ಮುಂದಿನ ತಲೆಮಾರುಗಳಿಗಾಗಿ ವರದಿಗಳು

Update: 2020-08-07 19:30 GMT

ಭಾರತದ ಮೆಜಾರಿಟೇರಿಯನ್ ರಾಜಕೀಯ ಸಂಸ್ಕೃತಿಯಲ್ಲಿ ದೊಂಬಿಗಳು ಯಾವ ಪರಿಸ್ಥಿತಿಯಲ್ಲಿ ಸಂಭವಿಸುತ್ತವೆ ಮತ್ತು ದೊಂಬಿಯ ನಂತರದ ಪರಿಸ್ಥಿತಿಗಳನ್ನು ಹೇಗೆ ನಿಭಾಯಿಸಲಾಗುತ್ತದೆ ಎಂಬುದನ್ನು ಪರಿಶೀಲಿಸಲು ದಿಲ್ಲಿ ದೊಂಬಿಗಳು ಒಂದು ಅವಕಾಶ ಒದಗಿಸಿವೆ. ತಾತ್ವಿಕವಾಗಿ ಹೇಳುವುದಾದರೆ, ಎರಡು ಸಂಗತಿಗಳು ನಡೆದಿವೆ: ಮೊದಲನೆಯದಾಗಿ ದೊಂಬಿ ಸಂತ್ರಸ್ತರನ್ನೇ, ದೊಂಬಿಗೆ ಬಲಿಪಶುವಾದವರನ್ನೇ ಬಹಳಷ್ಟು ವೇಳೆ ಅಪರಾಧಿಗಳನ್ನಾಗಿ ಮಾಡಲಾಗಿದೆ. ಎರಡನೆಯದಾಗಿ, ದೊಂಬಿಗಳು ಮುಗಿದ ನಂತರ ದೊಂಬಿ ನಿರತ ಸಮುದಾಯಗಳ ನಡುವೆ ಸಂಧಾನ ಮಾತುಕತೆಗಾಗಿ ಪ್ರಯತ್ನಗಳು ನಡೆದಿಲ್ಲ; ಈ ಮೂಲಕ ಧ್ರುವೀಕರಣದ ರಾಜಕೀಯಕ್ಕೆ ಭವಿಷ್ಯದಲ್ಲೂ ಅವಕಾಶ ಉಳಿದಿರುವಂತೆ ನೋಡಿಕೊಳ್ಳಲಾಗಿದೆ.

ಈ ನಿಟ್ಟಿನಲ್ಲಿ 2020ರ ದಿಲ್ಲಿ ದೊಂಬಿಗಳ ಪರಿಶೀಲನೆ ನಡೆಸಿದ ಅಲ್ಪಸಂಖ್ಯಾತರಿಗಾಗಿ ದಿಲ್ಲಿ ಆಯೋಗ (ದಿಲ್ಲಿ ಕಮಿಷನ್ ಫಾರ್ ಮೈನಾರಿಟಿ-ಡಿಸಿಎಂ) ಬಹಿರಂಗಪಡಿಸಿರುವ ವರದಿಯನ್ನು ಗಂಭೀರವಾಗಿ ಗಮನಿಸುವ ಅವಶ್ಯಕತೆ ಇದೆ. ಈ ದೊಂಬಿಗಳನ್ನು ವಸ್ತುನಿಷ್ಠವಾಗಿ ಅರ್ಥ ಮಾಡಿಕೊಳ್ಳಬೇಕಾದರೆ ಅವುಗಳಿಗೆ ಸಂಬಂಧಿಸಿ ಮೂರು ನಿರ್ದಿಷ್ಟ ಸಂದರ್ಭಗಳನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು:

1) 2019ರ ನಾಗರಿಕ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ರಾಷ್ಟ್ರವ್ಯಾಪಿಯಾಗಿ ನಡೆದ ಪ್ರತಿಭಟನೆಗಳಿಗೆ ಸಂಬಂಧಿಸಿ ಆದ ರಾಜಕೀಯ ಬೆಳವಣಿಗೆಗಳು.

2) 2020ರ ಫೆಬ್ರವರಿ ಎಂಟರಂದು ನಡೆದ ದಿಲ್ಲಿ ಅಸೆಂಬ್ಲಿ ಚುನಾವಣೆ ಮತ್ತು ಆ ಚುನಾವಣೆಗೆ ನಡೆದ ಧ್ರುವೀಕೃತ ಚುನಾವಣಾ ಪ್ರಚಾರ ದಿಲ್ಲಿಯ ಹಿಂಸೆ ದಳ್ಳುರಿಗೆ ಇಂಧನವಾದದ್ದು.

3) ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ನೀಡಿದ ಭೇಟಿ.
ವರದಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಈ ಮೂರು ನಿರ್ದಿಷ್ಟ ಸಂದರ್ಭ/ ಸನ್ನಿವೇಶಗಳ ರಾಜಕಾರಣ ಹಿಂಸೆಯ ಸ್ವರೂಪವನ್ನು ರೂಪಿಸಿತ್ತು ಎನ್ನುವುದು ಗೊತ್ತಾಗುತ್ತದೆ.
ವರದಿಯಿಂದ ಒಂದು ಅಂಶವಂತೂ ಸ್ಪಷ್ಟವಾಗುತ್ತದೆ; 1984ರ ದೊಂಬಿಗಳು ಬಹುತೇಕ ಸಿಖ್ ವಿರೋಧಿ ದೊಂಬಿಗಳಾಗಿದ್ದವು; ಹಾಗೆಯೇ ದಿಲ್ಲಿ ದೊಂಬಿಗಳು ಮುಸ್ಲಿಮರ ವಿರುದ್ಧ ನಡೆದ ದೊಂಬಿಗಳಾಗಿದ್ದವು. ದೊಂಬಿ ನಿರತ ಗುಂಪುಗಳು ಕೂಗಿದ ಘೋಷಣೆಗಳು ದ್ವೇಷಪೂರಿತ ಹಾಗೂ ಮುಸ್ಲಿಂ ವಿರೋಧಿ ಘೋಷಣೆಗಳಾಗಿದ್ದವು. ಉದಾಹರಣೆಗೆ ದೇಶ ವಿಭಜನೆ ಕಥಾ ವಸ್ತುವಾಗಿರುವ ಗದ್ದಾರ್ ಸಿನೆಮಾವನ್ನು ಆಗ ಉಲ್ಲೇಖಿಸಲಾಯಿತೆಂದು ಓರ್ವ ಮಹಿಳೆ ಹೇಳಿದ್ದಾರೆ. ಮುಸ್ಲಿಂ ಮಹಿಳೆಯರು: ‘‘ಓಡಿ ಹೋಗಿ ತಮ್ಮನ್ನು ರಕ್ಷಿಸಿಕೊಳ್ಳಬೇಕು’’ ಎಂದು ದೊಂಬಿ ನಿರತ ಗುಂಪು ಕಿರುಚಿತ್ತೆಂದು ಹಲವರು ಹೇಳಿದ್ದಾರೆ. ಇಷ್ಟೇ ಅಲ್ಲದೆ ಮುಸ್ಲಿಮರ ಮನೆಗಳನ್ನು ಲೂಟಿ ಮಾಡಲಾಯಿತು. ನಾಶಗೊಳಿಸಲ್ಪಟ್ಟ ಮಸೀದಿಗಳ, ದರ್ಗಾಗಳ, ಮದ್ರಸಗಳ ಹಾಗೂ ದಫನ ಭೂಮಿಗಳ ಒಂದು ಪಟ್ಟಿಯನ್ನೇ ವರದಿ ನೀಡಿದೆ. ಒಂದೇ ಪ್ರದೇಶಗಳಲ್ಲಿದ್ದ ಮುಸ್ಲಿಮರ ಅಂಗಡಿಗಳನ್ನು ಗುರಿ ಮಾಡಿ ಧ್ವಂಸ ಮಾಡಲಾಯಿತು. ಹಿಂದೂಗಳ ಅಂಗಡಿಗಳನ್ನು ಮುಟ್ಟದೆ ಹಾಗೆಯೇ ಬಿಡಲಾಯಿತೆಂದು ವರದಿ ಹೇಳುತ್ತದೆ.

2020ರ ಮಾರ್ಚ್ 18ರಂದು ಸತ್ಯಶೋಧಕ ತಂಡವು ದಿಲ್ಲಿ ಪೊಲೀಸರಿಗೆ ಲಿಖಿತವಾಗಿ ಈ ಕೆಳಗಿನ ವಿಷಯಗಳಿಗೆ ಸಂಬಂಧಿಸಿ ಮಾಹಿತಿಯನ್ನು ಕೇಳಿತು:

1) 2020 ಫೆಬ್ರವರಿ 23ರಿಂದ ಬಂಧಿಸಲ್ಪಟ್ಟವರ ಯಾದಿ.

2) ಪ್ರತಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ಗಳ ಪ್ರತಿಗಳು.

