‘ಪ್ರಚಂಡ’ರ ಅಂಗರಕ್ಷಕರಿಗೆ ಕೊರೋನ ವೈರಸ್ ಸೋಂಕು: ಪ್ರಧಾನಿ ಕೆ.ಪಿ. ಶರ್ಮ ಒಲಿ ನಿರಾಳ!

Update: 2020-08-08 16:56 GMT

ಕಠ್ಮಂಡು (ನೇಪಾಳ), ಆ. 8: ನೇಪಾಳದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ನಾಯಕ ಹಾಗೂ ದೇಶದ ಪ್ರಧಾನಿ ಕೆ.ಪಿ. ಶರ್ಮ ಒಲಿಯ ಪ್ರಧಾನ ಎದುರಾಳಿ ಪುಷ್ಪ ಕಮಲ್ ದಹಲ್ ‘ಪ್ರಚಂಡ’ರ ಆರು ಅಂಗರಕ್ಷಕರು ಕೊರೋನ ವೈರಸ್ ಸೋಂಕಿಗೆ ಒಳಗಾಗಿರುವುದು ಪ್ರಧಾನಿಗೆ ವರದಾನವಾಗಿ ಮೂಡಿಬಂದಿದೆ. ಕೊರೋನ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸುವ ಕ್ರಮವಾಗಿ ಪ್ರಚಂಡರ ನಿವಾಸವನ್ನು ಸೀಲ್‌ಡೌನ್ ಮಾಡಿರುವುದರಿಂದ ಅವರನ್ನು ಸದ್ಯ ಪ್ರಧಾನಿ ಭೇಟಿ ಮಾಡಬೇಕಾಗಿಲ್ಲ. ಹಾಗಾಗಿ, ಪಕ್ಷದ ನಾಯಕರಿಂದ ಬಂಡಾಯ ಎದುರಿಸುತ್ತಿದ್ದ ಕೆ.ಪಿ. ಶರ್ಮ ಒಲಿಗೆ ಉಸಿರಾಡಲು ಸ್ವಲ್ಪ ಸಮಯಾವಕಾಶ ಸಿಕ್ಕಂತಾಗಿದೆ.

ಪ್ರಚಂಡ ಇತ್ತೀಚಿನ ದಿನಗಳಲ್ಲಿ ಪ್ರಧಾನಿ ಮೇಲಿನ ತನ್ನ ದಾಳಿಗಳನ್ನು ಹೆಚ್ಚಿಸಿದ್ದಾರೆ ಹಾಗೂ ಅತ್ಯಂತ ಕೆಟ್ಟ ಪರಿಸ್ಥಿತಿಯೊಂದನ್ನು ಎದುರಿಸಲು ಸಿದ್ಧವಾಗುವಂತೆ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಇದೇ ಸಂದೇಶವನ್ನು ಪ್ರಚಂಡ, ಪ್ರಧಾನಿ ಒಲಿಯ ಪ್ರತಿನಿಧಿ ಹಾಗೂ ಸಂಸತ್ತಿನಲ್ಲಿ ನೇಪಾಳ ಕಮ್ಯುನಿಸ್ಟ್ ಪಕ್ಷದ ಉಪನಾಯಕ ಸುಭಾಸ್ ನೆಮ್‌ಬಂಗ್‌ಗೆ ಗುರುವಾರ ನೀಡಿದ್ದಾರೆ.

ಈ ಎಲ್ಲ ಬೆಳವಣಿಗೆಗಳು ನಡೆದಿರುವುದು ಕಠ್ಮಂಡುವಿನ ಹೊರವಲಯದಲ್ಲಿರುವ ಖುಮಲ್ತರ್‌ನ ಕೆಲವು ಭಾಗಗಳನ್ನು ಅಧಿಕಾರಿಗಳು ಸೀಲ್‌ಡೌನ್ ಮಾಡುವ ಮೊದಲು. ಇಲ್ಲಿ ಪ್ರಚಂಡರ ನಿವಾಸವಿದೆ.

ಪ್ರಚಂಡರ ಭದ್ರತೆಗಾಗಿ ನಿಯೋಜಿಸಲ್ಪಟ್ಟಿರುವ ಆರು ಅಂಗರಕ್ಷಕರು ಈಗ ಕೊರೋನ ವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಆದರೆ, ಕುಟುಂಬದ ಯಾವುದೇ ಸದಸ್ಯರಲ್ಲಿ ಹಾಗೂ ಪ್ರಚಂಡರ ಕಾರ್ಯಾಲಯದ ಯಾವುದೇ ಉದ್ಯೋಗಿಗಳಲ್ಲಿ ಸೋಂಕು ಪತ್ತೆಯಾಗಿಲ್ಲ ಎಂದು ಪ್ರಚಂಡರ ಪುತ್ರಿ ಗಂಗಾ ಫೇಸ್‌ಬುಕ್‌ನಲ್ಲಿ ಘೋಷಿಸಿದ್ದಾರೆ.

