ಮನೋಜ್ ಸಿನ್ಹಾ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಎನ್‌ಸಿ, ಪಿಡಿಪಿ ಬಹಿಷ್ಕಾರ

Update: 2020-08-07 19:10 GMT

ಶ್ರೀನಗರ, ಆ.7: ಜಮ್ಮು ಕಾಶ್ಮೀರದ ನೂತನ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಪ್ರಮಾಣ ವಚನ ಸ್ವೀಕಾರ ಶ್ರೀನಗರದಲ್ಲಿ ಶುಕ್ರವಾರ ನಡೆದಿದ್ದು, ಪ್ರಮುಖ ರಾಜಕೀಯ ಪಕ್ಷಗಳಾದ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷ ಕಾರ್ಯಕ್ರಮ ಬಹಿಷ್ಕರಿಸಿದೆ.

ತಮಗೆ ಕಾರ್ಯಕ್ರಮಕ್ಕೆ ಆಹ್ವಾನವಿತ್ತು. ಆದರೆ ಜಮ್ಮು ಕಾಶ್ಮೀರದಲ್ಲಿ ಅಧಿಕಾರಿಗಳ ಬದಲಾವಣೆಯ ಬದಲು ಕಾರ್ಯನೀತಿಯ ಬದಲಾವಣೆ ಅಗತ್ಯ ಎಂಬ ನಮ್ಮ ನಿಲುವಿನಂತೆ ಕಾರ್ಯಕ್ರಮ ಬಹಿಷ್ಕರಿಸಲು ನಿರ್ಧರಿಸಲಾಗಿದೆ ಎಂದು ಉಭಯ ಪಕ್ಷಗಳ ಪ್ರಮುಖರು ಹೇಳಿದ್ದಾರೆ. ಆದರೆ , ಕಳೆದ ನವೆಂಬರ್‌ನಲ್ಲಿ ಜಿಸಿ ಮುರ್ಮು ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕಾರಣ ಪಕ್ಷದಿಂದ ಉಚ್ಛಾಟನೆಗೊಂಡಿದ್ದ ಪಿಡಿಪಿಯ ರಾಜ್ಯಸಭಾ ಸಂಸದ ನಝೀರ್ ಲಾವೆ ಶುಕ್ರವಾರದ ಕಾರ್ಯಕ್ರಮದಲ್ಲೂ ಪಾಲ್ಗೊಂಡಿದ್ದರು.

ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶೆ ಗೀತಾ ಮಿತ್ತಲ್ ನೂತನ ಲೆಫ್ಟಿನೆಂಟ್ ಗವರ್ನರ್‌ಗೆ ಪ್ರಮಾಣ ವಚನ ಬೋಧಿಸಿದರು. ಕೇಂದ್ರ ಸಚಿವ ಜಿತೇಂದ್ರ ಸಿಂಗ್, ಈ ಹಿಂದಿನ ಬಿಜೆಪಿ-ಪಿಡಿಪಿ ಸಮ್ಮಿಶ್ರ ಸರಕಾರದಲ್ಲಿ ಉಪಮುಖ್ಯಮಂತ್ರಿಗಳಾಗಿದ್ದ ಕವೀಂದರ್ ಗುಪ್ತಾ, ನಿರ್ಮಲ್ ಸಿಂಗ್ ಸಹಿತ ಸುಮಾರು 200 ಆಹ್ವಾನಿತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News