಎಎಲ್ ಮತ್ತಷ್ಟು ಜವಾಬ್ದಾರಿಯನ್ನು ತೆಗೆದುಕೊಂಡಿದೆ. ಈ ಸಂಸ್ಥೆಗೆ ಸರಕಾರದ ಪರವಾಗಿ ಕೃತಜ್ಞತೆ ಅರ್ಪಿಸುತ್ತೇನೆ ಎಂದು ಡಾ.ಸುಧಾಕರ್ ತಿಳಿಸಿದರು.

ಎಚ್‍ಎಎಲ್ ಮುಖ್ಯಸ್ಥ ಆರ್.ಮಾಧವನ್, ಹಿರಿಯ ಅಧಿಕಾರಿ ರಾಜೇಂದ್ರ ಕುಮಾರ್ ಕಟಾರಿಯಾ, ಬಿಎಂಸಿಆರ್‍ಐ ನಿರ್ದೇಶಕ ಡಾ.ಮನೋಜ್ ಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಶೇ.27ರಷ್ಟು ಖಾಲಿ: ಬೆಂಗಳೂರಿನಲ್ಲಿ 11 ಸುಸಜ್ಜಿತ ಕೋವಿಡ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಕೇಂದ್ರಗಳಲ್ಲಿ 4,276 ಹಾಸಿಗೆಗಳಿವೆ. ಈ ಪೈಕಿ 936 ಹಾಸಿಗೆಗಳು ಖಾಲಿ ಇವೆ. ಅಂದರೆ ಶೇ.27.79ರಷ್ಟು ಹಾಸಿಗೆಗಳು ಖಾಲಿ ಇವೆ. ಈ ಕೇಂದ್ರಗಳಲ್ಲಿರುವ 3,346 ರೋಗಿಗಳ ಪೈಕಿ 306 ಮಂದಿಯನ್ನು ಗುರುವಾರ (ಆ.6) ಬಿಡುಗಡೆ ಮಾಡುವುದು ಎಂದು ಡಾ.ಕೆ.ಸುಧಾಕರ್ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News