ಮುಕೇಶ್ ಅಂಬಾನಿ ಈಗ ಜಗತ್ತಿನ 4ನೇ ಅತಿ ಶ್ರೀಮಂತ

Update: 2020-08-08 16:44 GMT

ನ್ಯೂಯಾರ್ಕ್, ಆ. 8: ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮುಕೇಶ್ ಅಂಬಾನಿಯ ಸಂಪತ್ತು ಈಗ 80.6 ಬಿಲಿಯ ಡಾಲರ್ (ಸುಮಾರು 6.04 ಲಕ್ಷ ಕೋಟಿ ರೂಪಾಯಿ)ಗೆ ಏರಿಕೆಯಾಗಿದ್ದು, ಅವರು ಜಗತ್ತಿನ ನಾಲ್ಕನೇ ಅತಿ ಶ್ರೀಮಂತ ವ್ಯಕ್ತಿಯಾಗಿದ್ದಾರೆ ಎಂದು ಬ್ಲೂಮ್‌ಬರ್ಗ್ ಬಿಲಿಯನೇರ್ ಇಂಡೆಕ್ಸ್ ತಿಳಿಸಿದೆ. ತನ್ನ ಸಂಪತ್ತಿಗೆ ಈ ವರ್ಷ ಅವರು 22 ಬಿಲಿಯ ಡಾಲರ್ (ಸುಮಾರು 1.65 ಲಕ್ಷ ಕೋಟಿ ರೂಪಾಯಿ) ಸೇರಿಸಿದ್ದಾರೆ.

ಈ ಮೂಲಕ ಅವರು ಫ್ರಾನ್ಸ್‌ನ ಎಲ್‌ವಿಎಮ್‌ಎಚ್ ಮೋಟ್ ಹೆನಸಿ ಲೂಯಿಸ್ ವೂಯಿಟನ್ ಎಸ್‌ಇ ಎಂದ ಕಂಪೆನಿಯ ಮಾಲೀಕ ಬರ್ನಾರ್ಡ್ ಅರ್ನೊ ಅವರನ್ನು ಹಿಂದಿಕ್ಕಿದ್ದಾರೆ.

ಈಗಾಗಲೇ ಭಾರತದ ಅತಿ ಶ್ರೀಮಂತ ವ್ಯಕ್ತಿಯಾಗಿರುವ ಅಂಬಾನಿ, ಇತ್ತೀಚಿನ ವಾರಗಳಲ್ಲಿ ಎಲಾನ್ ಮಸ್ಕ್, ವಾರನ್ ಬಫೆಟ್ ಹಾಗೂ ಆಲ್ಫಾಬೆಟ್ ಇಂಕ್‌ನ ಸಹ ಸಂಸ್ಥಾಪಕರಾದ ಸರ್ಗಿ ಬ್ರಿನ್ ಮತ್ತು ಲ್ಯಾರಿ ಪೇಜ್ ಮುಂತಾದ ಕೆಲವು ಅತಿ ಶ್ರೀಮಂತರನ್ನು ಹಿಂದಿಕ್ಕಿದ್ದಾರೆ.

ಕೊರೋನ ವೈರಸ್ ಹಿನ್ನೆಲೆಯಲ್ಲಿ ಎದುರಾದ ತೈಲ ಬೇಡಿಕೆಯಲ್ಲಿನ ಕುಸಿತದಿಂದಾಗಿ ಮಾರ್ಚ್ ತಿಂಗಳಲ್ಲಿ ಅದು ಕೊಂಚ ಹಿನ್ನಡೆಯನ್ನು ಕಂಡಿತ್ತಾದರೂ, ಬಳಿಕ ಅದರ ಶೇರುಗಳ ಮೌಲ್ಯ ದುಪ್ಪಟ್ಟಿಗಿಂತಲೂ ಹೆಚ್ಚಾಗಿದೆ. ಫೇಸ್‌ಬುಕ್ ಮತ್ತು ಗೂಗಲ್ ಸೇರಿದಂತೆ ಹಲವು ಕಂಪೆನಿಗಳು ರಿಲಯನ್ಸ್‌ನ ಡಿಜಿಟಲ್ ಘಟಕದಲ್ಲಿ ಬಿಲಿಯಗಟ್ಟಳೆ ಡಾಲರ್ ಹೂಡಿಕೆ ಮಾಡಿರುವುದು ಇದಕ್ಕೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News