3) ಎಫ್‌ಐಆರ್‌ಗಳಾಗಿ ಮಾಡದೇ ಇರುವ, ಪರಿವರ್ತಿಸದ ದೂರುಗಳು. ದಿಲ್ಲಿ ಪೊಲೀಸರು ಈ ಯಾವುದಕ್ಕೂ ಉತ್ತರ ನೀಡಲಿಲ್ಲ. ಪ್ರಜಾಸತ್ತಾತ್ಮಕ ದೇಶದ ಒಂದು ಸಂಸ್ಥೆಯಾಗಿರುವ ದಿಲ್ಲಿ ಪೊಲೀಸರು ಸತ್ಯಶೋಧಕ ತಂಡಕ್ಕೆ ಸಹಕಾರ ನೀಡದಿರುವ ತೀರ್ಮಾನ ತೆಗೆದುಕೊಂಡಿರುವುದು ಒಂದು ಗಂಭೀರ ವಿಷಯ.
ನಿವೃತ್ತ ಹೈಕೋರ್ಟ್ ನ್ಯಾಯಾಧೀಶರೊಬ್ಬರ ನೇತೃತ್ವದಲ್ಲಿ ಒಂದು ಸ್ವತಂತ್ರ ವಿಚಾರಣಾ ಸಮಿತಿಯನ್ನು ನೇಮಿಸಬೇಕೆನ್ನುವುದು ಸತ್ಯಶೋಧಕ ತಂಡ ಮಾಡಿರುವ ಒಂದು ಪ್ರಮುಖ ಶಿಫಾರಸು. ಆದರೆ ಸ್ವತಂತ್ರ ಭಾರತದಲ್ಲಿ ನಡೆದ ಹಲವಾರು ದೊಂಬಿಗಳ ವಿಚಾರಣೆ ನಡೆಸಲು ಇಂತಹ ಹಲವಾರು ವಿಚಾರಣಾ ಆಯೋಗ/ ಸಮಿತಿಗಳನ್ನು ರಚಿಸಲಾಗಿದೆ. ಆದರೆ ಆ ಸಮಿತಿಗಳು ನೀಡಿರುವ ವರದಿಗಳನ್ನು ಅನುಷ್ಠಾನಗೊಳಿಸುವಲ್ಲಿ ತಥಾಕಥಿತ ಬಿಜೆಪಿಯೇತರ ಸೆಕ್ಯೂಲರ್ ಸರಕಾರಗಳ ಸಾಧನೆ ಕೂಡ ಅತ್ಯಲ್ಪ.ಅಲ್ಲದೆ ಅಂತಹ ಕೆಲವು ಸಮಿತಿಗಳು ನೀಡಿರುವ ವರದಿಗಳು ಕೂಡ ವಿವಾದಾಸ್ಪದ. ಉದಾಹರಣೆಗೆ 2013ರ ಮುಝಪ್ಫರ್‌ನಗರ ದೊಂಬಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಹಾಯಿ ಆಯೋಗ ಅಂದಿನ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಸರಕಾರದ ಗೃಹ ಇಲಾಖೆಗೆ ಕ್ಲೀನ್ ಚಿಟ್ ನೀಡಿತು. ಹಾಗೆಯೇ, 2008ರಲ್ಲಿ ಒಡಿಶಾದ ಕಂದಮಾಲ್‌ನಲ್ಲಿ ನಡೆದ ಕ್ರಿಶ್ಚಿಯನ್ ವಿರೋಧಿ ಹಿಂಸೆಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ. ಎಸ್. ನಾಯ್ಡು ಆಯೋಗ 2015ರ ಡಿಸೆಂಬರ್‌ನಲ್ಲಿ ಸರಕಾರಕ್ಕೆ ತನ್ನ ವರದಿ ಸಲ್ಲಿಸಿತ್ತಾದರೂ ಆ ವರದಿಯನ್ನು ರಾಜ್ಯ ಅಸೆಂಬ್ಲಿಯಲ್ಲಿ ಇನ್ನೂ ಮಂಡಿಸಲಾಗಿಲ್ಲ.
ಆದರೂ ಇಂತಹ ವರದಿಗಳು ಮುಂದಿನ ತಲೆಮಾರುಗಳಿಗೆ ಐತಿಹಾಸಿಕ ದಾಖಲೆಗಳಾಗಿ, ಉಪಯೋಗಕಾರಿಯಾಗಿ ಉಳಿಯುತ್ತವೆ.

 (ಲೇಖಕರು ದಿಲ್ಲಿಯ ಜಾಮಿಯಾ ಮಿಲ್ಲಿಯಾ ಕೇಂದ್ರೀಯ ವಿವಿಯಲ್ಲಿ ಶಿಕ್ಷಕರಾಗಿದ್ದಾರೆ.)

ಕೃಪೆ: thehindu

Writer - ಶೇಕ್ ಮುಜಿಬುರ್ ರೆಹಮಾನ್

contributor

Editor - ಶೇಕ್ ಮುಜಿಬುರ್ ರೆಹಮಾನ್

contributor

Similar News