ಮೇ 7ರ ಬಳಿಕ ಕೋಝಿಕ್ಕೋಡ್ ರನ್ ವೇಯಲ್ಲಿ 100 ವಿಮಾನಗಳು ಲ್ಯಾಂಡ್ ಆಗಿವೆ: ಕೇಂದ್ರ ಸರಕಾರ

Update: 2020-08-08 09:27 GMT

  ಕೋಝಿಕೋಡ್, ಆ.,8: ಶುಕ್ರವಾರ ಸಂಭವಿಸಿದ ದುರಂತದಲ್ಲಿ ಇಬ್ಬರು ಪೈಲಟ್‌ಗಳು ಸಹಿತ 18 ಜರ ಸಾವಿಗೆ ಕಾರಣವಾಗಿರುವ ಟೇಬಲ್‌ಟಾಪ್ ಕೋಝಿಕೋಡ್ ವಿಮಾನ ನಿಲ್ದಾಣದ ಪರಿಸ್ಥಿತಿಯ ಕುರಿತಂತೆ ಇರುವ ನಕಾರಾತ್ಮಕ ವರದಿಯನ್ನು ಅಲ್ಲಗಳೆದ ಕೇಂದ್ರ ವಿದೇಶಾಂಗ ಖಾತೆಯ ರಾಜ್ಯ ಸಚಿವ ಮುರಳೀಧರನ್, ವಿದೇಶಗಳಲ್ಲಿ ಕೊರೋನದಿಂದಾಗಿ ಸಿಲುಕಿಕೊಂಡಿರುವ ಭಾರತೀಯರನ್ನು ತಾಯ್ನಿಡಿಗೆ ಕರೆ ತರುವ ಕೇಂದ್ರ ಸರಕಾರದ ವಂದೇ ಮಾತರಂ ಮಿಷನ್ ಅಡಿ ಮೇ 7ರ  ಬಳಿಕ ಕೋಝಿಕ್ಕೋಡ್ ವಿಮಾನ ನಿಲ್ದಾಣದಲ್ಲಿ 100ಕ್ಕೂ ಅಧಿಕ ವಿಮಾನಗಳು ಲ್ಯಾಂಡ್ ಆಗಿವೆ ಎಂದು ಹೇಳಿದ್ದಾರೆ.

"ನಾನು ವಿಮಾನ ನಿಲ್ದಾಣ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಕೋಝಿಕ್ಕೋಡ್‌ನಲ್ಲಿ ಭಾರೀ ಮಳೆ ಸುರಿಯುತ್ತಿತ್ತು. ಮೊದಲ ಲ್ಯಾಂಡಿಂಗ್ ಪ್ರಯತ್ನ ವಿಫಲವಾಗಿತ್ತು. ಎರಡನೇ ಬಾರಿ ಲ್ಯಾಂಡಿಂಗ್ ಮಾಡುತ್ತಿದ್ದಾಗ ವಿಮಾನ ಎಡಭಾಗಕ್ಕೆ ಜಾರಿತ್ತು. ಒಂದು ಬದಿಗೆ ಹೊಡೆದ ವಿಮಾನ ಎರಡು ಹೋಳಾಯಿತು'' ಎಂದು ಮುರಳೀಧರನ್ ತಿಳಿಸಿದ್ದಾರೆ.

"ರನ್ ವೇ ಸ್ಥಿತಿಗತಿಯ ಬಗೆಗಿನ ಈ ಹಿಂದಿನ ವರದಿಯು ನಿನ್ನೆಯ ಘಟನೆಗೆ ಕಾರಣವಾಗಿಲ್ಲ ಎಂದು ನಿನ್ನೆಯೇ ನಾಗರಿಕ ವಿಮಾನಯಾನ ಸಚಿವರು ಸ್ಪಷ್ಟಪಡಿಸಿದ್ದರು. ನಮ್ಮ ದೇಶದಲ್ಲಿ ಹಲವು ಟೇಬಲ್‌ಟಾಪ್ ಏರ್‌ಪೋರ್ಟ್ ಗಳಿವೆ. ಅಂತಹ ವಿಮಾನ ನಿಲ್ದಾಣಗಳನ್ನು ಮುಂದುವರಿಸಬೇಕೇ ಎನ್ನುವುದು ದೊಡ್ಡ ಪ್ರಶ್ನೆ. ಆದರೆ ಮೇ 7ರ ಬಳಿಕ ವಂದೇ ಮಾತರಂ ಮಿಶನ್ ಅಡಿ ನೂರಕ್ಕೂ ಅಧಿಕ ವಿಮಾನಗಳು ಕೋಝಿಕೋಡ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ ಎಂದು ನೆನಪಿಸಲು ಬಯಸುವೆ'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News