ಸಂತ್ರಸ್ತರಿಗೆ ಮಧ್ಯಂತರ ಪರಿಹಾರ ಘೋಷಿಸಿದ ನಾಗರಿಕ ವಿಮಾನ ಯಾನ ಸಚಿವ

Update: 2020-08-08 17:15 GMT

ಕೋಝಿಕ್ಕೋಡ್, ಆ. 8: ಕೋಝಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ನಾಗರಿಕ ವಿಮಾನ ಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಶನಿವಾರ ತಲಾ 10 ಲಕ್ಷ ರೂಪಾಯಿ ಮಧ್ಯಂತರ ಪರಿಹಾರ ಘೋಷಿಸಿದ್ದಾರೆ.

 ಅಂತರ್‌ರಾಷ್ಟ್ರೀಯ ನಾಗರಿಕ ವಿಮಾನ ಯಾನ ಸಂಘಟನೆಗಳ ಅಂತರ್‌ರಾಷ್ಟ್ರೀಯ ಒಪ್ಪಂದಕ್ಕೆ ಅನುಗುಣವಾಗಿ ದುರಂತದಲ್ಲಿ ಮೃತಪಟ್ಟವರ ಕುಟುಂಬದ ಸದಸ್ಯರು ಪರಿಹಾರ ಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.

ದುರಂತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಸಚಿವ ವಿ. ಮುರಳೀಧರನ್ ಹಾಗೂ ಇತರರೊಂದಿಗೆ ಮಾದ್ಯಮ ಉದ್ದೇಶಿಸಿ ಮಾತನಾಡಿದ ಅವರು, ವಿಮಾನ ದುರಂತದಲ್ಲಿ ಮೃತಪಟ್ಟ ಕುಟುಂಬದ ಸದಸ್ಯರಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದರು. ಅಲ್ಲದೆ, ಗಂಭೀರ ಗಾಯಗಳಾದವರಿಗೆ ತಲಾ 2 ಲಕ್ಷ ರೂ. ಹಾಗೂ ಸಣ್ಣಪುಟ್ಟ ಗಾಯಗಳಾದವರಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದರು.

ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಸೂಕ್ತ ರೀತಿಯಲ್ಲಿ ವಿಮೆ ಹೊಂದಿದೆ. ಪ್ರಯಾಣಿಕರು ಹಾಗೂ ಅವರ ಕುಟುಂಬಗಳೊಂದಿಗೆ ಸೂಕ್ತ ಮಾತುಕತೆ ನಡೆಸಿದ ಬಳಿಕ ಅಂತಾರಾಷ್ಟ್ರೀಯ ವಿಮಾನ ಯಾನ ಸಂಸ್ಥೆಗಳ ಅಂತರ್‌ರಾಷ್ಟ್ರೀಯ ಮಾಂಟ್ರಿಯಲ್ ಒಪ್ಪಂದಕ್ಕೆ ಅನುಗುಣವಾಗಿ ಪರಿಹಾರ ನೀಡಲಾಗುವುದು ಎಂದು ಹರ್ದೀಪ್ ಸಿಂಗ್ ಪುರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News