ಅವರು ನಮ್ಮ ಜೀವ ಉಳಿಸಿದರು:ಮುಖ್ಯ ಪೈಲಟ್ ಸಾಹಸವನ್ನು ಶ್ಲಾಘಿಸಿದ ಪ್ರಯಾಣಿಕರು

Update: 2020-08-08 06:28 GMT

   ಹೊಸದಿಲ್ಲಿ, ಆ.8: ಕೇಂದ್ರ ಸರಕಾರದ ವಂದೇ ಮಾತರಂ ಮಿಶನ್ ಅಡಿ ದುಬೈನಿಂದ ಕೋಝಿಕ್ಕೋಡ್‌ಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಶುಕ್ರವಾರ ರಾತ್ರಿ ಅಪಘಾತಕ್ಕೀಡಾಗಿದ್ದು, ಈ ದುರಂತದಲ್ಲಿ ಪ್ರಾಣ ಬಿಟ್ಟಿರುವ ವಿಮಾನದ ಕ್ಯಾಪ್ಟನ್ ದೀಪಕ್ ವಸಂತ ಸಾಥೆ ಸಾಹಸವನ್ನು ವಿಮಾನ ಪ್ರಯಾಣಿಕರು ಶ್ಲಾಘಿಸಿದ್ದಾರೆ. ಸಮಯಪ್ರಜ್ಞೆ ಮೆರೆದು ಅಪಘಾತದ ಬಳಿಕ ವಿಮಾನ ಬೆಂಕಿಗಾಹುತಿಯಾಗುವುದನ್ನು ಕ್ಯಾಪ್ಟನ್ ತಪ್ಪಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಮಾನ ದುರಂತದಲ್ಲಿ ಇಬ್ಬರು ಪೈಲಟ್‌ಗಳು ಸೇರಿದಂತೆ ಕನಿಷ್ಟ 20 ಮಂದಿ ಸಾವನ್ನಪ್ಪಿದ್ದು, 100ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ದುಬೈನಿಂದ ಕೋಝಿಕ್ಕೋಡ್‌ಗೆ ಬರುತ್ತಿದ್ದ ಬೋಯಿಂಗ್ 737 ವಿಮಾನದಲ್ಲಿ 10 ಮಕ್ಕಳು, ವಿಮಾನದ ಸಿಬ್ಬಂದಿ ಸೇರಿದಂತೆ ಒಟ್ಟು 190 ಜನರು ಪ್ರಯಾಣಿಸುತ್ತಿದ್ದರು ಎಂದು ನಾಗರಿಕ ವಿಮಾನ ಸಚಿವಾಲಯ ತಿಳಿಸಿದೆ.

ಪೈಲಟ್‌ಗಳ ಸಾಹಸ ಹಾಗೂ ಸ್ಥಳೀಯ ನಿವಾಸಿಗಳ ಜಾಗೃತೆಯಿಂದಾಗಿ ದೊಡ್ಡ ದುರಂತವೊಂದು ತಪ್ಪಿಹೋಗಿದೆ. ಘಟನೆ ನಡೆದ ತಕ್ಷಣ ಸ್ಥಳೀಯರು ವಿಮಾನದಲ್ಲಿ ಕಾಣಿಸಿಕೊಂಡ ಸ್ವಲ್ಪ ಹೊಗೆ ಹಾಗೂ ಬೆಂಕಿಯನ್ನು ಲೆಕ್ಕಿಸದೆ ನಮ್ಮ ನೆರವಿಗೆ ಬಂದರು ಎಂದು ಪ್ರಯಾಣಿಕರೊಬ್ಬರು ಹೇಳಿದ್ದಾರೆ.

ವಿಂಗ್ ಕಮಾಂಡರ್ ದೀಪಕ್ ವಸಂತ್ ಸಾಥೆ ಭಾರತೀಯ ವಾಯುಸೇನೆಯ ಫೈಟರ್ ಆಗಿದ್ದು, ವೃತ್ತಿಯಲ್ಲಿ 22 ವರ್ಷಗಳ ಅನುಭವ ಹೊಂದಿದ್ದರು. 59ರ ಹರೆಯದ ಸಾಥೆ ಅವರ ಕೌಶಲ್ಯವನ್ನು ಗುರುತಿಸಿ ಪ್ರತಿಷ್ಠಿತ ಗೌರವವನ್ನು ನೀಡಲಾಗಿತ್ತು. 1981ರಲ್ಲಿ ಹೈದರಾಬಾದ್‌ನ ದಿಂಡಿಗಲ್ ಸಮೀಪದ ಏರ್‌ಫೋರ್ಸ್ ಅಕಾಡಮಿಯಲ್ಲಿ ಪದವಿ ಪಡೆದಿದ್ದರು. ರಾಷ್ಟ್ರೀಯ ರಕ್ಷಣಾ ಅಕಾಡಮಿಯ ಹಳೆ ವಿದ್ಯಾರ್ಥಿಯಾಗಿರುವ ದೀಪಕ್‌ ಶ್ರೇಷ್ಠ ಪೈಲಟ್ ಪ್ರಶಸ್ತಿಗೂ ಭಾಜನರಾಗಿದ್ದರು.

"ರನ್‌ವೇ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿತ್ತು. ಲ್ಯಾಂಡಿಂಗ್‌ಗೆ ಮೊದಲು ಹವಾಮಾನ ಕೆಟ್ಟದ್ದಾಗಿದೆ ಎಂದು ಪೈಲಟ್ ಎಚ್ಚರಿಕೆ ನೀಡಿದ್ದರು. ಅವರು ಎರಡು ಬಾರಿ ಸುರಕ್ಷಿತ ಲ್ಯಾಂಡಿಂಗ್‌ಗೆ ಯತ್ನಿಸಿದ್ದರು. ಆದರೆ, ಹಿಡಿತ ತಪ್ಪಿಹೋಯಿತು. ವಿಮಾನ ರನ್‌ವೇನಿಂದ ಜಾರಿಹೋಗಿದ್ದು, ಎರಡು ತುಂಡಾಗಿ ಬಿದ್ದಿತ್ತು.ಹಲವರು ಅಪಾಯದಿಂದ ಪಾರಾಗಿರುವುದು ಒಂದು ಪವಾಡವಾಗಿದೆ'' ಎಂದು ಯಾವುದೆ ಗಾಯವಿಲ್ಲದೆ ಪಾರಾಗಿರುವ ಪ್ರಯಾಣಿಕ ಇಬ್ರಾಹಿಂ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News