ಇದರ ಬೆನ್ನಿಗೇ, ಪ್ರಚಂಡರ ನಿವಾಸದ ಸುತ್ತಮುತ್ತಲಿನ ಸ್ಥಗಳಗಳನ್ನು ಸೀಲ್‌ಡೌನ್ ಮಾಡಲಾಗಿದೆ.

ಪಕ್ಷದ ಸಭೆಗಳಿಂದ ದೂರವುಳಿಯಲು ಪ್ರಯತ್ನಿಸುತ್ತಿರುವ ಪ್ರಧಾನಿಗೆ ಈ ಬೆಳವಣಿಗೆ ಪೂರಕವಾಗಿ ಮೂಡಿಬಂದಿದೆ ಎಂದು ವೀಕ್ಷಕರು ಅಭಿಪ್ರಾಯಪಡುತ್ತಾರೆ. ಕಳೆದ ತಿಂಗಳ ಅಂತ್ಯದಲ್ಲಿ, ಪ್ರಧಾನಿ ಒಲಿ ಸಭೆಯನ್ನು ಮುಂದೂಡಿದರೂ, ಪಕ್ಷದ ಸ್ಥಾಯಿ ಸಮಿತಿಯು ಪ್ರಧಾನಿಯ ಅನುಪಸ್ಥಿತಿಯಲ್ಲೇ ಸಭೆಯನ್ನು ನಡೆಸಿತ್ತು.

ಒಲಿ ಪಕ್ಷ ಒಡೆಯುವರೇ?

ಪ್ರಧಾನಿ ಕೆ.ಪಿ. ಶರ್ಮ ಒಲಿ ಬಣವು ಅವರ ಹಳೆಯ ಪಕ್ಷ ಸಿಪಿಎನ್-ಯುಎಂಎಲ್‌ನ್ನು ಸದ್ದಿಲ್ಲದೆ ಚುನಾವಣಾ ಆಯೋಗದಲ್ಲಿ ಮರು ನೋಂದಾಯಿಸಿರಬಹುದು ಎಂಬ ವರದಿಗಳ ಹಿನ್ನೆಲೆಯಲ್ಲಿ, ಅವರ ಎದುರಾಳಿ ಪ್ರಚಂಡ ಕಳೆದ ತಿಂಗಳು ತನ್ನ ನಿಲುವನ್ನು ಬದಲಾಯಿಸಿದ್ದಾರೆ. ಪ್ರಧಾನಿ ರಾಜೀನಾಮೆ ನೀಡಬೇಕೆಂದು ಪ್ರಚಂಡ ಒತ್ತಾಯಿಸುತ್ತಿದ್ದರು.

ಆಡಳಿತಾರೂಢ ನೇಪಾಳ ಕಮ್ಯುನಿಸ್ಟ್ ಪಾರ್ಟಿಯನ್ನು 2018ರಲ್ಲಿ ಪ್ರಧಾನಿ ಒಲಿಯ ಸಿಪಿಎನ್ (ಯೂನಿಫೈಡ್ ಮಾರ್ಕ್ಸಿಸ್ಟ್-ಲೆನಿನಿಸ್ಟ್) ಮತ್ತು ದಹಲ್ ಬಣದ ಸಿಪಿಎನ್ (ಮಾವೋಯಿಸ್ಟ್ ಸೆಂಟರ್) ಪಕ್ಷಗಳ ವಿಲೀನದ ಮೂಲಕ ಸ್ಥಾಪಿಸಲಾಗಿತ್ತು.

ತನಗೆ ಬೇಕಾದ ಸಮಯದಲ್ಲಿ ಪಕ್ಷವನ್ನು ಒಡೆಯಲು ಪ್ರಧಾನಿ ಒಲಿ ಸಿದ್ಧತೆ ನಡೆಸುತ್ತಿದ್ದಾರೆ ಎಂಬುದಾಗಿ ಪ್ರಚಂಡ ಬಣ ಶಂಕಿಸಿದೆ. ಒಂದೋ ಪ್ರಧಾನಿ ಹುದ್ದೇ ಅಥವಾ ಪಕ್ಷದ ಸಹ ಅಧ್ಯಕ್ಷ ಹುದ್ದೆಯನ್ನು ಬಿಟ್ಟುಕೊಡಬೇಕೆಂಬ ಎದುರಾಳಿ ಬಣದ ಬೇಡಿಕೆಯನ್ನು ಅಂಗೀಕರಿಸುವ ಯಾವುದೇ ಇರಾದೆಯನ್ನು ಒಲಿ ಹೊಂದಿಲ್ಲ ಎನ್ನುವುದು ಇತ್ತೀಚೆಗೆ ಅವರ ಎದುರಾಳಿಗಳಿಗೆ ಅರಿವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News